ಪುಟ:ವೈಶಾಖ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮ ವೈಶಾಖ ಮೇಲಿರಿಸಿ ಉಪಚರಿಸಿದೆ, ಅಷ್ಟೆ.” ಅವರ ಮಾತುಗಳನ್ನು ಆಲಿಸುತ್ತಿದ್ದಂತೆ ನನ್ನ ಕಣ್ಣಿನಲ್ಲಿ ಮನಃ ನೀರು ಕಾಣಿಸಿತು. ಆದರೆ ಅದು ಶೋಕದ ಕಂಬನಿಯಾಗಿರದೆ, ನನ್ನ ಪತಿಯ ಬಗ್ಗೆ ಅಭಿಮಾನದ ಮೆಚ್ಚುಗೆಯ ಕಣ್ಣೀರಾಗಿತ್ತು... ಆ ಪ್ರಸಂಗವನ್ನು ನೆನೆದಂತೆ ಮತ್ತೊಮ್ಮೆ ರುಕ್ಕಿಣಿಯ ಕಣ್ಣಿನಲ್ಲಿ ನೀರಾಡಿತ್ತು. ಅಂಥ ಗಂಡನನ್ನು ಪಡೆಯಲು ತಾನು ಕೋಟಿ ಜನ್ಮಗಳ ಪುಣ್ಯ ಮಾಡಿದ್ದೆ ಎನ್ನಿಸಿತ್ತು. ಆದರೆ ಆ ಪುಣ್ಯ ಕೇವಲ ಒಂದೂವರೆ ವರ್ಷದಷ್ಟು ಅಲ್ಪಾವಧಿಯಲ್ಲಿ ಕ್ಷಯಿಸಿದ್ದೇಕೆ? – ಈ ಪ್ರಶ್ನೆಯನ್ನು ವಿಷಮಶೀತ ಜ್ವರದಿಂದ ತನ್ನ ಪತಿ ಸತ್ತ ದಿನದಿಂದಲೂ ದೇವರ ಮುಂದೆ ಕೇಳುತ್ತಲೇ ಬಂದಿದ್ದಳು. ಬಾಲ್ಯದಿಂದಲೂ ಯುಗಾದಿಯಲ್ಲಿ ಬೇವು-ಬೆಲ್ಲಗಳನ್ನು ಸಮಸಮವಾಗಿಯೆ ತಿನ್ನುತ್ತ ಬಂದಿದ್ದೇನಲ್ಲ. ಆದರೆ ನನ್ನ ಬಾಳ್ವೆಯಲ್ಲಿ ಬೆಲ್ಲದ ಸವಿ ಬಹು ಕ್ಷಿಪ್ರವಾಗಿ ಕರಗಿ, ಇನ್ನು ನನ್ನ ಬದುಕಿನುದ್ದಕ್ಕೂ ಬೇವಿ ಕಹಿಯನ್ನೆ ಸೇವಿಸುವಂತಾಯಿತಲ್ಲ?... ಅವಳ ಆಲೋಚನೆ ಈ ಪರಿ ಹರಿಯುತ್ತಿರುವಾಗ ಈಗಾಗಲೆ ಚೆನ್ನಾಗಿ ಚೆತರಿಸಿದ್ದ ಸುಶೀಲ ಏಣಿ ಹಾಕಿ ಅಟ್ಟಕ್ಕೆ ಹತ್ತುವುದನ್ನು ಗಮನಿಸಿ, 'ಅಯ್ಯೋ ನನ್ನೊಬ್ಬಳದೇ ಏನು ಮಹಾಈ ಸುಶೀಲತೆಯೂ ನನ್ನಂತೆ ಚಿಕ್ಕ ಪ್ರಾಯದಲ್ಲಿಯೇ ಗಂಡನನ್ನು ಕಳೆದುಕೊಂಡಿಲ್ಲವೆ?... ಆದರೆ ಒಂದು ವ್ಯತ್ಯಾಸ-ದೇವರು ಅವಳಿಗೆ ಒಂದು ಕೂಸನ್ನಾದರೂ ಕರುಣಿಸಿದ್ದಾನೆ. ಆ ಭಾಗ್ಯದಿಂದಲೂ ತಾನು ವಂಚಿತಳು!... ಅಂಗಳದ ತಾಮ್ರದ ಕೊಪ್ಪರಿಗೆಯಲ್ಲಿ ಹದವಾಗಿ ಬೆಂದ ಅಡಿಕೆಯ ಕಮಟು ವಾಸನೆ ಮೂಗಿಗೆ ಬಡಿದಿತ್ತು. ಅಟ್ಟದಿಂದಲೇ ಸುಶೀಲತೆ. “ಹೋಗಿ ನೋಡೆ, ರುಕ್ಕು-ಅಡಿಕೆ ಹದವಾಗಿ ಬೆಂದಿರೋ ಹಾಗಿದೆ” ಎಂದು ಕೂಗಿದಳು. ರುಕ್ಕಿಣಿ ತಟ್ಟನೆದ್ದು ಅಂಗಳಕ್ಕೆ ನಡೆದಳು. ಅನ್ನ ಬೆಂದ ಹಾಗೆ ಬೆಂದಿದೆಯೆ ಎಂದು ಪರೀಕ್ಷಿಸಿ ಖಚಿತಪಡಿಸಿಯಾದ ಬಳಿಕ, ರುಕ್ಕಿಣಿಯು ಬೆಂದ ಅಡಿಕೆಗಳನ್ನು ಈಚಲು ಮಂಕರಿಗಳಿಗೆ ತುಂಬುವುದರಲ್ಲಿ ನಿರತಳಾದಳು. “ಹೆಣ್ಣಾಳುಗಳು ಬಂದರೇನೆ?” – ಅಟ್ಟದಿಂದಲೆ ಸುಶೀಲಮ್ಮನ ಗರ್ಜನೆ. “ಹೇಳಿ ಕಳಿಸಿದೀನಿ. ಇನ್ನೇನು ಬರಬಹುದು” ಎನ್ನುತ್ತ, ಬೆಂದ ಅಡಿಕೆಗಳನ್ನು ಮಂಕರಿಗಳಿಗೆ ತುಂಬಿದಳು. ಹೆಣ್ಣಾಳುಗಳು ಬರುವ ವೇಳೆಗೆ ಇನ್ನೂ ಆಟದಲ್ಲಿ ತೆಂಗಿನ ತರಳು, ಪಾತ್ರೆ ಪರಡು, ಹುರಿ ಹಗ್ಗ ಇತ್ಯಾದಿಗಳನ್ನು ಓರಣಗೊಳಿಸುವುದರಲ್ಲಿ ಸುಶೀಲಮ್ಮ