ಪುಟ:Ekaan'gini.pdf/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಗಂಡ. ಸುಮ್ಮನೆ ಕೆಟ್ಟ ಯೋಚನೆ ಮಾಡಬೇಡ."

   ಅಕ್ಕನ ಮಾತಿನಲ್ಲಿ ಸತ್ಯಾಂಶವೂ ಇದೆ__ ಎಂದಿತು, ತಂಗಿಯ ಹೃದಯದೊಳಗಿನ ಕಿರುಧ್ವನಿ.ಜತೆಯಲ್ಲಿದ್ದ ಸ್ವಲ್ಪ ಕಾಲ ಸ್ನೇಹಮಯಿಯಾಗಿ ಆತ ವರ್ತಿಸಿದ್ದ. ಅನಂತರ ಊರಿನಿಂದ ಬರೆದ ಕಾಗದಗಳಲ್ಲೂ ಒಲವಿನ ಟಂಟಣಿನಾದವೇ ತುಂಬಿರುತ್ತಿತ್ತು, ಆದರೂ..
  "ನನಗೆ ಭಯವಾಗುತ್ತೆ ಅಕ್ಕ."
  ನಾಲ್ಕು ವರ್ಷಗಳ ಹಿಂದೆ ತನಗೆ ಭಯವಾಗಿರಲಿಲ್ಲ, ಸಂತೋಷವಾಗಿತ್ತು. ಆದರೆ ಆನಂತರ ತಾನು ಅನುಭವಿಸಿದ ಸುಖದ ಕಥೆಯನ್ನು ತಂಗಿ ಈಗಾಗಲೇ ತಿಳಿದಿದ್ದಳು.ಅದರ ಫಲವಾಗಿ, ಈಗ ಸಂತೋಷವಾಗಿರಬೇಕಾದ ದಿನ ಭಯದ ಮಾತನ್ನು ಆಡುತ್ತಿದ್ದಳು ಆಕೆ.
  "ಇಲ್ಲದ ಯೋಚನೆ ಮಾಡ್ಬೇಡ ವಿಜೀ. ನನಗೊಬ್ಬಳಿಗೆ ಹೀಗಾಯ್ತೂಂತ ನಿನಗೂ ಹೀಗೆಯೇ ಆಗಿ ತೀರ್ಬೇಕು ಅನ್ನೋದೆಲ್ಲಿದೆ? ಅಲ್ವೆ, ಗಂಡನ ಮನೆ ಸೇರಿ ಸುಖವಾಗಿ ಸಂಸಾರ ಮಾಡೋ ಹೆಂಗಸರನ್ನ ನಾವು ಕಂಡೇ ಇಲ್ಲವೇ?"
  ಆ ಮಾತೇನೋ ಸರಿಯೇ ಅಂತಹ ಧೋರಣೆಯನ್ನು ಅನುಸರಿಸಿ ಸಮಾಧಾನ ತಳೆಯುವುದೂ ಜಾಣತನವೇ.. ಹಾಗೆಂದು ಯೋಚಿಸುತ್ತ ವಿಜಯ ಮೌನವಾಗಿ ಅಕ್ಕನ ಮುಖವನ್ನೇ ದಿಟ್ಟಿಸಿದಳು
  ತನ್ನ ಮಾತಿಗೆ ತಂಗಿ ಉತ್ತರ ಕೊಡಲಿಲ್ಲವೆಂದು, ಕೊರಗಿನ ಆವರಣದಿಂದ ಆಕೆಯನ್ನು ಹೊರಕ್ಕೆಳೆಯಲು ತಾನು ಸಮರ್ಥಳಾದಳೆಂದು ಸುನಂದಾ ತೃಪ್ತಳಾದಳು. ಮತ್ತೆ ಮುಖದಲ್ಲಿ ನಗೆ ಮೂಡಿತು. ನಗುತ್ತ, ಆಜ್ನಾಪಿಸುವಳಂತೆ ಅಧಿಕಾರವಾಣಿಯಿಂದ ಸುನಂದಾ ಹೇಳಿದಳು.
  "ಇನ್ನು ಗಂಡನ ಮನೆಗೆ ಹೊರಡೋವರಿಗೂ ನಾನು ಹಿರಿಯಕ್ಕ ಅನ್ನೋದನ್ನ ಮರೀಬೇಡ. ಏನು ನಾನು ಹೇಳ್ತೀನೋ ಹಾಗೆ ನಡ್ಕೋಬೇಕು ನೀನು. ಕೇಳಿಸ್ತೇನೇ?"
  ವಿಜಯಾ ನಕ್ಕಳು.
  "ಹೂಂ!"
  ಅಷ್ಟರಲ್ಲೆ ಅವಳು ತಾಯಿ ಅಳುತಲಿದ್ದ ಮೊಮ್ಮಗಳನ್ನು ಎತ್ತಿಕೊಂಡು