ಪುಟ:Chirasmarane-Niranjana.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ತೊಡಗಿದುದು ತಿಳಿದಾಗ, ನಂಬಿಯಾರರಿಗೆ ರೇಗಿತು. ಶಾಲೆಯ ವಿಶ್ವಸ್ಧ ಸಮಿತಿಯ ಮುಖ್ಯಸ್ಧರಾದ ಅವರು ಮಾಸ್ತರಿಗೆ ಕರೆಕಳುಹಿಸಿದರು.

  ಮಾಸ್ತರು ಜಮೀನ್ದಾರರೆದುರು ಬೀರಿದುದು ಸ್ವಾಭಾವಿಕವಾದ ಮುಗುಳುನಗೆ. 
  ಕೆತ್ತನೆಯ ಕುರ್ಚಿಯ ಮೇಲೆ ಮೆತ್ತನೆಯ ಗಾದಿಗೊರಗಿ ಕುಳಿತಿದ್ದ ನಂಬಿಯಾರರು ತಮ್ಮೆದುರು ದೂರದಲ್ಲಿದ್ದ ಬೆಂಚನ್ನು ತೋರಿಸುತ್ತ, ಸಿಗರೇಟಿಗೆ ಬೆಂಕಿಕಡ್ಡಿ ಅಂಟಿಸುತ್ತ, ಹೇಳಿದರು:
  "ಕೂತ್ಕೊಳ್ಳಿ."
   ಮಾಸ್ತರು ವಿನಯದಿಂದಲೆ ಕುಳಿತರು. ಅವರು ಕ್ಕೆಯಲ್ಲಿ ಆ ದಿನದ 'ಮಾತೃ ಬೂಮಿ' ಪತ್ರಿಕೆಯ ಸುರುಳಿ ಇತ್ತು. ನಂಬಿಯಾರರು ಅದನ್ನೊಮ್ಮೆ ಕಡೆಗಣ್ಣಿನಿಂದ ದಿಟ್ಟಿಸಿ ನೋಡಿ, ಹುಬ್ಬು ಮೇಲಕ್ಕೇರಿಸಿ ಸಿಗರೇಟಿನ ಹೊಗೆಯುಗುಳಿ, ಒಂದು ಕ್ಷಣ ಮೌನವಾಗಿದ್ದು ಕೇಳಿದರು:
   "ಶಾಲೆಯ ಕೆಲಸ ಕಾರ್ಯಗಳೆಲ್ಲ ಸರಿಯಾಗಿ ನಡೀತಾ ಇವೆಯೋ?"
   "ಓಹೋ."
   "ನೀವು ಸೊಗಸಾಗಿ ಪಾಠ ಹೇಳ್ತೀರಂತೆ. ನಮ್ಮ ಹುಡುಗ ದಿನಾಲೂ ನಿಮ್ಮನ್ನು ಹೊಗಳ್ತಾನೇ ಇರ್ತಾನೆ."
   ಈ ಸೊಗಸು ಮಾತಿನ ಹಿಂದೆ, ಬೇರೇನೋ ಮುಖಮರೆಸಿಕೊಂಡಿದೆ ಎಂದು ಮಾಸ್ತರು ತಿಳಿಯದಿರಲಿಲ್ಲ. ಅವರು ನಕ್ಕು ಹೇಳಿದರು:
   "ಅದೇನು ಹೇಳ್ತೇನೋ...... ಅಂತೂ ಹುಡುಗರು ತಪ್ಪಿಸ್ಕೊಳ್ಳೋದು ಬಹಳ ಕಡಿಮೆ."
   ಇಷ್ಟು ಮ್ಕದುವಾಗಿ ಈತನೊಡನೆ ಮಾತನಾಡುವ ಅಗತ್ಯವಾದರೂ ಏನು ಎಂದು ಜಮೀನ್ದಾರರು ತಮ್ಮ ವರ್ತನೆಯ ವಿಷಯದಲ್ಲಿ ತಾವೇ ಅಸಹನೆ ತೋರಿ, ಕತ್ತು ಕುಲುಕಿದರು. ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಬೇಕೆನಿಸಿತು. ಆದರೆ ಕಟುಮಾತು, ತಮ್ಮ ಉದ್ದೇಶ ಸಾಧನೆಗೆ ಪ್ರತಿಕೂಲವಾಗಬಹುದೆಂದು, ಸಿಟ್ಟು ನುಂಗಿಕೊಂಡು, ಮೌನವಾಗಿಯೆ ಇದ್ದು ಸಿಗರೇಟು ಸೇದಿದರು.
  ಕರೆಕಳುಹಿದ ಕಾರಣವನ್ನು ಮಾಸ್ತರು ಆಗಲೇ ಊಹಿಸಿದ್ದರು. ಪರಿಸ್ಧಿತಿ ವಿಕೋಪಕ್ಕೆ ಹೋಗದಂತೆ ಎಚ್ಚರದಿಂದಿರಲು ತೀರ್ಮಾನಿಸಿಯೇ ಅವರು ಬಂದಿದ್ದರು. ಆಡಬೇಕಾದ ಮಾತುಗಳನ್ನು ಮೊದಲೇ ತೂಗಿನೋಡಿ ಸಂವಾದ ಬೆಳೆಸಲು ಸಿದ್ದರಾಗುತ್ತ, ಅವರೆಂದರು:
  "ಅದೇನೋ ಮಾತನಾಡಬೇಕು ಎಂದಿರಂತೆ."