ಪುಟ:Ekaan'gini.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಏಕಾಂಗಿನಿ ಕೂಗಾಡಿದ್ಲೊಂತ. ನಮ್ಮಮ್ಮ ನನ್ನನ್ನು ಒಳಕ್ಕೆ ಎಳಕೊಂಡು ಹೋದ್ರು, ಬಯ್ದರು.” ತನ್ನನ್ನು ದೂಷಿಸಿದವಳಿಗೆ ಗೆಳತಿ ಇದಿರಾಡಿದಳೆಂದು ಸುನಂದೆಗೆ ಸಮಾಧಾನವಾಯಿತು. ಆದರೂ ಆಕೆ ಎಂದಳು: "ನೀನು ಸುಮ್ನಿರ್ಬೇಕಾಗಿತ್ತು.” “ಹೂಂ, ಯಾಕಿರ್ಲಿ ಸುಮ್ನೆ?” ಸುನಂದೆಯ ತಾಯಿ ಕಾಫಿ ಮಾಡಿ ತಂದರು. “ಕೂತ್ಕೋ ಅಮ್ಮ,” ಎಂದಳು ಸುನಂದಾ, ತಾಯಿ ತನ್ನೊಡನೆ ಕೂತಿರುವುದು ತನಗಿಷ್ಟವಿಲ್ಲದಿದ್ದರೂ. “ಒಳಗೆ ಒಂದು ರಾಶಿ ಕೆಲಸವಿದೆ. ನೀವು ಮಾತಾಡ್ತಾ ಇರಿ," ಎಂದು ಸುನಂದೆಯ ತಾಯಿ ತಮ್ಮ ಅಡುಗೆ ಮನೆಯ ಲೋಕಕ್ಕೆ ವಾಪಸಾದರು. ಸುನಂದಾ, ಕಾಫಿ ಹೀರುತ್ತಿದ್ದ ಗೆಳತಿಯನ್ನೇ ದಿಟ್ಟಿಸಿದಳು. ಗಂಡ ಮುದ್ದಿಸಿಯೇ ಇರಲಿಲ್ಲವೇನೋ ಎನ್ನುವಂತಹ ಪುಟ್ಟ ತುಟಿಗಳು, ನೀಳವಾಗಿದ್ದ ಕಣ್ಣುಗಳು; ಅಗಲ ಕಿರಿದಾದ ಹಣೆ: ಗುಂಗುರು ಗುಂಗುರಾದ ಕಾಡು ಪೊದೆಯಂತಹ ಮೋಹಕ ಕೇಶರಾಶಿ ಆ ಕೂದಲನ್ನೆ ಹೆಚ್ಚು ಹೋತ್ತು ನೋಡಿ, ಸುನಂದಾ ಅಂದಳು: “ಸದ್ಯ, ನಿನಗೇನೂ ತೊಂದರೆ ಇಲ್ಲ ತಾನೆ?” ಚಂಪಾಗೆ ಅರ್ಥವಾಗಲಿಲ್ಲ. “ಏನು ತೊಂದರೆ?" “ಇರುತ್ತಲ್ಲವಮ್ಮ-ಮಡಿವಂತರ ಶಾಸ್ತ್ರ.” “ಊಂ,” ಎಂದಳು ಚಂಪಾ ತಲೆಯಾಡಿಸಿ. ಆಕೆಗೆ ಅರ್ಥವಾಗಿತ್ತು. “ಅತ್ತೆ ಮನೇಲಿ ಯಾರೂ ಅದರ ಮಾತೆತ್ಲಿಲ್ಲ. ಈ ಶನಿ ತೊಲಗಿದರೆ ಸಾಕು ಅನಿಸಿತ್ತು ಅವರಿಗೆ.” “ಹಾಗಾದರೆ ಇಲ್ಲೇ ಇರ್ತೀಯಾ ಇನ್ನು?” "ಹೂಂ." ತರಗತಿಯಲ್ಲಿ ಚುರುಕಾಗಿದ್ದವಳು ಚಂಪಾ.ಅದರ ನೆನಪಿಗಾಗಿ ಸುನಂದಾ ಕೇಳಿದಳು.