ಪುಟ:Banashankari.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ೧೯೫

“ ಕಾಗದ ಬರೀಲೇನು ? ” "ಬೇಡ ಅವರಿಗೇನು ತೊಂದರೆಯೋ ಏನೋ..." .ಮೊದಲ ವರ್ಷದ ಪರೀಕ್ಷೆಯಲ್ಲಿ ರಾಜಣ್ಣ ತೇರ್ಗಡೆಯಾದ,ಅಂಕಗಳು ಚೆನ್ನಾಗಿಯೇ ಬಂದಿದ್ದುವು. ಪ್ರಯಾಸಪಟು ದೊರಕಿಸಿಕೊಂಡ ಉಚಿತ ವೇತನ, ಮು೦ದೆಯೂ ದೊರೆಯುವುದು ಖಚಿತವಾಯಿತು. ಆ ರಜೆಯಲ್ಲೊಂದು ದಿನ ಅಮ್ಮಿ ಹೇಳಿದಳು:

" ರಾಜಣ್ಣ, ಒಂದು ವಿಷಯ ಕೇಳ್ತೀನಿ. ಆಗೊಲ್ಲ ಅನ್ಬೇಡ." "ಇದೇನಮ್ಮಿ ಹೊಸ ರೀತಿ ಶುರು ಮಾಡ್ದೆ?" " ಎಷ್ಟೆಂದರೂ ನೀನು ವಯಸ್ಸಿಗೆ ಬಂದೋನು.. ನಾನು ಮುದುಕಿ: ನಿನ್ನ ಮಾತು ಕೇಳ್ಬೇಡ್ವೆ?"

"ಸಾಕು ತಮಾಷೆ.. ಅದೇನು ಹೇಳು." "ಆಚೆ ಮನೆ ಶೇಷಮ್ಮ, ಅವರಣ್ಣ ಅತ್ತಿಗೆ ಜತೇಲಿ ತಿರುಪತಿಗೆ ಹೋಗಾರಂತೆ. ಅದೇನೋ ಹರಕೆ ಇದೆಯಂತೆ." "ಅದಕ್ಕೆ...?" " ಅವರ‍್ಜತೇಲಿ ನಾನೂ ಹೋಗಿ ಬರಬೇಕೂಂತ ಆಸೆ." " ನಾವೆಲಾ ಹೋಗಿದ್ದಲ್ಲಮ್ಮಿ ಹೋದ್ವರ್ಷ? " "ಇಲ್ಲಾ ಅಂದ್ರೆ...ಈಗ ಯಾಕೋ ಹೋಗ್ವೇಕನೂಂತ ಆಸೆಯಾಗಿದೆ. ಇದೊಂದೇ ಸಲ, ಇನ್ನು ಯಾವತ್ತೂ ಹೋಗಲ್ಲ." "ಅದ್ದಕ್ಕೆ ನಾನೇನು ಮಾಡ್ಬೇಕೂಂತ?" "ಒಂದಿಪ್ಪತ್ತು ರೂಪಾಯಿ ಖರ್ಚು ಮಾಡೋಕೆ ಒಪ್ಗೆ ಕೊಡು" "ನನ್ನದೇನಮ್ಮಿ ಒಪ್ಗೆ? ಹೋಗ್ಲೇಬೇಕೂಂದ್ರೆ ಹೋಗಿ ಬಾ" "ಬೇಗ್ನೆ ಬಂದ್ಬಿಡ್ತೀನಿ ರಾಜ"

"ಯಾಕಮ್ಮಿ ನನ್ನನ್ನು ಕರೆಯೋಲ್ಲ?" ಆ ಪ್ರಶ್ನೆಗೆ ಉತ್ತರ ಒಂದು ನಿಮಿಷ ತಡವಾಯಿತು.. "ಇಬ್ಬರಿಗೆ ಖರ್ಚು ಜಾಸ್ತಿ, ನೀನೇನು, ದೊಡ್ಡೋ ನಾದ್ಮೇಲೆ ಎಷ್ಟು ಸಾರೆ ತಿರುಪತಿಗೆ ಹೋಗ್ತಿಯೋ ಏನೊ?"

"ಹೋಗದೆ ಉಂಟೆ?" ಎಂದು ರಾಜಣ್ಣ ತಲೆತಗ್ಗಿಸಿ ನಕ್ಕ. ಒಂದು ವಾರವಾದರು ಶೇಷಮ್ಮನವರ ಗುಂಪು ವಾಪಸು ಬರುವ ಚಿಹ್ನೆಯೇ ಇರಲಿಲ್ಲ.ಆ ಮುಸ್ಸಂಜೆ ಮನೆಗೆ ಮರುಳುತ್ತ,ಅಮ್ಮಿ ಬರುವುದು ಇನ್ನೂ ಎಷ್ಟು ದಿನವೊ. ಸದ್ಯ ಹಾದೀಲಿ ಕಾಹಿಲೆ ಮಲಗದಿದ್ದರೆ ಸಾಕು ಎಂದು ಚಿಂತಿಸಿದ ರಾಜಣ್ಣ, ಮನೆಗೆ ಬರುತ್ತಿದ್ದಂತೆ,ಅಷ್ಟು ದೂರದಿಂದಲೆ, ಮನೆಯ ಒಂದುಗಡೆ ವಯಸ್ಸಾದ ಅಪರಿಚಿತರು ಯಾರೋ ಕುಳಿತಿದ್ದಂತೆ ತೋರಿತು. ಕೆ೦ಪು ಸೀರೆಯುಟ್ಟು ,ತಲೆ ಮುಚ್ಚಿಕೊಂಡು,ಬಳಿಯಲ್ಲೆ ಪುಟ್ಟ ಗಂಟು ಇರಿಸಿಕೊಂಡದ್ದ ಅಜ್ಜಮ್ಮ.ಬಾಳೆಮಣ್ಣೂರಿನಿಂದ ಅಮ್ಮಿಯ ಪರಿಚಿತರು ಯಾರಾದರೂ ಬಂದಿರುವರೇನೋ ಎಂದು ರಾಜಣ್ಣ ಲಗುಬಗೆಯಿಂದ