ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨

ಮನಮಂಥನ

೫. ಶ್ವಾಸಕ್ಕೆ ತಗಲುವ ಆತಂಕ

ಮನಸ್ಸಿನಲ್ಲುಂಟಾದ ಆತಂಕವು ಮನಸ್ಸನ್ನು ಹೇಗೆ ಕಾಡುತ್ತದೆಯೋ ಅದನ್ನು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿದ್ದಾರೆ. ಆತಂಕವು ಅತಿಯಾದಗ, ಅದನ್ನು ಶಮನ ಮಾಡಲು, ಪ್ರಕೃತಿಯು ಒಂದು ಉಪಾಯವನ್ನು ಕಂಡುಹಿಡಿದಿದೆ. ದೇಹದ ಅಂಗಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ, ಆ ಅಂಗದ ಕಾರ್ಯನಿರ್ವಹಣೆಯಲ್ಲಿ ಆತಂಕವು ಅವತರಿಸುವಂತೆ ಮಾಡುವುದೇ ಪ್ರಕೃತಿಯ ಒಂದು ಉಪಾಯ. ಆಗ ಅಂಗದ ಕಾಟವು ಕಾಡುತ್ತದೆ. ಆದರೂ ಆ ಅಂಗವು, ಅದರ ಕೆಲಸವು, ಕಣ್ಣಿಗೆ ಗೋಚರವಾಗಿರುತ್ತದೆ. ಅವ್ಯಕ್ತ ಕಾರಣಗಳಿಂದ ಉದ್ಭವಿಸಿದ ಆತಂಕವು ಅಂಗಗಳಲ್ಲಿ ವ್ಯಕ್ತವಾದರೆ, ಆತಂಕದ ತೀಕ್ಷ್ಮತೆಯು ಕಡಿಮೆಯಾಗುತ್ತದೆ. ಆದುದರಿಂದಲೇ ಪ್ರಕೃತಿಯ ಇದೊಂದು ಉಪಾಯ, ಆತಂಕಶಮನಕ್ಕೆ.

ಇಂತಹ ಆತಂಕಗಳು ಪೌಗಂಡ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಬರುತ್ತವೆ. ಆ ವಯಸ್ಸಿನಲ್ಲಿ ದೇಹ ಮತ್ತು ಮನಸ್ಸು, ಇವೆರಡೂ ತಾಯ್ತನ ಅಥವಾ ತಂದೆಯ ಹೊಣೆಯನ್ನು ವಹಿಸಿಕೊಳ್ಳಲು, ತೀವ್ರ ಮಾರ್ಪಾಡುಗಳನ್ನು ಮಾಡಿಕೊಂಡು ಅಣಿಯಾಗಬೇಕು. ಅಂತಹ ಸಂಧಿಕಾಲದಲ್ಲಿ, ಇಡೀ ವ್ಯಕ್ತಿಯ ಗಮನವು ಜೀವನದ ಪೂರ್ಣ ಹೊಣೆಯತ್ತ ಸೆಳೆಯಲ್ಪಟ್ಟಿರುತ್ತದೆ. ಆತಂಕವು ಆಗ ಕಾಲು ಹಾಕಿಕೊಳ್ಳುವುದು ಸುಲಭ.

ಉಮಾಕುಮಾರಿಗೆ, ತನ್ನ ಮನೆಯವರ ಅಜ್ಞಾನದಿಂದ, ಆತಂಕವು ಬಲ ಗೊಂಡಿತು. ಶೀಲಾಳ ಆತಂಕವು ಶಮನವಾದ ರೀತಿಯನ್ನು ತಿಳಿದಾಯಿತು. ಬಾವಿ ಕಟ್ಟೆಯ ಸೈತಾನ್ ಆಳಮನಸ್ಸಿನ ಹಗೇವುಗಳಲ್ಲಿ ಮನೆ ಮಾಡಕೊಂಡು ಬೀಬಿಯ ಕತ್ತನ್ನು ಅದುಮಲಾರಂಭಿಸಿದ್ದನ್ನೂ ನೋಡಿದ್ದಾಯಿತು.

ಶ್ವಾಸಕಾರ್ಯದ ಮೇಲೆ ಆತಂಕವು ಎರಗಿ ಬೀಳುವುದೇಕೆ ? ಮತ್ತು ಹೇಗೆ ?

ಮನುಷ್ಯನು ಸತ್ತಿದ್ದಾನೆಯೇ ಇಲ್ಲವೆ ಎಂಬುದನ್ನು ನಿರ್ಧರಿಸಲು ಹೊಳೆಯುವ ಗಾಜನ್ನು ಮೂಗಿನ ಹೊಳ್ಳೆಗಳ ಬಳಿ ಇಡುತ್ತಿದ್ದರು. ಉಸಿರಾಡುತ್ತಿದ್ದರೆ, ಆಗ ಉಸಿರಿನ ಆವಿಯು ಗಾಜಿನ ಮೇಲೆ ಮಂಜುಗಟ್ಟುತ್ತಿತ್ತು. ಅದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ತುಂಬಾ ಕ್ಷೀಣವಾಗಿರುವ ಕಾರಣ ಉಸಿರಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸದೇ ಇದ್ದರೂ, ಗಾಜಿಗೆ ಮಂಜು ಹಿಡಿದರೆ ಉಸಿರಾಡುತ್ತಿದೆ ಎಂದು ಖಚಿತವಾಗುತ್ತಿತ್ತು. ಅಂದರೆ ಉಸಿರು ಕ್ಷೀಣವಾಗಿಯಾದರೂ ಆಡುತ್ತಿದ್ದರೆ ಬದುಕಿದ್ದಾನೆ. ಇಲ್ಲದಿದ್ದರೆ ಸತ್ತ ಎಂದು ತೀರ್ಮಾನಿಸುತ್ತಿದ್ದರು. ಬಾಳು ಸಾವುಗಳನ್ನು