________________
ಸಮಗ್ರ ಕಾದಂಬರಿಗಳು ع ع ಅವಳನ್ನು ಶಾಂತಗೊಳಿಸಲು ಯತ್ನಿಸುತ್ತಿದ್ದರು. ಆದರೆ ಅವರ ಗಾಡಿ ಬ್ರಾಹ್ಮಣಕೇರಿಯ ಅವರ ಮನೆಯ ಮುಂದಿನ ಬೀದಿಯನ್ನು ದಾಟುವವರೆಗೂ ಸರಸಿಯ ಬಿಕ್ಕು ಕೇಳಿಸುತ್ತಲೇ ಇತ್ತು... ಎತ್ತಿನ ಬಂಡಿ ದರುಮನಹಳ್ಳಿಯ ಗಡಿ ದಾಟುತ್ತಲೆ, ಮಾವಯ್ಯ ದನಿ ತಗ್ಗಿಸಿ ಹೇಳಿದರು: “ಕೊಂಚಕಾಲ ಸಹಿಸಿದರೆ ಎಲ್ಲವೂ ಸರಿಹೋಗುತ್ತೆ. ತಂಗಿಯ ಸ್ವಭಾವ ಚಿಕ್ಕಂದಿನಿಂದಲೂ ಅಂಥದೇ. ಊಟಕ್ಕೆ ಕುಳಿತಾಗ ಇವರ ಅಕ್ಕನಿಗಿನ್ನ ಇವಳಿಗೇ ಮುಂಚೆ ಇಡಬೇಕು...(ಯಾವುದೋ ಕಾಯಿಲೆಯಿಂದ ತೀರಿಕೊಂಡಿದ್ದ ಹಿರಿಯ ಮಗಳ ನೆನಪಾಗಿ ಭುಜದ ಮೇಲಿನ ವಲ್ಲಿಯಿಂದ ಕಣ್ಣೂರೆಸಿಕೊಂಡು ಮಾತು ಮುಂದುವರಿಸಿದರು) ಇಲ್ಲದಿದ್ದರೆ ಮುನಿಸು, ಬಟ್ಟೆ ಬರೆ ವಿಷಯದಲ್ಲೂ ಅಷ್ಟೆ - ಇವಳ ಅಕ್ಕನಿಗೆ ಲಗ್ನವಾದಾಗ ಇವಳಿನ್ನೂ ಚಿಕ್ಕವಳು. ಧಾರೆಗೆ ತಂದ ಸೀರೆಯನ್ನು ಮೊದಲು ತನಗೆ ಉಡಿಸಿ, ಆಮೇಲೆ ಅಕ್ಕನಿಗೆ-ಎಂದು ಹಟ ಹಿಡಿದ್ದಳು...ಇಂಥ ಸಣ್ಣಪುಟ್ಟ ದುರ್ಗುಣಗಳನ್ನು ಬಿಟ್ಟರೆ, ಉಳಿದ ವಿಷಯಗಳಲ್ಲಿ ಸುಶೀಲೆ ಅಂಥ ಕೆಟ್ಟವಳೇನಲ್ಲ. ಮೊದಲು ದುಡುಕಿ, ಅನಂತರ ಪಶ್ಚಾತ್ತಾಪ ಪಡ್ತಾಳೆ-ನಿನ್ನ ವಿಚಾರದಲ್ಲೂ ಅಷ್ಟೆ...” ಮಿಕಿ ಮಿಕಿ ಕಣ್ಣು ಬಿಡುತ್ತ, “ನೀವು ಹೇಳೋದೊಂದೂ ನನಗರ್ಥವಾಗ್ತಾ ಇಲ್ಲ” ಎಂದಳು. ಶಾಸ್ತ್ರಿಗಳು ಹಿಂದಿನ ರಾತ್ರಿ ನಡೆದುದನ್ನೆಲ್ಲ ಸಾಂಗವಾಗಿ ವಿವರಿಸಿದರು: “ಅವಳಿಗೆ ಕೋಪ ಬಂದದ್ದು ನೀನು ಎಲ್ಲರಂತೆ ವಿಧವೆಯಾದ ಕೂಡಲೆ ಮಂಡೆ ಕೂದಲು ತೆಗೆಸಲಿಲ್ಲ ಎಂಬ ಕಾರಣಕ್ಕಾಗಿ, ಅಷ್ಟೆ, ಆ ಕ್ರಿಯೆಯೊಂದು ನಡೆದುಹೋಗಿದ್ದರೆ ಎಲ್ಲವೂ ಸಲೀಸಾಗ್ತಿತ್ತು ಅಂತ ಕಾಣುತ್ತೆ” ಕನಸಿನಲ್ಲಿ ಮಾತಾಡುವವಳಂತೆ, “ಇರಬಹುದು” ಎಂದಳು ರುಕ್ಕಿಣಿ. ಅವಳ ಮನಸ್ಸೆಲ್ಲ ನೆನ್ನೆ ರಾತ್ರಿ ಕತ್ತರಿ ಹಿಡಿದ ಅತ್ತೆಯ ಭಯಾನಕ ಚಿತ್ರವನ್ನು ಕಲ್ಪಿಸಿಕೊಳ್ಳುವುದರಲ್ಲಿಯೇ ತಲ್ಲೀನಿವಾಗಿತ್ತು... ಆದರೆ ಅವಳ ಅಂತರ್ಮುಖತೆ ಬಹುಕಾಲ ಉಳಿಯಲಿಲ್ಲ. ದಾರಿಯುದ್ದಕ್ಕೂ ಅಕ್ಕಪಕ್ಕದ ಹೊಲಗಳಲ್ಲಿ ಹಳದಿ ವರ್ಣದ ಹುಚ್ಚೆಳ್ಳಿನ ಹೂವು ಅರಿಶಿನ ಗೊಂಡೆಗಳನ್ನು ಚೆಲ್ಲಿದಂತೆ ಆ ಬಯಲನ್ನೆಲ್ಲ ಸುಂದರಗೊಳಿಸಿತ್ತು. ಆ ಹೂವುಗಳನ್ನು ವೀಕ್ಷಿಸುತ್ತಿದ್ದಂತೆ, ರುಕ್ಕಿಣಿಯ ಮನಸ್ಸು ಬೇರೆತ್ತಲೊ ಹರಿಯಿತು...ಕಾರ್ತಿಕಮಾಸ. ಊರಿಗೆ ಆಗಲೆ ದೀಪಾವಳಿ ಬಂದು ಹೋಗಿ ಕೇವಲ ಕೆಲ ಸಮಯ ಕಳೆದಿತ್ತು....