ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೫೩

ಪ್ರಯಾಸಪಟ್ಟು ಒಂದೆರಡು ತುತ್ತು ನುಂಗಿದರನಕ, ಅವು ಹೊಟ್ಟೆಯಲ್ಲಿ ಹೆಪ್ಪುಗಟ್ಟಿಕೊಂಡು ಮಿಡಿಯುತ್ತದೆ. ಆಗ ಎದೆಯೂ ಡವಡವ ಅಂತ ಹೊಡೆದುಕೊಳ್ಳುತ್ತದೆ. ತತ್‌ಕ್ಷಣ ಎದ್ದು ಹೋಗಿ ಮಲಗಿಬಿಡ್ತೀನಿ' ಎಂದಳು ಲಚ್ಚಮ್ಮಣ್ಣಿ.

ಯೌವ್ವನಸ್ಥೆ, ಸಂಭ್ರಮದಿಂದ ಬಾಳಬೇಕು ಎಂದು ಅವಳಿಗೂ ಹೆಬ್ಬಯಕೆ ಇರುಲ್ಲವೇ ? ಆದರೆ, ಪಾಪ ! ಈಗ ಅವಳ ಮುಖದ ತುಂಬಾ ಆತಂಕದ ಉದ್ದುದ್ದ ಗೆರೆಗಳು, ಹಾಸ್ಯದ ಚಟಾಕಿಯನ್ನು ಪಂಡಿತರು ಹಾರಿಸಿದರೆ ಗಹಗಹಿಸಿ ನಕ್ಕು ನಲಿಯುತ್ತಿದ್ದ ಲಚ್ಚಮ್ಮಣ್ಣೀ ಈಗ ಕಿರಿನಗೆಯನ್ನು ಕ್ಷಣ ಮಾತ್ರ ಸೂಸುತ್ತಾಳೆ. ಅರೆ ಕ್ಷಣದಲ್ಲಿ ಮುಖವು ಪುನಃ ಮುದುಡಿಕೊಳ್ಳುತ್ತದೆ. ನಾಡಿಯನ್ನು ಹಿಡಿದು ಪಂಡಿತರು ಪರೀಕ್ಷೆ ಮಾಡಿದಾಗ, ಒಮ್ಮೆ ನಿಮಿಷಕ್ಕೆ ೭೦ ಇದ್ದುದು, ಕೆಲವೇ ನಿಮಿಷಗಳಲ್ಲಿ ನೂರಾಇಪ್ಪತ್ತಕ್ಕೆ ಏರುತ್ತದೆ. ಬಡಿತದ ಪ್ರಮಾಣವು ಏರುಪೇರಾಗುತ್ತದೆ. 'ಏನೆಲ್ಲಾ ಲೇಹಗಳನ್ನು ಪಂಡಿತರು ಪ್ರಯೋಗಿಸಿದರೂ, ಲಚ್ಚಮ್ಮಣ್ಣಿಗೆ ಉಣ್ಣುವಂತಾಗಲಿಲ್ಲ. ನನ್ನ ಚಿಕಿತ್ಸೆಯೂ ನಿಷ್ಟ್ರಯೋಜಕ ಎಂದುಕೊಂಡರು ಪಂಡಿತರು. ಈ ಮಾತನ್ನು ಹೇಳಿ ಈಗಲೇ ಕಾಯ್ದೆಗೆದರೆ, ಮಾನವಾದರೂ ಮುಂದೆ ಉಳಿಯಬಹುದು ಎಂದು ಅವರ ಎಣಿಕೆ.

ಆದರೆ ಮೂರನೆಯ ದಿನ ಲಚ್ಚಮ್ಮಣ್ಣಿಯೇ ಒಂದು ಉಪಾಯವನ್ನು ಸೂಚಿಸಿದಳು. 'ಪಂಡಿತರೇ ! ಎಷ್ಟೋ ಕಷ್ಟಪಟ್ಟು ಶ್ರಮವಹಿಸಿ ಚಿಕಿತ್ಸೆಯನ್ನು ಮಾಡುತ್ತಿದ್ದೀರಿ. ಪ್ರಯೋಜನ ಆಗಲಿಲ್ಲ. ಆದ್ದರಿಂದ ಔಷಧಿಗಳನ್ನು ನಿಲ್ಲಿಸಿ ಕೆಲವು ದಿನಗಳು ನೋಡೋಣ ಅನ್ನಿಸುತ್ತೆ. ನೀವೇನೂ ತಿಳಿದುಕೊಳ್ಳದೆ ಇದ್ದರೆ, ನಾಳೆಯಿಂದ ಚಿಕಿತ್ಸೆಯನ್ನು ನಿಲ್ಲಿಸಿಬಿಡೋಣ.

ದೇವಸ್ಥಾನದ ಅಂಗಳದಲ್ಲಿ ಪುರಾಣ ಪುಣ್ಯಕತೆಗಳನ್ನು, ನಾನು ಹುಡುಗಿಯಾಗಿದ್ದಾಗ, ನೀವು ಹೇಳುತ್ತಿದ್ದಿರಿ. ತುಂಬಾ ಇಷ್ಟವಾಗುತ್ತಿತ್ತು, ಅವು. ಈಗ ಬಿದ್ದಲ್ಲೇ ಬಿದ್ದಿರುವಂತಾಗಿದೆ. ಅಲ್ಲಿ ಇಲ್ಲಿ ನೆಂಟರ ಮನೆಗೆ ಹೋಗಿ ಬರಲು ಸಾಧ್ಯವಿಲ್ಲ. ಹೊತ್ತು ಹೋಗುವುದೇ ಕಷ್ಟ ವಿರಾಮವಿದ್ದಾಗ ಬಂದು ಪುರಾಣದ ಕಥೆಗಳನ್ನು ಹೇಳಿದರೆ, ಕಾಲವಾದರೂ ಸುಲಭವಾಗಿ ಕಳೆಯುತ್ತೆ. ಸ್ವಲ್ಪ ಸಮಾಧಾನವೂ ಆಗಬಹುದು' ಎಂದಳು.

ಪಂಡಿತರಿಗೂ ಇದು ಖಷಿಯಾದ ಕೆಲಸ. ಚಿಕಿತ್ಸೆಮಾಡಿ ಗುಣಪಡಿಸುವ ಜವಾಬ್ದಾರಿಯಿಲ್ಲ. ಪುರಾಣದ ಕತೆಗಳನ್ನು ರಂಗುರಂಗಾಗಿ ಹೇಳುವುದು ಅವರಿಗೂ ಇಷ್ಟ. ಕೆಲವು ದಿನಗಳ ಪ್ರವಚನಮಾಡಿದರೆ, ಬರಿಗೈಯಲ್ಲಿ ಹಿಂತಿರುಗಬೇಕಾಗಿಲ್ಲ.