ಪುಟ:ರಂಗಣ್ಣನ ಕನಸಿನ ದಿನಗಳು.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ರಂಗಣ್ಣನ ಕನಸಿನ ದಿನಗಳು

ನೀವೆಲ್ಲ ಥರ್ಡ್ ಕ್ಲಾಸಿನಲ್ಲಿ ಪ್ರಯಾಣ ಮಾಡದೆ ಸೆಕೆಂಡ್ ಕ್ಲಾಸ್ ಜಂಬ ಏಕೆ ಮಾಡುತ್ತೀರಿ ?

ರಂಗಣ್ಣನಿಗೆ ಸ್ವಲ್ಪ ಕೋಪ ಬಂತು. ಯಾವ ಕ್ಲಾಸಿನಲ್ಲಿ ಪ್ರಯಾಣ ಮಾಡಿದರೆ ಇವರಿಗೇನು ? ಎನ್ಸಿಸಿತು.

ಕಲ್ಲೇಗೌಡರೇ ! ನಮ್ಮ ಗೌರವ ಉಳಿಸಿಕೊಳ್ಳುವುದಕ್ಕಾಗಿಯೂ ಸೌಕರ್ಯಕ್ಕಾಗಿಯೂ ಸೆಕೆಂಡ್ ಕ್ಲಾಸಿನಲ್ಲಿ ಪ್ರಯಾಣ ಮಾಡುತ್ತೆವೆ. ಜೊತೆಗೆ ನಾನು ಸರ್ಕಾರದ ಕೆಲಸಕ್ಕಾಗಿ ಹೋಗುತ್ತಿದ್ದೇನೆ. ನನಗೆ ಸೆಕೆಂಡ್ ಕ್ಲಾಸಿನ ರೈಲು ಚಾರ್ಜನ್ನು ಸರಕಾರದವರು ನಿಗದಿ ಮಾಡಿದ್ದಾರೆ. ಅವರು ಕೊಡುವ ಖರ್ಚನ್ನು ಮಿಗಿಸಿಕೊಳ್ಳದೆ ಈ ಪ್ರಯಾಣ ಮಾಡುತ್ತಿದ್ದೇನೆ. ಸರ್ಕಾರದವರು ಫಸ್ಟ್ ಕ್ಲಾಸ್ ಪ್ರಯಾಣದ ಖರ್ಚು ಕೊಟ್ಟರೂ ಸಹ ನಿಮ್ಮ ಸ್ನೇಹಿತರುಗಳಂತೆ ತಲೆಗೆ ಮುಸುಕು ಹಾಕಿಕೂಂಡು ತರ್ಡ್ ಕ್ಲಾಸಿನ ಸೀಟಿನ ಕೆಳಗೆ ಮಲಗಿಕೊಂಡು ಕಳ್ಳ ಪ್ರಯಾಣವನ್ನು ನಾನು ಮಾಡುವುದಿಲ್ಲ.

ಯಾರು ನನ್ನ ಸ್ನೇಹಿತರು ? ಹಾಗೆ ಕಳ್ಳ ಪ್ರಯಾಣ ಮಾಡಿದ್ದನ್ನು ನೀವೇನು ಕಂಡಿದ್ದೀರಾ ? ಎಂದು ಜಬರ್ದಸ್ತಿನಿಂದ ಕಲ್ಲೇಗೌಡರು ಗರ್ಜಿಸಿದರು.

ಹೆಸರನ್ನು ಏಕೆ ಹೇಳಲಿ ? ನಿಮಗೆಲ್ಲ ತಿಳಿದ ವಿಷಯ. ಕಣ್ಣಿನಿಂದ ನೋಡಿ, ಬಾಯಿಂದ ಮಾತಾಡಿಸಿ ಎಲ್ಲ ಆಗಿದೆ ?

ಏನು ಬಹಳ ಜೋರ್ ಮೇಲಿದ್ದೀರಿ ? ನಿಮ್ಮೊಡನೆ ನನಗೇಕೆ ಮಾತು ? ಈಗ ನಡೆದಿರುವುದೇ ಸಾಕು. ಕಾಲು ಕೆರೆದುಕೊಂಡು ಜಗಳಕ್ಕೆ ನಾನು ಬಂದಿಲ್ಲ. ಇರುವ ವಿಷಯ ತಿಳಿಸಿದೆ. ಅಷ್ಟೇ,

ಮುಂದಕ್ಕೆ ರಂಗಣ್ಣ ಮಾತನಾಡಲಿಲ್ಲ. ಬೆಂಗಳೂರು ಬರುವವರೆಗೂ ಇಬ್ಬರೂ ಮೌನವಾಗಿದ್ದರು. ರೈಲು ಬ೦ಡಿ ಇಳಿಯುತ್ತ ನಮಸ್ಕಾರ ಕಲ್ಲೇಗೌಡರಿಗೆ ! ಮುಂದಾದರೂ ಸ್ನೇಹ ಬೆಳೆಯಲಿ, ಎಂದು ರಂಗಣ್ಣ ಹೇಳಿ ಹೊರಟುಬಂದನು.