ಪುಟ:Chirasmarane-Niranjana.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಚಿರಸ್ಮರಣೆ ಮಾಡ್ಕೊಡ್ತೇನೆ ಸ್ಪೆಷಲ್ ಚಾ! ಈ ಅಂಗಡೀನ ಮರೀಬೇಡಿ. ನನ್ನ ಹೆಸರು ರಾಮುಣ್ಣಿ. ಅ೦ಗಡಿಯವನ ಈ ಮಾತು ಕೇಳಿ ಹುಡುಗರಿಗೆ ಸ೦ತೋಷವಾಯಿತು. ಆತನ ಹೆಸರು ತಿಳಿಯಿತೆ೦ದು ಸಮಾಧಾನವೆನಿಸಿತು. "ಬರ್ತೆನೆ ರಾಮುಣ್ಣಿ " ಎಂದು ಆ ಯುವಕ ಆತ್ಮೀಯತೆಯಿಂದ ಮುಗುಳು ನಕ್ಕು ಹೇಳಿದ. ...ಆ ಯುವಕನ ತುಟಿಗಳು ಬಿಗಿದಿದ್ದುವು-ತಿಳಿವಳಿಕೆಯ ಭಂಡಾರಕ್ಕೆ ಬೀಗಮುದ್ರೆಯೊತ್ತಿದ್ದಹಾಗೆ. ಆದರೆ ಆ ತುಟಿಗಳ ಮೇಲೆ ಸದಾ ಲಾಸ್ಯವಾಡುತ್ತಿದ್ದ ಮುಗುಳುನಗೆಯೊ೦ದಿತ್ತು.ಕಣ್ಣುಗಳಲ್ಲಿದ್ದುದು ಆತ್ಮೀಯತೆಯ ನೋಟ. ಆತ ಮುಂದಾಗಿ ಹಾದಿ ನಡೆದ. ಎತ್ತಿ ಕಟ್ಟಿದ್ದ ಆತನ ಪಂಚೆಯ ಕೆಳಗಿದ್ದ ಬರಿಯ ಕಾಲುಗಳನ್ನೂ ಪಾದಗಳನ್ನೂ ನೋಡುತ್ತ, ನೀಳವಾಗಿ ಹಿಂದಕ್ಕೆ ಸರಿದಿದ್ದ ಆ ತಲೆಗೂದಲನ್ನು ದಿಟ್ಟಿಸುತ್ತ, ಅಪ್ಪುವೂ ಚಿರುಕಂಡನೂ ಆತನನ್ನು ಹಿ೦ಬಾಲಿಸಿದರು.ನಡೆಯಲಾರದೆ ಹಿ೦ದೆ ಬೀಳುತ್ತಿರುವರೇನೋ ಎ೦ದು ಆ ಯುವಕ ಆಗೊಮ್ಮೆ ಈಗೊಮ್ಮೆ ಹಿಂದಕ್ಕೆ ತಿರುಗಿ ಹುಡುಗರನ್ನು ನೋಡುತ್ತಿದ್ದ, ಆದರೆ ನಡಿಗೆಯ ವೇಗದಲ್ಲಿ ಎಳೆಯರು ಸೋಲುವ ಹಾಗೆ ಕಾಣಲಿಲ್ಲ, ಈ ಮೌನ–ಪಯಣದ ಅನುಭವವೇ ಇಲ್ಲದ ಅಪ್ಪುವಿಗೆ ಏನನ್ನಾದರೂ ಮಾತನಾಡಬೇಕೆಂದು ತೋರಿತು. ಆ ಯುವಕನ ಹೆಸರನ್ನಾದರೂ ಕೇಳೋಣ ಎನ್ನಿಸಿತು. ಆದರೆ, ಮಾತನಾಡಬಹುದೋ ಬಾರದೋ ಎಂದು ಅನಿಶ್ಚಯತೆ ಆತನನ್ನು ಕಾಡಿತು. ಒಂದೆರಡು ಸಾರೆ ಅಪ್ಪು, ತನ್ನ ಭುಜದ ಮೇಲಿನಿಂದ ದೃಷ್ಟಿ ಹಾಯಿಸಿ, ಹಿಂದಿದ್ದ ಚಿರುಕಂಡನನ್ನು ನೋಡಿದ. ಅಪ್ಪು ಏನನನ್ನೋ ಕೇಳಬಯಸುತ್ತಿದ್ದುದು ಚಿರುಕಂಡನಿಗೆ ಸ್ಪಷ್ಟವಾಯಿತು.ಉಸಿರು,ಮೈಯ ಕುಲುಕಾಟ,ಮುಖಭಾವ ಇಷ್ಟರಿಂದಲೇ ಪರಸ್ಪರ ಮನಸ್ಸಿನೊಳಗಿದ್ದುದನ್ನು ತಿಳಿಯುವಂತಹ ಒಡನಾಡಿಗಳು ಅವರು, ಅಪ್ಪು ತನ್ನನ್ನು ನೋಡಿದಾಗ ಚಿರುಕಂಡ, ತುಟಿಗಳ ಮೇಲೆ ಬೆರಳಿಟ್ಟು ಸುಮ್ಮಿನಿರೆಂದು ಸನ್ನೆಮಾಡಿದ. ಅಪ್ಪು ಸುಮ್ಮನಿದ್ದ, ಆದರೆ, ಹತ್ತಿಕ್ಕಿದ ಭಾವನೆಗಳ ಕುದಿತ, ಮೇಲು ಮೇಲಕ್ಕೆ ಏರಿಬರುತ್ತಿದ್ದ ಸೂರ್ಯನ ಪ್ರಭಾವಕ್ಕೆ ಸಿಲುಕಿ, ಮೈ ಬೆವರೊಡೆಯಿತು. ಸದಾಕಾಲವೂ ಬಡಕಲು ಪ್ರಕೃತಿಯ ಒಣಜೀವವಾಗಿರುತ್ತಿದ್ದ ಚಿರುಕಂಡನಿಗೆ ಆ ರೀತಿ ಬೆವರಿನ ಸ್ನಾನವಾಗದೆ ಇದ್ದರೂ ಕಂಕುಳಲ್ಲಿ ಹನಿ ಮೂಡಿತು.