ಪ್ರಾಚೀನಕಾಲದಲ್ಲಿ ನಮ್ಮ ಜೀವನವು ಧರ್ಮದ ಆಧಾರದ ಮೇಲೆ ಬೆಳೆದಿದ್ದದರಿ೦ದ ಆಗಿನ ನಾಗರಿಕತೆಯು ಈಗಿನ ನವನಾಗರಿಕತೆಗೆ ಪೂರ್ತಿಯಾಗಿ ವಿರೋಧವಾಗಿತ್ತು. ಸಂಯಮವೇ ಮೂಲಮಂತ್ರ, ವೈರಾಗ್ಯಕ್ಕೋಸ್ಕರ ಸುಖ, ತ್ಯಾಗಕ್ಕೋಸ್ಕರ ಭೋಗ, ಪರಕ್ಕೋಸ್ಕರ ಇಹ, ಈಶ್ವರ ಸಾಕ್ಷಾತ್ಕಾರವೇ ಮುಖ್ಯೋದ್ದೇಶ್ಯ, ಹೀಗಿದ್ದದ್ದರಿಂದ ನಮ್ಮವರು ಉನ್ನತೋನ್ನತವಾದ ಲಕ್ಷ್ಯ ವನ್ನು ಸಾಧಿಸುತ್ತಿದ್ದರು. ವರ್ಣಜಾತಿ ವಿಭಾಗಗಳಿದ್ದರೂರೂ ಯಾವ ವಿಧವಾದ ಅಸಮಾಧಾನವೂ ಇರಲಿಲ್ಲ. ಸಮಾಜದ ಯಾವ ಶ್ರೇಣಿಯಲ್ಲಿದ್ದರೂ, ಯಾವ ಜಾತಿಯಲ್ಲಿ ಹುಟ್ಟಿದ್ದರೂ ನಿಷ್ಕಾಮಕರ್ಮವನ್ನು ಮಾಡಿದರೆ ಮೋಕ್ಷವನ್ನು ಪಡೆಯುವನೆಂದೂ ಅದೇ ಮುಖ್ಯವೆಂದೂ ಐಹಿಕ ಭೋಗವು ತುಚ್ಚವೆಂದೂ ಎಲ್ಲರೂ ನಂಬಿದ್ದರು. ಹೀಗಿದ್ದರೆ ಅಸಮಾಧಾನ ಹೇಗೆ ಬಂದೀತು? ಅಲ್ಲದೆ, ಹಿಂದಿನ ಕಾಲದಲ್ಲಿ ಹಿಮಾಚಲದಿಂದ ರಾಮೇಶ್ವರದವರೆಗೂ ಭರತ ಖಂಡವೆಲ್ಲವೂ ಒಂದೇ ಧರ್ಮಸೂತ್ರದಿಂದ ಕಟ್ಟಲ್ಪಟ್ಟಿತ್ತು. ಎಲ್ಲರಲ್ಲಿಯೂ ದೈವಭಕ್ತಿ, ವೇದ, ರಾಮಾಯಣ ಮಹಾಭಾರತ ಮುಂತಾದ ಧರ್ಮಗ್ರಂಥಗಳಲ್ಲಿ ಪೂರ್ಣವಾದ ನಂಬುಗೆ, ಗೀತಾ, ಗಂಗಾ, ಗಾಯತ್ರಿ ಇವುಗಳಲ್ಲಿ ಶ್ರದ್ಧಾ ಭಕ್ತಿ, ತೀರ್ಥಯಾತ್ರೆಗಳಲ್ಲಿ ವಿಶ್ವಾಸ ಇವುಗಳೆಲ್ಲವೂ ಒಂದೇಯಾಗಿದ್ದುವು. ಆದರಿಂದ ಜನಗಳಲ್ಲಿ ಒಂದು ವಿಧವಾದ ಐಕಮತ್ಯವೂ ಪರಸ್ಪರ ವಾತ್ಸಲ್ಯವೂ ಇದ್ದುವು, ಧರ್ಮವೇ ಅವರ ಜೀವನವಾಗಿತ್ತು.
ಪಾಶ್ಚಿಮಾತ್ಯರ ಪ್ರಾಬಲ್ಯದಿ೦ದ ಐಹಿಕ ಸುಖಕ್ಕೆ ಪ್ರಾಶಸ್ತ್ಯ ಉಂಟಾಯಿತು. ಐಶ್ವರ್ಯವಂತನನ್ನು ಬಡವನು ನೋಡಿ ಅಸೂಯೆ ಪಡುವಂತಾಯಿತು. ವರ್ಣ ಜಾತಿ ಭೇದಗಳಿಂದ ಅತೃಪ್ತಿಯು ಹೆಚ್ಚಿತು. ಇಂದ್ರಿಯ ಸುಖವು ತಾನೇ ತಾನಾಗಿ ಸಂಯಮವನ್ನು ಓಡಿಸಿ ಬಿಟ್ಟಿತು. ಹಿಂದಿನ ಶಿಕ್ಷಾಫಲವೆಲ್ಲಾ ಹೋಗಿ ನಾಸ್ತಿಕ್ಯವುಂಟಾಯಿತು. ಆವಶ್ಯಕತೆ ಇರಲಿ, ಇಲ್ಲದಿರಲಿ, ನಾವು ಮೂಗ