ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೩೫

ನಡೆಯುತ್ತದೆ. ಎಳೆದುಕೊಂಡ ಉಸಿರಿನಿಂದ, ಅಗತ್ಯವಾದಷ್ಟು ಆಕ್ಸಿಜನ್, ಆ ಸ್ಥಿತಿಯಲ್ಲಿ ದೊರಕುವುದಿಲ್ಲ. ಶ್ವಾಸಕೇಂದ್ರಗಳು ಆಗ ಚುರುಕುಗೊಂಡು, ಶ್ವಾಸಕಾರ್ಯವನ್ನು ತ್ವರಿತಗೊಳಿಸಲು ಆಜ್ಞೆಯೀಯುತ್ತವೆ. ದೀರ್ಘವಾದ ಆಕಳಿಕೆಯೇ ಇದರ ಪರಿಣಾಮ.

ಹೇಳಿದ್ದನ್ನೇ ಅವಲಕ್ಷಣವಾಗಿ ಹೇಳುವ ಕಿಸುಬಾಯದಾಸ, ಕೇಳುಗನ ಮನಸ್ಸಿನಲ್ಲಿ ಚಿಟ್ಟುಹಿಡಿಸುತ್ತಾನೆ. ನಾಗರಿಕತೆಯ ಕುರುಹು ಎಂದೆನ್ನಿಸಿಕೊಂಡ ಸಮಾಜದ ಸಭ್ಯ ನಡವಳಿಕೆಯ ಕಾರಣದಿಂದ, ಚಿಟ್ಟು ಹಿಡಿಯುತ್ತಿದ್ದರೂ ಕೇಳಿಸಿಕೊಳ್ಳಲೇಬೇಕು. ಅಂತಹ ಬೇಸರ ಮುತ್ತಿದ ಸಂದರ್ಭಗಳಲ್ಲಿಯೂ ಕುಂಭಕರ್ಣ ಆಕಳಿಕೆಯು ತಾನಾಗಿತಾನೇ ವ್ಯಕ್ತವಾಗುತ್ತದೆ. ಮನಸ್ಸಿಗೆ ಸಮಾಧಾನವನ್ನೂ ತರುತ್ತದೆ, ಒಂದು ಪ್ರಮಾಣದಲ್ಲಿ.

ಬೇಸರವು ಮನಸ್ಸಿನಲ್ಲಿ ತಾತ್ಕಾಲಿಕವಾಗಿರುವ ಪರಿಸ್ಥಿತಿ. ಮನಸ್ಸು ಹೇಗೂ ಚಂಚಲ, ಅಲ್ಲವೇ ! ಅದೂ ಒಂದು ವರವೋ ಏನೋ ? ಬೇಸರವು ಅತಿಯಾದಾಗ ಬೇರೆ ಯಾವುದಾದರೂ ವಿಷಯವು ಮನಸ್ಸನ್ನು ಸೆರೆಹಿಡಿಯುತ್ತದೆ. ಅದೂ ತಾತ್ಕಾಲಿಕವೇ, ಮಕ್ಕಳ ಆಟದಲ್ಲಿದ್ದಂತೆ.

ಆದರೆ ಬಾಳಿನಲ್ಲಿ ಯಾವುದಾದರೂ ನಿರ್ಣಯವನ್ನು ಮಾಡಬೇಕಾದಾಗ, ಆಗು ಹೋಗುಗಳು ಸಮ ಸಮ ಕಾಡುವಾಗ, ನಿರ್ಣಯವು ದುಸ್ಸಾಧ್ಯವಾಗುತ್ತದೆ. ಆಗ ಆತಂಕವು ಸುಡಲಾರಂಭಿಸುತ್ತದೆ. ಆಗಲೂ ಆಕಳಿಕೆಯು ಅವತರಿಸುತ್ತದೆ. ಆದರೆ ಈ ರೀತಿ ಉದ್ಭವಿಸಿದ ಆಕಳಿಕೆಯು ಭಯವನ್ನು ಮೂಡಿಸುತ್ತದೆ, ಭವಿಷ್ಯದ ಭಯವನ್ನು ಭವಿಷ್ಯವು ಎಂದೂ ಮಾಯಾ ರೂಪಿನದು, ಮಾಯೆಯು ಭಯವನ್ನು ಮೂಡಿಸುತ್ತದೆ. ಆಸೆಯನ್ನೂ ಚಿಗುರಿಸುತ್ತದೆ. ಆದರೆ ಆತಂಕವು ಸುಡಲಾರಂಭಿಸಿದರೆ ಭಯವೇ ಕಾಣಿಸುವುದು.

ಆತಂಕ, ಭಯ, ಇವುಗಳ ಸಮ್ಮಿಶ್ರ ಕಾಟದಿಂದ, ಶ್ವಾಸಕಾರ್ಯದ ಅವಾಂತರಗಳು ಹೇಗೆ ಮತ್ತು ಏಕೆ ಉಂಟಾದುವು ಎಂಬುದನ್ನು ತುಸುಮಟ್ಟಿಗಾದರೂ ತಿಳಿದಂತಾಯಿತು.