ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೬೩

ಕೇಳಿದ್ದಕ್ಕೆ ಜವಾಬು ಕೊಡ್ತೀಯಾ? ಅಥವಾ ಎದ್ದು ಹೋಗಿ ಇನ್ನೊಬ್ಬ ರೋಗಿಗೆ ಅವಕಾಶ ಮಾಡಿಕೊಡ್ತೀಯಾ?' ಎಂದು ರೇಗಿದರು. ನುಡಿದ ಮಾತುಗಳಿಗಿಂತ, ಅವರು ಆಡಿದ ಆವೇಶದ ಗಡುಸಿನ ದನಿಯು ರೋಗಿಗೆ ಷಾಕ್ ಕೊಟ್ಟಂತಾಯಿತು. ಸೆಟೆದುಕೊಂಡಿದ್ದರೂ, ತೆಪ್ಪಗೆ ಸ್ವಲ್ಪಹೊತ್ತು ಕುಳಿತುಕೊಂಡ. ಕಂಡವರೆದುರಿಗೆ ಅವಮಾನವಾದರೆ, ಮಾನಸ್ಥನ ಮುಖವು ಇಳಿದು ಹೋಗುಲ್ಲವೇ, ಹಾಗೆ ಅವನ ಮುಖವು ಇಳಿದು ಹೋಗಿತ್ತು. ಉತ್ಕಟ ಆತಂಕದಿಂದ ನರಳುತ್ತಿದ್ದರೂ, ಮೂಲಭೂತವಾಗಿ ಇವನ ಮನಸ್ಸು ಹತೋಟಿಯಲ್ಲಿದೆ ; ಆದುದರಿಂದಲೇ ಅವಮಾನ ಆದಾಗ ಮುಖ ಇಳಿಯಿತು ಎಂದನಿಸಿತು. ಅವಮಾನವು ಆಗದೆ ಇದ್ದರೆ, ಅಭಿಮಾನವೇ ಕಳೆದುಹೋಗಿದ್ದಿದ್ದರೆ, ಮನಸ್ಸು ಛಿದ್ರವಾಗಿದೆ ಎಂದು ತಿಳಿಯುತ್ತಿತ್ತು. ಆಗ ಯಾವುದಾದರೂ ಒಂದು ತೆರನ ಹುಚ್ಚು, ಆತಂಕದ ಜತೆಗೆ ಕಾಡುತ್ತಿದೆ ಎಂದು ಖಂಡಿತವಾಗುತ್ತಿತ್ತು. ಮುಖವನ್ನು ಮುದುಡಿಕೊಂಡೇ ಅವನು ಉತ್ತರಗಳನ್ನು ನೀಡಿದ, ಸಾಕಷ್ಟು ಸುಸಂಬದ್ಧವಾಗಿಯೇ; ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರವನ್ನು ಕೊಟ್ಟ.

ಚೆನ್ನಾಗಿ ಓದಿ, ಯಶಸ್ವಿಯಾಗಿ ಪ್ಯಾಸು ಮಾಡಿದ್ದ ವೆಂಕಟಯ್ಯ, ಪ್ರೌಢ ಶಿಕ್ಷಣಕ್ಕೆಂದು ವಿದೇಶೀ ಪ್ರವಾಸವನ್ನು ಮಾಡಲು ಅವಕಾಶವು ದೊರಕಿತ್ತು. ಆದರೆ ಮರಣೋನ್ಮುಖಳಾಗಿದ್ದ ತಾಯಿಯನ್ನು ಆ ಸ್ಥಿತಿಯಲ್ಲಿ ಬಿಟ್ಟು, ದೂರ ದೇಶ ಹೋಗಲು ಅವನಿಗೆ ಉತ್ಸಾಹವಿರಲಿಲ್ಲ. 'ಇಲ್ಲೇ ಇರಪ್ಪಾ, ಕಡೆಗಾಲದಲ್ಲಿ ನಿನ್ನ ಕೈಯಿಂದ ಒಂದು ಉದ್ಧರಣೆ ನೀರು ಕುಡಿದು ಕಣ್ಣುಮುಚ್ಚುತ್ತೇನೆ' ಎಂದು ಅಮ್ಮನೂ ಒತ್ತಾಯಪಡಿಸಿದಳು. ಆದಕಾರಣ ಇದ್ದ ಚಾಕರಿಯಲ್ಲೇ ಉಳಿದು ಕೊಂಡ. ಪ್ರೌಢ ವಿದ್ಯಾಭ್ಯಾಸದ ಅವಕಾಶವು ಪುನಃ ದೊರೆಯಲಿಲ್ಲ. ತಾಯಿಯೂ ಸಾಯಲಿಲ್ಲ. ಅವನಿಗಿಂತ ಕಿರಿಯರಾಗಿದ್ದವರು ವಿದೇಶೀ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಹಿಂತಿರುಗಿ, ಇವನ ಮೇಲೆ ಅಧಿಕಾರವನ್ನು ಚಲಾಯಿಸುವಂತೆ ಆಗಿತ್ತು.

ಚಾಕರಿಗೆ ಸೇರಿದ ಕೆಲವು ದಿನಗಳಲ್ಲಿ ಯಥಾ ಪ್ರಕಾರ ಮದುವೆಯೂ ಆಗಿತ್ತು. ಒಮ್ಮೆ ಮೆರೆದಾಡಿದ ಶ್ರೀಮಂತರಾಗಿದ್ದು, ಈಗ ದುಃಸ್ಥಿತಿಗೆ ಇಳಿದಿದ್ದ ಮನೆಯ ಹೆಣ್ಣು ಆ ಕಾರಣದಿಂದಲೇ ಬಡ ವೆಂಕಟಯ್ಯನನ್ನು ಮದುವೆಯಾಗಲು ಒಪ್ಪಿಕೊಂಡಿದ್ದು, ಗಂಡಹೆಂಡಿರ ಮನಸ್ಸು ಪೂರ್ವ ಪಶ್ಚಿಮ ಆಗಿತ್ತು. ಆದರೂ ಯೌವನದ ಅಮಲಿನಿಂದಾಗಿ ಸಂಸಾರ ಸಾಗುತ್ತಿತ್ತು. ಇಬ್ಬರು ಹೆಣ್ಣುಮಕ್ಕಳಾಗಿದ್ದರು. ಇಬ್ಬರೂ ತಾಯಿಯನ್ನು ರೂಪದಲ್ಲೂ ಗುಣದಲ್ಲೂ ಹೋತುಕೊಂಡಿದ್ದರು.