ಪುಟ:Chirasmarane-Niranjana.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೦೫

  "ಒಂದು ವೇಳೆ ಮೇಲಿನಿಂದ ನಿರ್ದೇಶ ಬರದೇ ಇದ್ದರೆ?" 
  ಉತ್ತರ ಸ್ಪಷ್ಟವಾಗಿತ್ತು. 
  "ಬರದೇ ಇದ್ದರೆ ಈಗ ನಾವು ಮಾಡಿರೋ ತೀರ್ಮಾನದಂತೆ ನಡೆಯೋದು." 
  ಕಾರ್ಯದರ್ಶಿಯಾದ ಚಿರುಕಂಡ ಜವಾಬುದಾರ ವ್ಯಕ್ತಿಯಾಗಿ ಹಳ್ಳಿಯಲ್ಲೇ ಇರಬೇಕೆಂದು ಎಲ್ಲರೂ ಹೇಳಿದರು. ಚಿರುಕಂಡನ ಬಳಿಯಲ್ಲೇ ಇರಲು ಕೋರ ಬಯಸಿದ. ಬಾವುಟ-ಹಾಡುಗಳ ಸಂಗಾತಿಯಾದ ಕಣ್ಣನ ಉಪಯೋಗವಿದ್ದುದೂ    ಜನರ ನಡುವೆ. ಅಪ್ಪು , ಅಬೂಬಕರ್ ಮತ್ತು ಸಾಹಸಿಗಳಾದ ಸ್ವಯಂ  ಸೇವಕರಿಬ್ಬರು-ಇಷ್ಟು ಜನ ಅಡವಿ ಸೇರುವುದೆಂದು ನಿರ್ಧಾರವಾಯಿತು....
  ಯಾವಾಗಲೂ ಮಹಾ ಸಂಭವಗಳನ್ನೇ ನಿರೀಕ್ಷಿಸುತ್ತಿದ್ದ ಅಪ್ಪು,ಮನೆಯಲ್ಲಿ    ಹೆಂಡತಿ ಜಾನಕಿಯೊಬ್ಬಳನ್ನೇ ಕರೆದು ಹೇಳಿದ :
  "ಒಂದು ಗುಟ್ಟು....ಯಾರಿಗೂ ಹೇಳ್ಬಾರ್ದು." 
  ಆ ದಿನ ಪ್ರತಿ ಕ್ಷಣವೂ ಕೇಡನ್ನು ಇದಿರುನೋಡುತ್ತಿದ್ದ ಜಾನಕಿ "ಹೂಂ"   ಎಂದಳು.
  "ನಾನು ಇವತ್ತು ರಾತ್ರೆ ಭೂಗತನಾಗ್ತೇನೆ. ಅರ್ಥವಾಯ್ತೆ?" 
  ಅಪ್ಪುವಿನ ಹೆಂಡತಿ ಅದೇನೆಂದು ತಿಳಿಯದ ಅಜ್ಞಾನಿಯಾಗಿರಲಿಲ್ಲ. ಆಕೆ             ಅರ್ಥವಾಯಿತೆಂದು ಮೌನವಾಗಿ ತಲೆಯಾಡಿಸಿದ್ದನ್ನು ಕಂಡು ಅಪ್ಪು 

ಮುಂದುವರಿಸಿದ:

  "ನೀನು ನನ್ನ ಹೆಂಡತಿ ಮಾತ್ರವಲ್ಲ. ಸಂಗಾತಿ ಕೂಡ. ಎಂಥ ಆಪತ್ತಿನಲ್ಲೂ ಧೈರ್ಯವಾಗಿರ್ತೇನೇಂತ ಮಾತುಕೊಡು."
   ಆಕೆ ಆತನ ಬಲ ಅಂಗೈಯನ್ನು ತನ್ನ ಎರಡೂ ಕೈಗಳಿಂದ ಎತ್ತಿ ಎದೆಯ ಮೇಲಿರಿಸಿಕೊಂಡಳು. ಆಕೆಯ ಕಣ್ಣೀರಿನೊಂದು ಹನಿ ಆತನ ಕೈಯನ್ನು ಸೋಂಕಿತು.
  "ಅಳಬೇಡವೆ ! ಇಷ್ಟೇನಾ ನೀನು?"
  ಸ್ವತಃ ಆತನೇ ಅಳುವ ಹಾಗಿತ್ತು ಧ್ವನಿ.
  "ಇಲ್ಲ" ಎಂದಳು ಜಾನಕಿ. ಈಗ ಸ್ವರದಲ್ಲಿ ಧೈರ್ಯವಿತ್ತು, ಗಾಂಭೀರ್ಯವಿತ್ತು.
  ಅಪ್ಪುವಿಗೆ ಅದರಿಂದ ಸಮಾಧಾನವಾಯಿತು. ಆತ ಹೆಂಡತಿಯನ್ನು   

ಅವಸರವಾಗಿ ಚುಂಬಿಸಿದ. ಮಗುವನ್ನು ಮುದ್ದಿಸಿದ. ಸದ್ದಿಲ್ಲದೆ ಕತ್ತಲೆಯಲ್ಲಿ ಲೀನವಾದ.

   ಅಬೂಬಕರ್ ನಿಜವನ್ನೇ ಹೇಳಿ ಬೂಬಮ್ಮನನ್ನು ಬಿಟ್ಟುಬರುವುದು ಸುಲಭವಾಗಿರಲಿಲ್ಲ. ಅದಕ್ಕೋಸ್ಕರ ಆತ ಪ್ರಯೋಗಿಸಿದುದು ಸುಳ್ಳಿನ ಅಸ್ತ್ರ.