ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಕಾಂಕ್ಷೆ

೬೧

"ಹೇಳು ರಾಜಿ....ನಿನಗೆ ನಾನು ಹೀಗೇ ಇರುವುದು ಇಷ್ಟವೋ, ಇಲ್ಲ ಸೈನ್ಯಕ್ಕೆ ಸೇರಿ, ನಾನೂ ಒಂದು ಪದವಿ ಸಂಪಾದಿಸಿಕೊಂಡು ' ದೊಡ್ಡ ಡಾಕ್ಟರು' ಅನ್ನಿಸಿಕೊಳ್ಳೋದು ಇಷ್ಟವೋ ?”
"......"
“ ಈಗ ನೋಡು....ನಮ್ಮವರೆಲ್ಲ ನನ್ನ ಹೆಚ್ಚು ಕಡಿಮೆ ಕೀಳಾಗೇ ಕಾಣ್ತಾರೆ .”
“ನಾನು ಒಬ್ಬನೇ ಇದ್ದಿದ್ರೆ ನನಗಿದರ ಯೋಚನೇನೇ ಇರ್ತಿರಲಿಲ್ಲ. ಆದರೆ ನಿನ್ನ ಮದುವೆಯಾದೆ. ನನ್ನ ಹೆಂಡತಿಯಾದ್ದಕ್ಕೆ ನೀನು ತಲೆತಗ್ಗಿಸೋ ಹಾಗಾಗಬಾರದು. ನಿನಗೋಸ್ಕರ ನಾನೀಯೋಚನೆ ಮಾಡ್ತಿರೋದು....ಎರಡು ಮೂರು ತಿಂಗಳಾದ ಮೇಲೆ ನಮಗೆ ಕ್ವಾರ್ಟಸ್ ಕೊಡ್ತಾರೆ....ಆಗ ನಿನ್ನ ನಾನಿರೋಜಾಗಕ್ಕೆ ಕರೆಸಿಕೋಬಹುದು.
"ನಾನೀಗ ಸೈನ್ಯಕ್ಕೆ ಸೇರಿಕೊಂಡರೆ....... ನನಗೆ ನಾಲ್ಕಾರ ಕಡೆ ಅನುಭವ ದೊರೆಯುತ್ತೆ ಕಷ್ಟ ಪಟ್ಟು ಕೆಲಸಮಾಡಿ ಒಂದು ಹೆಚ್ಚಿನ ಸ್ಥಾನ ಪಡೀತೀನಿ.... ... ಆ ಮೇಲೆ ಹಿಂತಿರುಗಿ ಬಂದರೆ.... ನಮ್ಮವರಿಗೆಲ್ಲ ನಾಚಿಕೆಯಾಗಬೇಕು ......ಹಾಗೆ ಬರಬೇಕು. ನನ್ನ ಅಂತಸ್ತು ಯಾವಾಗ ಹೆಚ್ಚುತ್ತೋ ಆಗ ನಿನ್ನ ಅಂತಸ್ತು ತಾನಾಗಿಯೇ ಹೆಚ್ಚುತ್ತೆ. ನಿನಗೂ ಎಲ್ಲ ಕಡೆಯಿಂದಲೂ ಗೌರವವಿರುತ್ತೆ....
"....... "
"ಹೌದೋ ಅಲ್ಲವೋ ನೀನೇ ಹೇಳು ? ಸೈನ್ಯಕ್ಕೆ ಸೇರಿಕೊಂಡು ಬಿಟ್ಟಾಕ್ಷಣಕ್ಕೆ ನನ್ನೇನೂ ಯುದ್ಧ ಭೂಮಿಗೆ ಕಳಿಸೋದಿಲ್ಲ. ಡಾಕ್ಟರು ಗಳಿಗೆಲ್ಲಾ ಆಸ್ಪತ್ರೆಗಳಲ್ಲೇ ಕೆಲಸ, ಸೈನಿಕರಿಗೆ ಚಿಕಿತ್ಸೆ ನೀಡೋದಕ್ಕೆ ನಮ್ಮನ್ನ ತೆಗೆದುಕೊಳ್ಳೋದು....ಅದೂ ಅಲ್ಲದೆ ಈಗಿನ ಪರಿಸ್ಥಿತೀಲಿ ನಮ್ಮನ್ನ ನಮ್ಮ ದೇಶದಿಂದ ಹೊರಕ್ಕೆ ಕಳಿಸೋದೇ ಅನುಮಾನ.... ಆದ್ದರಿಂದ ನಮಗೇನೇನೂ ಪ್ರಾಣಭಯವಿರೊಲ್ಲ....ಹೇಳು ನಾನು ದೊಡ್ಡ ಮನುಷ್ಯಾಂತನ್ನಸ್ಕೊಳ್ಳೋದು ನಿನಗಿಷ್ಟವಿದ್ಯೋ ಇಲ್ವೋ ?”
"ಇದೆ ...."