ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಸ್ತ್ರ ಚಿಕಿತ್ಸಾ ಪದ್ಧತಿಯ ಇತಿಹಾಸ ೫

ಮತೀಯ ಪುನರುತ್ಥಾನ (Renaissance)ದ ನಂತರ ಈ ತೆರನ ಕಟ್ಟುಪಾಡುಗಳು ಸಡಿಲವಾದವು. ಆಂಡ್ರಿಯಾಸ್ ವೆಸೇಲಿಯಾಸ್ (೧೫೧೪-೬೪) ನಂತರ ಉತ್ಸಾಹೀ ವೈದ್ಯರು ಶವಗಳನ್ನು ಕತ್ತರಿಸಿ, ವಿವಿಧ ಅವಯವಗಳ ರಚನೆಯನ್ನು ವಿವರಿಸಿ ಗ್ರಂಥಗಳನ್ನು (Anatomy) ಪ್ರಕಟಿಸಿದರು. ವೈದ್ಯಶಾಸ್ತ್ರದ ಮುನ್ನಡೆಗೆ ಇದೇ ಮೊದಲ ಹೆಜ್ಜೆಯಾಯಿತು.
   ಶಸ್ತ್ರ ವೈದ್ಯದ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸಾ ಕ್ರಮಗಳಲ್ಲಿ ನೋವಿನ ಸಮಸ್ಯೆ ಪ್ರಧಾನವಾಗಿದ್ದು, ಈ ಪದ್ಧತಿಯ ಪ್ರಗತಿಗೆ ಇದು ಅನಾದಿಯಿಂದಲೂ ಅಡ್ಡಿಯಾಗಿತ್ತು. ನೋವಿನ ಭಯದಿಂದ ತೀರಾ ಸರಳ ಶಸ್ತ್ರಚಿಕಿತ್ಸೆಗೂ ಯಾರೂ ಒಪ್ಪುತ್ತಿರಲಿಲ್ಲ. ಅನಿವಾರ್ಯದ ಸಂದರ್ಭಗಳಲ್ಲಿ ರೋಗಿಯನ್ನು ನಾಲ್ಕಾರು     ಜನ ಬಿಗಿಯಾಗಿ ಹಿಡಿದುಕೊಂಡು ಕ್ಷಣಾರ್ಧದಲ್ಲಿ ಚಿಕಿತ್ಸೆಯನ್ನು ಮುಗಿಸಬೇಕಾಗುತ್ತಿತ್ತು. ಅದರಿಂದ ಕಳೆದ ಶತಮಾನದ ಪೂರ್ವಾರ್ಧದವರೆಗೂ  ಕುರು, ಬಾವುಗಳನ್ನು ಒಡೆದು ಕೀವನ್ನು ಹೊರಗೆ ಬಿಡುವುದು, ಕೊಳೆತ ಕೈಕಾಲುಗಳ ಅಂಗಚ್ಛೇದಗಳಂತಹವೇ ಬಹುಪಾಲು ಶಸ್ತ್ರ-ಚಿಕಿತ್ಸೆಗಳಾಗಿರುತ್ತಿದ್ದವು. ಕ್ರಿ.ಶ. ೧೮೪೦ರ ದಶಕದ ಸಮಯದಲ್ಲಿ ಮನುಷ್ಯರ ಸಂಪೂರ್ಣ ಜ್ಞಾನ ತಪ್ಪಿಸಬಹುದಾದ "ಅರಿವಳಿಕಾ" ಸಾಧನಗಳು (Anaesthetics) ಪ್ರಚಾರಕ್ಕೆ ಬಂದವು. ಮೊದಲು ಅಮೆರಿಕೆಯಲ್ಲಿ ಬಳಕೆಗೆ ಬಂದ ಈಥರ್, ಮತ್ತು ನೈಟ್ರಸ್ ಆಕ್ಸೈಡ್‍ಗಳಲ್ಲದೆ,  ನಂತರ ಇಂಗ್ಲೆಂಡ್‍ನಲ್ಲಿ ಬಳಕೆಗೆ ಬಂದ ಕ್ಲೋರೋಫಾರಂ ಅನಿಲಗಳು ನೋವು ನಿವಾರಣೆಯ ಹಾದಿಯಲ್ಲಿ ಮಹಾನ್ ಜಿಗಿತಕ್ಕೆ ನಾಂದಿಯಾದವು. ಶಸ್ತ್ರಚಿಕಿತ್ಸಾ ಪದ್ಧತಿಯಲ್ಲಿ ಹೊಸ ಅಧ್ಯಾಯ ಇಲ್ಲಿಂದಲೇ ಆರಂಭವಾಯಿತು.
   ಗಾಯಗಳಲ್ಲಿ ಕೀವಾಗಿ ನಂಜೇರುವುದು ಸಹಾ ಶಸ್ತ್ರ-ಚಿಕಿತ್ಸೆಗಳ ಯಶಸ್ಸಿಗೆ ಮಹತ್ತರದ ಅಡಚಣೆಯಾಗಿತ್ತು. ಕಳೆದ ಶತಮಾನದ ಅಂತಿಮ ದಶಕಗಳವರೆಗೂ ಗಾಯಗಳಾದವರು ಮತ್ತು ಶಸ್ತ್ರಚಿಕಿತ್ಸೆಗೊಳಗಾದವರು, ಬಹುಪಾಲು ನಂಜೇರಿ ಸಾಯುತ್ತಿದ್ದರು. ಕಣ್ಣಿಗೆ ಗೋಚರಿಸದ ಸೂಕ್ಷ್ಮ ಜೀವಾಣುಗಳು ನಮ್ಮ ಸುತ್ತಲ ವಾತಾವರಣದಲ್ಲಿದ್ದು, ಅವು ಗಾಯಗಳಲ್ಲಿ ಸೋಂಕು ಉಂಟು ಮಾಡುವುದೇ ನಂಜೇರುವುದರ ಕಾರಣವೆಂಬುದು ವೈದ್ಯರ ಅರಿವಿಗೆ ಬರಲು ಅಲ್ಲಿಯವರೆಗೂ ಕಾಯಬೇಕಾಯಿತು. ಸೆಮೆಲ್‍ವೈಸ್, ಪ್ಯಾಶ್ಚರ್, ಲಿಸ್ಟರ್ ಮತ್ತು ರಾಬರ್ಟ್ ಖಾಕ್ ಮುಂತಾದ ಮಹಾನ್ ಸಂಶೋಧಕರ ಕ್ರಮಗಳಿಂದ ಶುಚಿತ್ವದ ನಿಯಮಗಳು ಉದಯವಾದವು. ಗಾಯಗಳಲ್ಲಿ ಕೀವಾಗುವುದಕ್ಕೆ ಸೂಕ್ಷ್ಮ ರೋಗಾಣುಗಳೇ (Microbes) ಕಾರಣವೆಂಬುದು ಸಾಬೀತಾಯಿತು. ಅವುಗಳ ವಿನಾಶಕ್ಕೆ ಪ್ರಬಲ