________________
೨೧. ವೈಶಾಖ “ಅದ್ಯಾಕೆ ಅಮ್ಮಾರೆ, ನಿಮ್ಮ ಗಾಡಿಗೇನಾಗದೆ?” ಕೇಳಿದ “ನಮ್ಮ ಗಾಡಿ ದೂರಿ ಮುರಿದುಹೋಗಿದೆ. ಅದನ್ನ ರಿಪೇರಿಗೆ ಬಿಟ್ಟಿದೀವಿ. ಅದಕ್ಕೇನೆ ನೀನು ಇಲ್ಲೇ ಇದ್ದು ನಮಗೆ ಕೊಂಚ ಸಹಾಯ ಮಾಡು ಅಂತ ಕೇಳಿರೋದು...” “ಇಲ್ಲ, ಇಲ್ಲ, ನಾ ವೋಗಲೇಬೇಕು... ನಮ್ಮ ಗಾಡ್ಯ ಬೇಕಾರೆ ನೀವು ಇಲ್ಲೆ ಇಟ್ಟುಗನ್ನಿ, ಗಾಡಿ ವೋಡಿಯಕ್ಕೆ ಯೆಂಗಿದ್ರೂ ನಿಮ್ಮಾಳು ಜೊರಕ ಇದ್ದೇ ಅವನೆ... ನಾ ವೋಗಿ ಅಯ್ಯಾರೆ ಇಸ್ಯ ತಿಳುಸ್ತೀನಿ.” “ಹುಂ, ಇನ್ನೇನು ಮಾಡುವುದು. ನಿಮ್ಮ ತಂದೆಗೆ ಹುಶಾರಿಲ್ಲ ಎನ್ನುವಾಗ, ನಾವು ಹೇಗೆತಾನೆ ನಿನ್ನನ್ನ ತಡೆಯಲಿಕ್ಕೆ ಆಗುತ್ತೆ. ನಿಮ್ಮ ಗಾಡಿಯನ್ನು ಇನ್ನು ನಾಲೈದು ದಿನಗಳಲ್ಲಿ ಕಳಿಸಿಕೊಡ್ತಾರಂತೆ ಎಂದು ಮಾವಯ್ಯನವರಿಗೆ ತಿಳಿಸು... ಆದೇನೋ ಸರಿ. ಆದರೆ ನೀನು ದೂರ ಪ್ರಯಾಣ ಮಾಡಿ ಬಂದಿದ್ದೀಯೆ, ಮತ್ತೆ ಹಸಿದು ನೀನು ನಡೆದು ಹೋಗಲಿಕ್ಕೆ ನಾನೆಂದೂ ಒಪ್ಪಲ್ಲ. ಹೊಟ್ಟೆಗೆ ನೀನು ಏನಾದರೂ ತಗೊಂಡೇ ಇಲ್ಲಿಂದ ಹೊರಡಬೇಕು.”- ಪಾರ್ವತಿ ಒತ್ತಾಯ ಪಡಿಸಿದಳು. ವಿಧಿಯಿಲ್ಲದೆ ಒಪ್ಪಿ, ಲಕ್ಕೆ ಎತ್ತುಗಳನ್ನಟ್ಟಿ, ಅವರ ಮನೆಯ ಹಿಂದಿನ ಹಿತ್ತಲಿಗೆ ಹೊರಟ. ಅವನು ತೆರಳುವುದನ್ನೇ ವೀಕ್ಷಿಸುತ್ತಿದ್ದ ಪಾರ್ವತಿ, “ನಿಮ ಲಕ್ಕನ್ನ ನೋಡಲಿಕ್ಕೆ ಒಂದು ಸಂತೋಷ ಆಗುತ್ತೆ ನೋಡೆ ನಕ್ಕು... ನಮ್ಮರೈತರು ಹೇಳ್ತಾರಲ್ಲ-ಕೊರಡ ಬಿಗಿದ ಹಂಗೆ ಬೆಳದದ್ದೆ ಅಂತ - ಹಾಗೆ ಬೆಳೆದಿದ್ದಾನೆ, ಹುಡುಗ!... ನಮ್ಮ ಚೋರಕನೂ ಇದ್ದಾನೆ ನೋಡು. ನಾವು ಎಷ್ಟೆಷ್ಟೇ ಪೋಷಾಕು ಮಾಡಿದರೂ ಅವನು ಮಾತ್ರ ಸೀಕಲ್ಲ ಕೊನೆ!” ಎನ್ನುತ್ತ ನಕ್ಕಳು. ರುಕ್ಕಿಣಿ ಮಾತು ತಿರುಗಿಸಿ, “ಇದೇನು, ನಮ್ಮ ಸರಸಿ, ಗಿರಜಿ ಇಬ್ಬರೂ ಕಾಡ್ತಾನೆ ಇಲ್ಲ?” ಎಂದು ಕೇಳಿದಳು. “ಅಯ್ಯೋ, ಅವರಿಬ್ಬರನ್ನೂ ಸಾದಾ ದಿನಗಳಲ್ಲೇ ಹಿಡಿಯುವುದು ಪ್ರಯಾಸ. ಇನ್ನು ಇಂಥ ಸಂಭ್ರಮದ ದಿನದಲ್ಲಿ ಕೇಳಬೇಕೆ?... ಒಳಗಡೆ ಎಲ್ಲೋ ಸುತ್ತಾಡ ಇರಬೇಕು. ಬಾ, ನೋಡೋಣ” ಎನ್ನುತ್ತ ಪಾರ್ವತಿ ಕೈ ಹಿಡಿದು ಎಳೆದಾಗ, ರುಕ್ಕಿಣಿಯ “ಅಕ್ಕ, ನಾನು ಸ್ನಾನ ಮಾಡಬೇಕಲ್ಲ...” ಎಂದು ತಡವರಿಸಿದಳು.