ಪುಟ:Ekaan'gini.pdf/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


   ವೆಂಕಟರಾಮಯ್ಯ ನಕ್ಕು ನುಡಿದ:
   "ಜಾಣೆ ಹುಡುಗಿ."
   "ಹೂಂ!"
   "ಯಾವತ್ತು ಬಂದ್ರು ನಿಮ್ಮಕ್ಕ? ಅವರ ಯಜಮಾನರನ್ನ ನಾನು ನೋಡೇ ಇಲ್ಲ."
   ಬಲು ಸಹಜವಾಗಿ, ಆದರೂ ವಿಜಯಳ ಪಾಲಿಗೆ ಅನಿರೀಕ್ಷಿತವಾಗಿ, ಆ ಮಾತು ಬಂದಿತ್ತು. ಏನು ಉತ್ತರ ಕೊಡಬೇಕೆಂದು ತಿಳಿಯದೆ ಆಕೆ ಚಡಪಡಿಸಿದಳು.
   "ಅಕ್ಕ ಈಗ ಇಲ್ಲೇ ಇದಾಳೆ."
   "ಹಾಗಾ? ಮದುವೆಗೆ ಬಂದೋರು ಹೋಗೇ ಇಲ್ವೇನು?"
   ವಿಜಯ ಗಂಡನ ಮುಖವನ್ನೇ ದಿಟ್ಟಿಸಿದಳು. ಚಿಂತೆ ಸಂದೇಹಗಳು ಆ ಹುಬ್ಬುಗಳ ಹಿಂದೆ ಒಂದುಗೂಡುತ್ತಿದ್ದುವೇ ಏನೆಂದು ಪರೀಕ್ಷಿಸಿದಳು.ತನ್ನ ದೇವರೆದುರು ತಾನೆಂದೂ ಸುಳ್ಳಾಡಬಾರದು ಎನ್ನುತ್ತಿತ್ತು. ಮನಸ್ಸು ಆದರೂ ತನ್ನ ಆತ್ಮನಿಗೆ ಆಗ ಅಪ್ರಿಯವಾದುದೇನನ್ನು ತಿಳಿಸುವುದಕ್ಕೂ ಆ ಮನಸ್ಸು ಒಡಂಬಡಲಿಲ್ಲ. ಆಕೆಯೆಂದಳು:
   "ಇಲ್ಲ. ಇರುವಷ್ಟು ದಿನವಾದರೂ ನಾವು ಜತೇಲೇ ಇರಬೇಕೂಂತ ಅಕ್ಕನನ್ನ ಇಲ್ಲೇ ಉಳಿಸ್ಕೊಂಡೆ"
   "ಹಾಗೇನು? ನೀವಿಬ್ಬರೂ ತುಂಬ ಅನ್ಯೋನ್ಯ ಅಂತ ಕಾಣುತ್ತೆ!"
   "ಇದೀವಿ! ನಾನೇನು ಹಾಗಿರೋದು ತಪ್ಪು ಅಂದ್ನೆ!
   ವಿಜಯಾ ಮೌನವಾಗಿ ನಕ್ಕಳು. ಅಷ್ಟರಲ್ಲೆ ಸುನಂದೆಯ ಸ್ವರ ಕೇಳಿಸಿತು:
   "ಪದ್ಮಾ"
   ಮರೆತುದು ಯಾವುದೋ ನೆನಪಾದವನಂತೆ ವೆಂಕಟರಾಮಯ್ಯ ಹೆಂಡತಿಯ ಮುಖ ನೋಡಿದ.
   "ಯಾರನ್ನೆ ನಿಮ್ಮಕ್ಕ ಕೂಗ್ತಿರೋದು?"
   ಅದು ಬಲು ಹಿತಕರವಾದ ಕಣ್ಣು ಮುಚ್ಚಾಲೆಯಾಟ.