ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨

ಮನಮಂಥನ

ಎಂದು ಉಸಿರಾಡುತ್ತಲೇ ಹೇಳುತ್ತಿದ್ದಳು. ಆತಂಕದ ಮಿತಿಮೀರಿದ ಒಂದು ಹಂತದಲ್ಲಿ ವಾಸ್ತವಿಕ ಪರಿಜ್ಞಾನವು ಕುರುಡಾಗುತ್ತದೆ. ಈ ಚಿಹ್ನೆಯಿಂದ ಆತಂಕದ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಅಳೆಯಬಹುದು. ಉಮಾಕುಮಾರಿಯ ಆತಂಕವು ಉಗ್ರವಾಗಿದೆ. ತೀವ್ರ ತಳಮಳದ ಮಟ್ಟಕ್ಕೆ ಏರಿದೆ ಎನ್ನುವುದು ಸ್ಪಷ್ಟವಾಯಿತು.

ಆಕೆಯ ಚಿಕಿತ್ಸೆಯನ್ನು ನುರಿತ ಮನೋವೈದ್ಯರು ಕೈಗೊಂಡರು. ಆತಂಕ ಶಮನ ಮಾಡುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿದರು. ಅಲ್ಲದೆ, ತಾಯಿ ತಂದೆಯರನ್ನೂ ಪ್ರತ್ಯೇಕವಾಗಿ ಕಂಡು 'ವಿಷಯ ಹೀಗಿದೆ. ಮೊಂಡು ಮೊಂಡಾಗಿ ನೀವೇನಾದರೂ ಅಂದು ಆಡಿ ಶಿಕ್ಷಿಸಹೋದರೆ ಅಥವಾ ಮೂದಲಿಸಿದರೆ, ಆಕೆಯ ಮನಸ್ಸು ಮುಂದೆ ಪಲ್ಲಟವೇ ಆಗಬಹುದು. ಘೋರ ರೂಪಿನ ಇತರ ಮಾನಸಿಕ ರೋಗಗಳು ತೊಡರಿಕೊಳ್ಳುತ್ತವೆ.' ಎಂದು ಒತ್ತಾಯಪೂರ್ವಕವಾಗಿ ಹೇಳಿದರು.

ಆರೆಂಟು ತಿಂಗಳುಗಳು ಚಿಕಿತ್ಸೆಯು ಆದನಂತರ, ಉಸಿರಾಟದ ಕಾಟವು ನಿರ್ನಾಮವಾಯಿತು. ಆ ವೇಳೆಗೆ ಕಂಕಣ ಬಲವೂ ಕೂಡಿ ಬಂತು. ಈಗ, ಅಂದರೆ ಒಂದೆರಡು ವರ್ಷಗಳಾದ ಮೇಲೆ ಶ್ರೀಮತಿ ಉಮಾಕುಮಾರಿ, B.Sc., B.Ed. ನೆಮ್ಮದಿಯಿಂದಿದ್ದಾಳೆ. ಆದರೆ ಪುಟ್ಟ ಆತಂಕವೊಂದು ಭಾದಿಸುತ್ತಲೇ ಇದೆ.

'ನನ್ನ ಚೊಚ್ಚಲ ಮಗನಿಗಿಂತ ಸುಂದರವಾದ ಮಗುವು ಪ್ರಪಂಚದಲ್ಲಿ ಎಲ್ಲಿಯಾದರೂ ಇರಲು ಸಾಧ್ಯವೇ?' ಎನ್ನುವ ಆರೋಗ್ಯಕರವಾದ ಆತಂಕ.

೩. ಶ್ವಾಸಕೋಶವು ಬೆಲೂನ್ ಆಗಿಬಿಟ್ಟಿದೆ

'ತತ್‌ಕ್ಷಣ, ಬಾರೋ; ನಮ್ಮ ಶೀಲಾ ತುಂಬಾ ನರಳುತ್ತಾ ಇದ್ದಾಳೆ. ಕಾರ್ ಕಳಿಸಿದ್ದೀನಿ' ಎಂದು ನನ್ನ ಗೆಳೆಯ ಆಬ್ರಹಂ ಫೋನ್ ಮಾಡಿದ. ಮಧ್ಯಾಹ್ನ ೨ರ ಸಮಯ. ದೆವ್ವಗಳೂ, ದೋಭಿಗಳೂ ಮತ್ತು ಡಾಕ್ಟರುಗಳೂ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಸಮಯ. ಅಂತಹ ಅಲ್ಪ ವಿರಾಮದಲ್ಲೇ ಇಂತಹ ತುರ್ತು ಕರೆಗಳು, ತುಂಬಾ ಆಪ್ತಮಿತ್ರ ಅಬ್ರಹಂ; ಆದಕಾರಣ ಅವನ ಕರೆಗೆ ಓ ಕೊಡಬೇಕು. ಮಿಲಿಯಾಧೀಶ್ವರ ಅವ, ಆ ಕಾರಣದಿಂದಲೂ ಅಗತ್ಯವಾಗಿ ಹೋಗಬೇಕು. ತುಂಬಿದ ಮನೆ ಅವನದು. ಆ ಮನೆಯಿಂದ ಯಾರಾದರೂ ಒಬ್ಬಿಬ್ಬರು ಪ್ರತಿದಿನವೂ ದವಾಖಾನೆಯಲ್ಲಿ ಹಾಜರಾಗುತ್ತಿದ್ದರು. ಬಿಡುಗೈ ದೊರೆ, ಆಬ್ರಹಂ; ಮನೆಯಲ್ಲಿ ಆಳುಕಾಳು ಮೊದಲುಗೊಂಡು ಯಾರಿಗೆ ಬೇನೆ ಬಂದರೂ ಚಿಕಿತ್ಸೆಗೆ ಕಳುಹಿಸುತ್ತಿದ್ದ.