ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ೧೦] ಸುಮತಿ ಮದನಕುಮಾರ ಚರಿತ್ರ ನಿಂತುಕೊಂಡು ಕೊಂಚದಿವಸದಲ್ಲಿ ಇಂಗಿ ಹೋಗುವುದು, ಆ ನೀರಿನ ಸಂಗಡ ಒಂದು ಬಗೆ ಎಕ್ಕಲು ಬಂದು ಬೀಳುವುದು, ಇದರಿಂದ ಭೂಮಿ ಹೆಚ್ಚಾಗಿ ಹುಲಸಾಗುವುದು, ಅದರಲ್ಲಿ ಯಾವುದನ್ನು ನೆಟ್ಟ ರೂ ಬಹು ಚೆನ್ನಾಗಿ ಬೆಳೆಯುವುದು, ಹೀಗೆಂದು ಆ ಹುಡುಗರಿಗೆ ತಿಳಿಸಿದನು. ಅದಕ್ಕೆ ಸುಮತಿಯು- ಜೋಯಿಸರೆ, ಅಲ್ಲೇ ಅಲ್ಲವೆ ಮೊಸಳೆ ಯೆಂಬ ಕೆಟ್ಟ ಜಂತು ಇರತಕ್ಕದ್ದು ? ಎಂದು ಕೇಳಿದನು. ಮದನನು - ಜೋಯಿಸರೆ ಅದು ಏನು ? ಎನಲು, ರಾಮಜೋಯಿಸನು ಅದೊಂದು ಕೆಟ್ಟ ಜಂತು, ಸ್ವಲ್ಪ ಹೊತ್ತು ಭೂಮಿಯಮೇಲೂ, ಸ್ವಲ್ಪ ಹೊತ್ತು ನೀರಿನಲ್ಲಿಯೂ ಇರುತ್ತೆ, ಇದು ಮೊಟ್ಟೆ ಯನ್ನು ಹಾಕಿ ಮರಳಿನಲ್ಲಿ ಹೂಳುವುದು, ಬಿಸಿಲಿನಲ್ಲಿ ಕೆಲವುವಾರಗಳವರೆಗೂ ಮರಳು ಕಾದು ಶಖೆಯು ಮೊಟ್ಟೆಗೆ ವ್ಯಾಪಿಸುವುದು, ಕೊನೆಗೆ ಮೊಟ್ಟೆ ಒಡೆದು ಮೊಸಳೆ ಮರಿಯಾಗುವುದು, ಇದು ಮೊದಲು ಚಿಕ್ಕದಾಗಿ ಇರುವುದು. ಮೈ ಉದ್ದ, ಕಾಲು ನಾಲ್ಕು, ಆ ಕಾಲುಗಳು ಚಿಕ್ಕ ಚಿಕ್ಕದಾಗಿ ಇರು ವವು, ಭೂಮಿಯಮೇಲೆ ನಡೆಯುವುದಕ್ಕೂ, ನೀರಿನಲ್ಲಿ ಈಜುವುದಕ್ಕೂ, ಅನುಕೂಲವಾಗಿದೆ, ಅದರ ಬೆನ್ನಿನ ಮೇಲಿನಿಂದ ಬಾಲದ ಕೊನೇ ವರೆಗೂ ಮೇಲುಗಡೆ ಗರಗಸದಹಾಗೆ ಇದೆ. ಅದು ನೋಡುವುದಕ್ಕೆ ದೊಡ್ಡ ಹಲ್ಲಿಯ ಹಾಗೆ ಕಾಣುವುದು, ಇದು ಸಮುದ್ರದಲ್ಲಿಯೂ ಹೊಳೆ ಯಲ್ಲಿಯೂ ದೊಡ್ಡ ಕೊಳದಲ್ಲಿಯೂ ಸಿಕ್ಕುವುದು. ಇದರ ಹಲ್ಲು ಗರಗಸದಹಾಗೆ ಸಾಲಾಗಿರುವುದು, ಇದರ ಹತ್ತಿರಕ್ಕೆ ದನಕರುಗಳಾಗಲಿ ಮನುಷ್ಯರಾಗಲಿ ಹೋದರೆ ಬಾಲದಿಂದ ಹೊಡೆದು ನೀರಿನೊಳಕ್ಕೆ ಎಳೆದುಕೊಂಡು ಹೋಗುವುದು, ಇದು ಹೋಗುವಾಗ ನೀರು ಬಹಳ ವಾಗಿ ಕದಲುವುದು, ಈಟಿಯನ್ನು ಹಿಡಿದು ಅದರ ಬಾಯಿಯೊಳಕ್ಕೆ ಚುಚ್ಚಿ ಇದನ್ನು ಕೊಲ್ಲುವರು, ಬಲೆಯನ್ನು ಹಾಕಿ ಅದನ್ನು ಹಿಡಿಯು ವರು, ಕೆಲವು ಕಡೆಯಲ್ಲಿ ಬೆಸ್ತರು ಎರಡು ತುದಿಯಲ್ಲಿಯೂ ಮೊನೆ ಯಾದ ಒಂದು ಬಾಕನ್ನು ಮಧ್ಯೆ ಹಿಡಿದು ಅದರ ಬಾಯಿಯೊಳಕ್ಕೆ ಕೈಯನ್ನು ಹಾಕುವರು. ಮೊಸಳೆಯು ಮನುಷ್ಯರನ್ನು ನುಂಗ ಬೇಕೆಂದು ಬಾಯನ್ನು ಮುಚ್ಚಿಕೊಳ್ಳುವುದು. ಆಗ ಅದರ ಬಾಯಿಗೆ ಬಾಕು ಚುಚ್ಚಿ ಕೊಂಡು ಅದು ಸಾಯುವುದು.