ಪುಟ:ರಂಗಣ್ಣನ ಕನಸಿನ ದಿನಗಳು.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ರಂಗಣ್ಣನ ಕನಸಿನ ದಿನಗಳು

ತ್ತಿದ್ದರು. ರಂಗಣ್ಣ ಕುಳಿತಿದ್ದ ಗಾಡಿಯನ್ನೇ ಅವರು ಅವ್ಯಾಜವಾಗಿ ಹತ್ತಿದರು. ಒಬ್ಬರೊಬ್ಬಗೆ ನಮಸ್ಕಾರಗಳು ಕುಶಲ ಪ್ರಶ್ನೆಗಳು ಆದುವು. ಕಲ್ಲೇಗೌಡರ ಬಾಯಿ ಸುಮ್ಮನಿರಲಿಲ್ಲ.

'ಏನು ! ಇನ್ ಸ್ಪೆಕ್ಟರವರ ಕಾರುಬಾರು ದರ್ಬಾರು ರೇಂಜಿನಲ್ಲೆಲ್ಲ ಬಹಳ ಕೋಲಾಹಲಕರವಾಗಿದೆ !!'

'ದರ್ಬಾರು ನಡೆಸುವುದಕ್ಕೆ ನಾವೇನು ದಿವಾನರೇ ? ರಾಜರೇ ? ಸ್ಕೂಲ್ ಇನ್ ಸ್ಪೆಕ್ಟರ್ ಏನು ದರ್ಬಾರು ನಡೆಸಬಹುದು ??'

'ಮೊನ್ನೆ ಆವಲಹಳ್ಳಿಯಲ್ಲಿ ಭಾರಿ ದರ್ಬಾರು ನಡೆಯಿತಂತೆ ! ಔತಣ ಸಮಾರಾಧನೆಗಳು ಇತ್ಯಾದಿ. ಬಡ ರೈತರನ್ನು ಸುಲಿಗೆ ಮಾಡುವುದಕ್ಕೆ ನಿಮ್ಮ ಇಲಾಖೆಯೂ ಕೈ ಹಾಕಿದ ಹಾಗಿದೆ.'

'ದೊಡ್ಡ ಬೋರೇಗೌಡರ ಆತಿಥ್ಯ ಉಪಾಧ್ಯಾಯರಿಗೆ ನಡೆಯಿತು. ಅವರೇನೂ ಬಡವರಲ್ಲ. ಅವರು ಕೊಟ್ಟ ಆಹ್ವಾನದ ಮೇಲೆ ಅಲ್ಲಿ ಸಭೆ ಸೇರಿತ್ತು.'

'ಆ ಹಾ ! ಬೋರೇಗೌಡನ್ನ ನಮ್ಮ ಮೇಲೆ ಎತ್ತಿ ಕಟ್ಟೋ ಹಂಚಿಕೆ ತೆಗೆದಿದ್ದೀರೇನೋ ? ನಿಮ್ಮ ಬೇಳೆ ಕಾಳು ನಮ್ಮ ಹತ್ತಿರ ಬೇಯೋದಿಲ್ಲ.'

'ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನೀವು ಆಹ್ವಾನ ಕೊಟ್ಟರೆ ನಿಮ್ಮ ಹಳ್ಳಿಯಲ್ಲಿ ಸಭೆ ಸೇರಿಸುತ್ತೇನೆ. ಅದಕ್ಕೇನು !?

'ಮೆಲ್ಲನೆ ನನಗೂ ಬಲೆ ಬೀಸುತ್ತಿರೋ ? ನಿಮ್ಮ ಮಾತಿಗೆ ಮರುಳಾಗುವುದಕ್ಕೆ ನಾನೇನೂ ದೊಡ್ಡ ಬೋರೇಗೌಡ ಅಲ್ಲ.'

'ಕಲ್ಲೆ ಗೌಡರೇ ! ನಾನೇ ತಕ್ಕೆ ಬಲೆ ಬೀಸಲಿ. ನೀವು ದೊಡ್ಡ ಮುಖಂಡರು, ನಮ್ಮ ಸಂಸ್ಥಾನ ಮುಂದಕ್ಕೆ ಬರಬೇಕೆಂದು ಹಾರೈಸುತಿರುವವರು. ನ್ಯಾಯ ವಿಧಾಯಕ ಸಭೆಯ ಸದಸ್ಯರಾಗಿದ್ದೀರಿ. ವಿದ್ಯಾಭಿವೃದ್ಧಿ ಬಹಳ ಮುಖ್ಯವಾದ ವಿಚಾರ, ತಮ್ಮಂಥವರು ಮುಂದೆ ಬಂದು ನಮಗೆ ಸಹಾಯ ಮಾಡಬೇಕು. ನಾವು ದುಡಿಯುವುದಾದರೂ ಏತಕ್ಕೆ? ನನಗೇನು? ಎರಡು ದಿನ ಈ ರೇ೦ಜು, ನಾಳೆ ವರ್ಗವಾದರೆ ಬೇರೆ ರೇಂಜು, ಅಸಿಸ್ಟೆಂಟ್ ಇನ್ ಸ್ಪೆಕ್ಟರ್ ಗಿರಿ ತಪ್ಪಿದರೆ ಮೇಷ್ಟರ ಕೆಲಸ