೪೧೩
ಸಂಬಂಧಿಸಿದುದವು. ಧಾರಣ ಚಿತ್ತವನ್ನು ಅಥವಾ ಮನಸ್ಸನ್ನು ಒಂದು ಗುರಿಯತ್ತ ಸ್ಥಿರವಾಗಿ ನಿಲ್ಲಿಸುವುದು.
ಧ್ಯಾನ=ಧಾರಣಾಸ್ಥಿತಿಗೆ, ಇತರ ಚಿತ್ತವೃತ್ತಿಗಳು, ಮನಸ್ಸಿನ ಆಲೋಚನೆಗಳು, ಅಡ್ಡಬಂದು ಕುಂದುತರದಂತೆ ಅಭ್ಯಾಸ ಮಾಡುವುದು.
ಸಮಾಧಿ-ಧ್ಯಾನವನ್ನು ಮಾಡುತ್ತಿದ್ದೇನೆ ಎಂಬ ಅರಿವೂ ನಾಶವಾಗಿ, ಮನಸ್ಸು ಶೂನ್ಯವಾಗುವುದು. ಆಗ ಅಲೌಕಿಕವಾದ ಯಾವುದೋ ಪ್ರಜ್ಞೆಯು ಆನಂದಮಯವಾಗಿ ಸತ್ಯವಾಗಿರುತ್ತದೆಯಂತೆ.
ಯೋಗಾಂಗಳಾದ ಈ ಎಂಟರ ವಿವರಣೆಯನ್ನು ಮತ್ತು ಅವುಗಳಿಂದ ಲಭಿಸುವ ಪ್ರಯೋಜನವನ್ನೂ, ಅವುಗಳಿಂದ ಸಮಾಧಿಸ್ಥಿತಿಗೆ ಹೇಗೆ ಏರಬಹುದೆಂಬುದನ್ನೂ, ಮುಂದಿನ ಶ್ಲೋಕಗಳಲ್ಲಿ ವಿವರಿಸಲಾಗಿದೆ. ಆಸಕ್ತಿ, ಇದ್ದವರು ಯೋಗಸೂತ್ರಗಳನ್ನು ವ್ಯಾಸಂಗ ಮಾಡಬೇಕು.
ಪ್ರಕೃತ, ವಯಸ್ಸಿನ ಏರುಪೇರು, ಮತ್ತು ಸ್ವಾಸ್ಥ್ಯತೆ, ಇವುಗಳನ್ನು ಗುರಿಯಾಗಿರಿಸಿಕೊಂಡು ಮನಸ್ಸಿನ ವಿಶ್ಲೇಷಣೆಯನ್ನು ಪತಂಜಲಿ ಮಹರ್ಷಿಗಳು ಹೇಗೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಯತ್ನಿಸಲಾಗಿದೆ.
III. ವಿಭೂತಿ ಪಾದ
ಮೂರನೆಯ ಈ ಭಾಗದಲ್ಲಿ ಧಾರಣ, ಧ್ಯಾನ, ಮತ್ತು ಸಮಾಧಿ ಸ್ಥಿತಿಗಳನ್ನು ವಿವರಿಸಲಾಗಿದೆ. ಮತ್ತು ಈ ಮೂರೂ ಚಿತ್ತದ ಸ್ಥಿತಿಗಳ ಸಮೂಹವನ್ನು 'ಸಂಯಮ' ಎಂದು ಕರೆಯಲಾಗಿದೆ. ಸಂಯಮವು ಯಾವುದಾದರೂ ಒಂದು ವಿಷಯ ಅಥವಾ ವಸ್ತುವಿನಲ್ಲಿ ಕೇಂದ್ರೀಕರಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳೂ, ಅಂದರೆ ಅಸಾಧಾರಣವಾದ ಪರಿಣಾಮಗಳನ್ನು ವಿಶದೀಕರಿಸಿದೆ.
ಮನಸ್ಸನ್ನು ಅಭ್ಯಾಸದಿಂದ, ಹಾಗೂ ವೈರಾಗ್ಯದಿಂದ ಹದಗೊಳಿಸಿದರೆ ಅನಂತರ ಮನಸ್ಸು ವಕ್ರವಕ್ರವಾಗಿ, ಚಂಚಲವಾಗಿ ವರ್ತಿಸದೆ ನೇರವಾಗಿ ಇಷ್ಟವಾದ ಅಥವಾ ಸಂಕಲ್ಪಿಸಿದ ಗುರಿಯತ್ತ ಸುಲಭವಾಗಿ ಸಾಗುತ್ತದೆ. ಹೀಗೆ ಮನಸ್ಸೆಂಬ ಶಕ್ತಿಯನ್ನು ಅಭಿವೃದ್ಧಿಸಿ ನೇರ ನಡಸಿದರೆ, ಅಸಾಧಾರಣವಾದ ಫಲಗಳು ದೊರಕುತ್ತವೆ. ವಿಭೂತಿ ಪಾದದ ಸಾರಾಂಶವಿದು.
ದೇಶಬಂಧ ಚಿತ್ತಸ್ಯ ಧಾರಣಾ