ಪುಟ:ವೈಶಾಖ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ “ಮಾವ ಕೋಪಿಸ್ಕೋತಾರೆ. ಬೇಡಮ್ಮ...” ಎನ್ನುತಿದ್ದಂತೆ, ಶಾಸ್ತ್ರಿಗಳು ಆಗಲೆ ಬಿದಿರೇಣಿಯಿಂದ ಇಳಿಯಲು ಉಪಕ್ರಮಿಸಿದ್ದರು. ಸರಸಿಯ ರಂಬಾಟವನ್ನು ಅಲ್ಲಿಂದಲೆ ಗಮನಿಸಿ, “ಹೋಗಲಿ ಕರೆದುಕೊಂಡು ಬಾ, ರುಕ್ಕಿಣಿ, ಅವಳ ಚಪಲ ಕೊಂಚ ತೀರಿಸೋಣ” ಅಂದದ್ದೇ ತಡ, ರುಕ್ಕಿಣಿಯಿಂದ ತನ್ನ ಕೈ ಬಿಡಿಸಿ ಓಡಿಹೋದಳು. ಕೆಳಗಿನ ಎರಡು ಮೆಟ್ಟಿಲು ತನಕ ಏಣಿಯಿಂದ ಇಳಿದು, ಕೈ ನೀಡಿ ಸರಸಿಯನ್ನು ಮೆಲ್ಲನೆ ಏಣಿಯ ಮೇಲುಗಡೆ ಹತ್ತಿಸಿಕೊಂಡರು ಶಾಸ್ತ್ರಿಗಳು, ಆ ಬಳಿಕ ಅವಳನ್ನು ಮುಂದೆ ಬಿಟ್ಟು, ತಾವು ಹಿಂದೆ ಇರುತ್ತ ಐದಾರು ಮೆಟ್ಟಿಲು ಹತ್ತಿಸಿ, ತರುವಾಯ ಕೆಳಗಿಳಿಸಿ, ತಾವೂ ಕೆಳಗಿಳಿದರು. ಕೆಳಗೆ ಇಳಿದವರೆ, “ಇದೇನು ಕೇಶವಯ್ಯ, ಈ ದಿನ ನಿನ್ನ ಮುಖವನ್ನು ಇಷ್ಟು ಸಪ್ಪಗೆ ಮಾಡಿಕೊಂಡಿದ್ದೀಯ?... ಯಾವಾಗಲೂ ಖುಷಿಯಾಗೇ ಇದ್ದೋನಿಗೆ ಈ ದಿನ ಏನಾಯ್ತು?” ಎಂದದ್ದು ಕಿವಿಗೆ ಬಿದ್ದು, ರುಕ್ಕಿಣಿ ಹಿಂದಿರುಗಿ ನೋಡಿದಳು. ಅವಳ ಬೆನ್ನ ಹಿಂದೆಯೇ ಕೇಶವಯ್ಯ ಜೋಲುಮುಖ ಹಾಕಿ ನಿಂತಿದ್ದ. ಅವನು ಬಂದು ಆಗಲೇ ಕೆಲ ಸಮಯ ಕಳೆದಿರಬಹುದು. “ಅಗ್ರಹಾರಕ್ಕೆ ಕೊಟ್ಟಿರುವ ನನ್ನ ಅಕ್ಕನಿಗೆ, ಅವಳ ಗಂಡ ರಾಮಸ್ವಾಮಯ್ಯ ತೀರಿಕೊಡಲ್ಲ- ಆ ಪ್ರಯುಕ್ತ ನಮ್ಮಕ್ಕನಿಗೆ ಅವಳ ಗಂಡನ ಮನೆಯೋರು, ಅದರಲ್ಲೂ ರಾಮಸ್ವಾಮಯ್ಯನ ತಾಯಿ, ಅವನ ಚಿಕ್ಕಮ್ಮ ಎಲ್ಲರೂ ಸೇರಿ, ಹೋದ ಮಂಗಳವಾರ ತಲೆ ಬೋಳಿಸಿದರಂತೆ...” ಇಷ್ಟು ನುಡಿದು ಕೇಶವಯ್ಯ ಮಾತು ನಿಲ್ಲಿಸಿದ. ಕೇಶವಯ್ಯ ಈ ರೀತಿ ತೀವ್ರವಾಗಿ ಕುದಿಯುವುದನ್ನು ರುಕ್ಕಿಣಿಯು ಕಂಡಿದ್ದೇ ಇಲ್ಲ. “ಎಲ್ಲರ ಮನೇಲು ಇದೇ ಗೋಳು. ಈ ಶಾಪದಿಂದ ನಮ್ಮ ಸಮಾಜಕ್ಕೆ ಎಂದು ಮುಕ್ತಿ ದೊರೆಯುತ್ತೊ, ಆ ಪರಮಾತ್ಮನಿಗೇ ಗೊತ್ತು.” –ಒಂದೊಂದು ಮಾತನ್ನೂ ತಮ್ಮ ಹೃದಯದಲ್ಲಿ ತುಂಬಿದ್ದ ಅನುಕಂಪದಲ್ಲಿ ಅದ್ದಿ ಅದ್ದಿ ತೆಗೆದಂತೆ ಶಾಸ್ತ್ರಿಗಳು ಆಡಿದ್ದರು. ಆ ಸನ್ನಿವೇಶ ರುಕ್ಕಿಣಿಯ ಮನದಲ್ಲಿ ತನ್ನ ಕತೆಯನ್ನೆ ಮತ್ತೊಮ್ಮೆ ಮರುಕಳಿಸಿದಂತಾಯಿತು. ತನ್ನ ಪತಿ ದೈವಾಧೀನರಾದಾಗ ಸುಶೀಲತೆಯ ಜೊತೆಗೆ ದರುಮನಳ್ಳಿಯ ಇಡೀ ಬ್ರಾಹ್ಮಣ ಸಮುದಾಯ ತನ್ನ ತಲೆ ಬೋಳಿಸಬೇಕೆಂದು ಕಟ್ಟುಗ್ರ ಆಗ್ರಹ ವ್ಯಕ್ತಪಡಿಸಿದಾಗ ಮಾವನವರು ಬಂಡೆಯಂತೆ ಅಚಲವಾಗಿ ನಿಂತು ಅವರೆಲ್ಲರನ್ನೂ ಏಕಾಂಗಿಯಾಗಿ ವಿರೋಧಿಸಿದ್ದರು. ಈ ಎಳೆಪ್ರಾಯದ