ಪುಟ:ರಾಮಾಶ್ವಮೇಧ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀರಾಮಾಶ್ವಮೇಧಂ

ಪ್ರಥಮಾಶ್ವಾಸಂ - ಕಥಾಮುಖಂ

ಓವೋ ? ಕಾಲಪುರುಷಂಗೆ ಗುಣಮಣಮಿಲ್ಲಂ ಗಡ ! ನಿಸ್ತೇಜಂ ಗಡ ! ಜಡಂ ಗಡ ! ಒಡಲೊಳ್ ಗುಡುಗುಟ್ಟುಗುಂ ಗಡ ! ಏನರಮನೆವಾಗಿಲಂ ಮುಗಿಲೆರೆಯಂ ಬಾಸಣಿಸಿರ್ಪರ್ ? ಆರ್ಗಂ ಪುಗಲಾಣತಿಯಿಲ್ಲದಿರ್ಕುಂ ; ಮಡದಿ ಬಾನ್ನೀಱಿಯೊರ್ವಳ್ ಚಂಚಲದೃಷ್ಟಿಯಿನತ್ತಮಿತ್ತಂ ನೋಳ್ಪಳ್ ಮೂದಲಿಗೆಮುರ್ದಂ ಕೊಂಡುಯ್ವಡಕ್ಕುಂ. ಸಿಡಿಲಾಳ್ ತಡೆಯದೆಡೆಯ ನಡುವೆಟ್ಟುಗಳೆ ಕಟ್ಟುಬ್ಬರದಿಂ ಹಂದೆಱಗುಗುಂ: ಕುತ್ತ ಮೇಂ ? ಸುಗ್ಗಿಯೊಳುಂಡುದುಂ ಕಾರೊಳ್ ಕಾಱುವನಕ್ಕುಂ : ಕಾಲಂ ಕಷ್ಟಂ ! ಕಷ್ಟಂ !!

ಎಲೆಲೆ ಸೋಗೆನವಿಲೆ ! ಏಂ ನಲಿವಯ್ ! ನಿನಗಮಾತಂ ಗಮನಿತ್ತು ಪಗೆಯೇಂ ? ಕಟ್ಟಾಸುರದ ಬೇಸಗೆಯೊಳೋಸರಿಸದೆ ಗಾಸಿಗೆಯ್ದನೆನುತೆಯೇ ? ಚಿಃ ! ಚಿಃ ! ಪೆಱವರ ಕಿಡುದೆಸೆಯೊಳ್ ಕಡುಸಂತಸಕ್ಕೆಡೆಗುಡದಿರ್‌, ಪೋ ಪೋ ! ನೊರ್ಕನುಳಿದು ನಿನ್ನಿರ್ಕೆಗೆ ಏನೆನ್ನ ನುಡಿಯಂ ಕಡೆಗಣ್ಪಿಮತ್ತಂ ಮತ್ತುಂ ಮುತ್ತ ಪೊಳ್ತನಂತೆ ಮೆಯ್ವೆರ್ಚುವಯ್ ? ಇದರ್ಕೆಯೆ ನಿನಗಿಂತು ವಿಜಾತಿಯೊಳಧಮಗತಿಯೊದವಿದತ್ತು.

ಬಾಯ್ವಿಡದಿರೆಲೆ ಚಾದಗೆಯೆ ? ತಿರೆಯೋ ನೆಪ ಸಿರ್ಕಿನೋಳ್ ಮಱುಕಮುಳ್ಳರೊಳ್ ನಿನ್ನನ್ನರೊಳಗೆ ? ನಿರ್ನೆರಮಳಲದಿರ್. ಆವೆಯಾದೊಡಮೇವರ್? ಕರ್ಮ ಪುರುಷಂಗೆ ಸೋರ್ಕುಂ ಸಿರ್ಕುಮೆಂದಿರ್ಕಣ್ಣಲ್ತೆ ! ಅತ್ತ ಪೋಗಲ್ವೇನೆಂಬೆಯೇಂ ! " ಗಗನಮುಖಂ ದುಷ್ಪ್ರವೇಶ್ಯಂ ಎಂದು ಡಂಗುರವಿರ್ಕುಂ ; ಆದನೀಗಳ್ ಪೋಪುದು ಪದನಲ್ತು, ತನ್ನಾಣೆ ! ಕತಿಪಯದಿನಂಗಳೊಳೆ ಎಱುಯಂಗೆ ಕ್ಷೇಮಮುಕ್ಕುಂ ದಿಟಮೆಂದು ಗ್ರಹಗತಿಯನಾರಯ್ದ ಜೋಯಿಸರೆಂದರ್. ಅದಂಱಿಂದೆರ್ದಗಿಡದೆ ನಿನ್ನೆಡೆಗೆ ಪೋಗು, ಪಯಣಂ ಸೊಗಮಕ್ಕೆ !