ಪುಟ:Banashankari.pdf/೧೧೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ

ಬನಶಂಕರಿ ೧೦೫

"......" “ ಅಮ್ಮೀ ಅಂತ !" "ಹೋಗಕ್ಕ..." " ಯಾವ ಮೂಲೇಲಿ ಮನೆಮಾಡಿದಾರೋ ನಾರಾಯಣರಾಯರು ?" " ಗೊತ್ತಿಲ್ಲ ಅಕ್ಕ" " ಅಂತೂ ಹುಷಾರಾಗಿರ್ಬೇಕಮ್ಮ." "ಹೇಗೆ ಹುಷಾರಾಗಿ ಇರ್ಬೇಕೂಂತ ಇಷ್ಟು ವರ್ಷ ನೀನೇ ಅಲ್ವ ಅಕ್ಕ ತರಬೇತಿ ಕೊಟ್ಟಿರೋದು?" "...ಇದೇ ಊರಲ್ಲೇ ಇರ್ತೀಯಲ್ಲ, ಅದೇ ಸಮಾಧಾನ." ಕತ್ತಲಾಯಿತು. ದೇವಸ್ಥಾನಕ್ಕೆ ಸೇರಿದ್ದ ಗಾಡಿಯೊಂದು ಬಂದು ರಾಮಶಾಸ್ತ್ರಿಯ ಮನೆಯ ಮುಂದೆ ಬೀಡುಬಿಟ್ಟಿತು. ಎತ್ತರದ ಕಮಾನಿತ್ತು ಗಾಡಿಗೆ, ಅದೇ ವರ್ಷ ಹಾಸನದ ಜಾತ್ರೆಯಿಂದ ಹೊಸತಾಗಿ ಕೊಂಡು ತಂದಿದ್ದ ಸೊಗಸಾದ ಹೋರಿಗಳು. ಅಲ್ಲಿ ಬಾಲ ಬೀಸಿಕೊಂಡು ಒಣಹುಲ್ಲು ಮೇಯುತ್ತಾ ಅವು ನಿಂತಿದ್ದರೆ, ಅವುಗಳ ಕೊರಳ ಹಾರವಾಗಿದ್ದ ಸಾಲುಘಂಟೆಗಳ ಟಿಣ್ ಟಿಣ್‍ ನಾದ ಸಂಗೀತದ ಅಲೆಗಳ ಹಾಗೆ ಕಿವಿಯ ದಂಡೆಯನ್ನಪ್ಪುತ್ತಿತ್ತು.

     ನಾರಾಯಣರಾಯರು ಬಂದರು. ಅವಸರ ದುಗುಡ ತವಕಗಳನ್ನೆಲ್ಲ ಬದಿಗಿರಿಸಿ ಶಾಂತವಾದ ಸ್ವರದಲ್ಲಿ, ರಾಮಶಾಸ್ತ್ರಿಯ ಪತ್ನಿಯನ್ನುದ್ದೇಶಿಸಿ, " ಚೆನ್ನಾಗಿದ್ದೀರಾ?"  ಎಂದರು: ರಾಮಶಾಸ್ತ್ರಿ ಎಲ್ಲಿ?" ಎಂದು ಕೇಳಿದರು.

"ಯಾರೋ ಸ್ನೇಹಿತರನ್ನ ನೋಡ್ಬೇಕೂಂತ ಮಧ್ಯಾಹ್ನವೇ ಹೋದ್ರು--ನಾನು ಚೆನ್ನಾಗಿದ್ದೀನಿ." ಸುಖವೊ ದುಃಖವೊ ಎನ್ನಲಾರದೊಂದು ಭಾವನೆಯ ಗು೦ಗಿನಲ್ಲಿ ಬಾಗಿಲ ಮರೆಯಲ್ಲಿ ಅಮ್ಮಿ ನಿಂತಿದ್ದಳು. ರಾಯರ ದೃಷ್ಟಿಗೆ ಆಕೆ ಬೀಳದಿರಲಿಲ್ಲ. ನಿರ್ದಿಷ್ಟವಾಗಿ ಯಾರನ್ನೂ ಉದ್ದೇಶಿಸದೆ ಅವರೆಂದರು : "ಇನ್ನೊಂದು ಘಂಟೆಯೊಳಗಾಗಿ ಗಾಡಿ ಕಟ್ತಾನೆ. ನಾನು ಮೊದ್ಲೇ ಹೋಗಿರ್ತಿನಿ ಬರ್ಲಾ ನಾನು?" ಉತ್ತರಕ್ಕೆ ಅವಕಾಶವಿಲ್ಲದ ಹಾಗೆ ಬೀದಿಗಿಳಿದು ಅವರು ನಡೆದೇಬಿಟ್ಟರು. ಅಮ್ಮಿ ತನ್ನ ಸಣ್ಣ ಪಟ್ಟ ಸಾಮಾನುಗಳ ಗಂಟು ಕಟ್ಟಿದಳು.ಜೀವನಹಳ್ಳಿಯಿಂದ ಹೊರಟುಬಂದ ಆ ದಿನ...ಕಾವೇರಿ...ಧರ್ಮಾವರ ಸೀರೆ ಇನ್ನೂ ಉಳಿದಿತ್ತು ಆ ಸೀರೆ, ಚಳಿಗಾಲದಲ್ಲಿ ಕಂಬಳಿಯ ಜತೆಯಲ್ಲಿ ಹೊದ್ದುಕೊಳ್ಳಲು ಅಮ್ಮಿ ಅದನ್ನೇ ಉಪಯೋಗಿಸುತ್ತಿದ್ದಳು. ಕೊನೆಯ ಅಳು ಬೀಳ್ಕೊಡುಗೆ, ಇಲ್ಲಿ ಮಂಗಳವಾದ್ಯವಿರಲಿಲ್ಲ. ಸಿಂಗರಿಸಿರಲಿಲ್ಲ, ಗಾಡಿ-ಎತ್ತುಗಳನ್ನು, ಕೈ‍ಹಿಡಿದವಳ ಕಡೆಗೆ ಕಳ್ಳನೋಟ ಬೀರುವ ಪತಿರಾಯನಿರಲಿಲ್ಲ. ಮದುವಣಗಿತ್ತಿಯಾಗಿ ಹೋಗುತ್ತಿರಲಿಲ್ಲ ಬನಶಂಕರಿ.