ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ರಾಮಾಯಣ: ಒಂದು ಮಾನವ ಕಥೆ

ವಾಲ್ಮೀಕಿಯು ರಚಿಸಿದ ರಾಮಾಯಣವು ಒಬ್ಬ ಮಾನವನ ಕಥೆಯೇ ಹೊರತು ದೇವರ ಕಥೆಯಲ್ಲ. ವಿಷ್ಣುವು ದೇವನಾಗಿದ್ದರೂ ಭೃಗುಮುನಿಯ ಶಾಪದಿಂದ ಇಲ್ಲವೆ 'ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್' ಎಂಬ ತನ್ನ ಹೇಳಿಕೆಯನ್ನು ಕಾಯ್ದುಕೊಳ್ಳಲು ಮಾನವಾವತಾರವನ್ನು ಧರಿಸಿದನು. ಪೃಥ್ವಿಗೆ ಬಂದು ಇಳಿಯುವಾಗ ಸ್ವಂತದ ದೈವೀ ಗುಣಗಳ ಸಂಚಯವನ್ನು ಸ್ವರ್ಗದಲ್ಲಿಯೇ ಇಟ್ಟುಬಂದನು; ಮಾನವಾವತಾರಪೂರ್ವದ ತನ್ನ ದೇವತ್ವವನ್ನು ಸಂಪೂರ್ಣವಾಗಿ ಮರೆತನು. ನಂತರ ಪೂರ್ಣವಾಗಿ ಮಾನವನಂತೆ ವರ್ತಿಸಿದನು; ಮಾನವನಾಗಿಯೇ ಬಾಳಿದನು. ಒಮ್ಮೆ ಈ ಮೃತ್ಯುಲೋಕದಲ್ಲಿ ಮಾನವನ ಭೂಮಿಕೆಯನ್ನು ಅಂಗೀಕರಿಸಿದ ನಂತರ ರಾಮನು ಅದನ್ನು ನಿಜಮಾನವನಂತೆ ನೆರವೇರಿಸಿದ್ದಾನೆ. ಮಾನವನಾಗಿದ್ದರೂ ಸರ್ವಸಾಮಾನ್ಯ ಮಾನವನಿಗಿಂತ ಎದ್ದುಕಾಣುತ್ತಾನೆ. ಜೀವನದತ್ತ ನೋಡುವ ಆತನ ದೃಷ್ಟಿಯೇ ಇದಕ್ಕೆ ಕಾರಣವಾಗಿತ್ತು. ಮಾನವಜನ್ಮದ ಶ್ರೇಷ್ಠ ಮೌಲ್ಯಗಳನ್ನು ಕಾಪಾಡಲು ಆತನು ಜೀವನವನ್ನೇ ಸಮರ್ಪಿಸಿದನು. ತನ್ನ ನಡೆನುಡಿಗಳಿಂದ ಆದರ್ಶ ಮಾನವನ ಸೊಗಸಾದ ಚಿತ್ರವನ್ನು ರೂಪಿಸಿದನು. ಮಾನವರಲ್ಲಿ 'ಶ್ರೇಷ್ಠ'ನೆನಿಸಿಕೊಂಡನು; ಮಹಾಮಾನವನೆನಿಸಿದನು. ಹೀಗಿದ್ದರೂ ಸ್ವತಃ ಆತನು 'ಅತಿಮಾನವನಾಗಲಿಲ್ಲ. ರಾಮಾಯಣದಲ್ಲಿ ಚಮತ್ಕಾರಗಳಿಗೆ ಸ್ಥಾನವಿಲ್ಲ. ರಾಕ್ಷಸರು ಬೇರೆ ಬೇರೆ ರೂಪಗಳನ್ನು ಧರಿಸುವುದು; ಹನುಮಂತನು ಪರ್ವತವನ್ನು ಎತ್ತಿಕೊಂಡು ಬರುವುದು; ಯಜ್ಞಕುಂಡದಿಂದ ಯಜ್ಞಪುರುಷನು ಕಾಣಿಸಿಕೊಳ್ಳುವುದು; ಅಗ್ನಿ ಪ್ರವೇಶಮಾಡಿ ಸೀತೆಯು ಸುಖರೂಪವಾಗಿ ಹೊರಗೆ ಬರುವುದು- ಇವು ಚಮತ್ಕಾರಗಳಲ್ಲ; ದೈವಿಕ ಗುಣಗಳೂ ಇವುಗಳಲ್ಲಿಲ್ಲ. ಮಾನವನ ಶಕ್ತಿಗೆ ಅಸಾಧ್ಯವೆನಿಸುವುದನ್ನು ರಾಕ್ಷಸರು ಮಾಯೆಯ ಶಕ್ತಿಯಿಂದ ಸಾಧಿಸುತ್ತಾರೆ. ಈ ಶಕ್ತಿಯು ರಾಕ್ಷಸರಲ್ಲಿ ಹುಟ್ಟಿನಿಂದ ಇರುತ್ತದೆ; ಅಲ್ಲದೇ ಅದನ್ನು ಸಾಧನೆಯಿಂದ ಪಡೆದಿರುತ್ತಾರೆಂದು ಗ್ರಹಿಸಿದರೆ ರೂಪಧಾರಣೆಯು ಚಮತ್ಕಾರವೆಂದೆನಿಸದು. ಹನುಮಂತನು ಪರ್ವತವನ್ನು ಎತ್ತಿ ಎಂದನು; ಎಂದರೆ ಆ ಕಾಲದಲ್ಲಿ ಗೊತ್ತಿದ್ದ ಎಲ್ಲ ವನಸ್ಪತಿಗಳನ್ನು ಬೆಟ್ಟದ ಗಾತ್ರದಷ್ಟು ಪ್ರಮಾಣದಲ್ಲಿ ತಂದನು. ಸೀತೆಯು ಅಗ್ನಿದಿವ್ಯವನ್ನು ಕೈಗೊಂಡಳು ಎಂದರೆ ತೀರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಆಕೆಯು ತನ್ನ ಚಾರಿತ್ರ್ಯವನ್ನು ಶುದ್ಧವಾಗಿ ಕಾಯ್ದುಕೊಂಡಳು. ಅಗ್ನಿಪ್ರವೇಶಕ್ಕೆ ಸಮಾನವಾದ ಪ್ರಖರ-ಘೋರ ಪರೀಕ್ಷೆಗಳಿಂದ ಪಾರಾದಳು ಎಂದು ತಿಳಿಯಬೇಕು.