ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೯೪
ಮನಮಂಥನ

ಕುದಿಯುವ ಸಾರಿಗೆ ಉಪ್ಪನ್ನು ಹಾಕಿದ್ದೇನೆಯೋ ಇಲ್ಲವೋ ಎಂಬ ಸಂದೇಹವು ಮೂಡಿ, ಎರಡನೆಯ ಬಾರಿ ಉಪ್ಪನ್ನು ಹಾಕುತ್ತಾಳೆ. 'ಕತ್ತೆ ಬೆಳೆದ ಹಾಗೆ ಬೆಳೆದಿದ್ದೀಯೆ? ಬಣ್ಣದ ಬೀಸಣಿಗೆಯ ತರಹ ವಾಲಾಡ್ತಿ; ಒಂದು ಸಾರು ಮಾಡುವುದಕ್ಕೆ ಬರುಲ್ಲವಲ್ಲೇ? ಅಷ್ಟನ್ನಾದರೂ ನಿಮ್ಮಮ್ಮ ಕಲಿಸಲಿಲ್ಲವೇ?' ಎಂದು ಅತ್ತೆ ಅನ್ನುತ್ತಾಳೆ. ಗೃಹ ಕೃತ್ಯದ ಎಂಟು ಹತ್ತು ವಿಷಯಗಳಲ್ಲಿ ಮೇಲಿಂದ ಮೇಲೆ ಹೀಗಾದರೆ ಸೊಸೆಯ ಮನಸ್ಸಿನಲ್ಲಿ ಕಸಿವಿಸಿಯಾಗುತ್ತದೆ. 'ನನಗೇನಾದರೂ ಮಂಕು ಬಡಿದಿದೆಯೇ? ಅತ್ತೆ ಅನ್ನುವುದೊಂದಲ್ಲ. ನಾನು ಮಾಡುವುದು ಒಂದಲ್ಲ. ಎಷ್ಟೇ ಎಚ್ಚರವನ್ನು ವಹಿಸಿದರೂ, ಹೀಗೆ ತಪ್ಪಾಗಬೇಕಾದರೆ ನನ್ನ ಬುದ್ಧಿಗೆ ಏನೋ ಆಗುತ್ತಿರಬೇಕು ಹುಟ್ಟೋ ಬೆಪ್ಪೋ ಹಿಡಿದುಬಿಡುತ್ತೇನೋ ಎಂದು ಕಾತರಳಾಗುತ್ತಾಳೆ.

ಹುಚ್ಚು ಹಿಡಿದು ಬಿಡುತ್ತೇನೋ ಎನ್ನುವ ಯೋಚನೆಯು ಎಲ್ಲರಲ್ಲಿಯೂ ಒಂದಲ್ಲ ಒಂದು ಕಷ್ಟದ ಸಮಯದಲ್ಲಿ ಉಂಟಾಗುತ್ತದೆ. ಮನಸ್ಸು ಪಲ್ಲಟವಾಗುತ್ತಿದೆಯೋ ಎನ್ನುವ ಯೋಚನೆಯು ಮೂಡಿದರೆ, ಅಂತಹವನ ಮನಸ್ಸು ಸ್ವಸ್ಥವಾಗಿದೆ ಎನ್ನುವುದರ ಗುರುತು. ದಿಟವಾಗಿಯೂ ಹುಚ್ಚು ಹಿಡಿದವನಿಗೆ, 'ನನಗೇನೂ ಆಗಿಲ್ಲ. ಆದರೆ ನನ್ನ ನಡವಳಿಕೆಯನ್ನು ಕಂಡು ಎಲ್ಲರೂ ಬೈಯ್ಯುತ್ತಾರೆ, ಹೀಯಾಳಿಸುತ್ತಾರೆ' ಎನ್ನಿಸುತ್ತದೆ.

ಐನ್‌ಸ್ಟೈನ್‌ ಮಹಾಶಯರು ಆಗಿಂದಾಗ್ಗೆ ಒಂದು ದ್ವಿಪಂಜ್ಞೆಯನ್ನು ನುಡಿಯುತ್ತಿದ್ದರು.

A thought that some-time makes me hazy Am I or are the others crazy?

ಈ ತೆರನ ಯೋಚನೆಯು ಮೂಡಿದರೆ, ಅಂತಹವನ ಮನಸ್ಸು ಆರೋಗ್ಯ ಸ್ಥಿತಿಯಲ್ಲಿದೆ, ಸುಸೂತ್ರವಾಗಿ ಕೆಲಸವನ್ನು ಮಾಡುತ್ತಿದೆ ಎಂದವನು ಧೈರ್ಯದಿಂದಿರ ಬಹುದು.

ಮಾನಸಿಕ ರೋಗಗಳನ್ನು ಕುರಿತು ಪುಸ್ತಕವನ್ನು ಓದಿದ ಮೇಲೆ, ನನಗೂ Half crack ಏನಾದರೂ ತರಹ ಆಗುತ್ತಿದೆಯೋ ಎನ್ನಿಸಬಹುದು. ಹೀಗನ್ನಿಸಿದರೆ, ನಿಮ್ಮ ಮನಃಸ್ವಾಸ್ಥ್ಯ ಆರೋಗ್ಯವಾಗಿದೆ ಎಂದು ನೆಮ್ಮದಿಯಿಂದಿರಬಹುದು. ಇದನ್ನು ಶ್ರಮವಹಿಸಿ ಬರೆಯುವಾಗ, ನನಗೂ ಒಮ್ಮೊಮ್ಮೆ ಹಾಗೆ ಅನ್ನಿಸುತ್ತಿತ್ತು, ಅನ್ನಿ ಆದರೆ ಮನಸ್ಸು ಹಳಿ ತಪ್ಪಲಿಲ್ಲ.