ಪುಟ:Ekaan'gini.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೯೧

“ಶ್ಯಾಮಾ, ಸುನಂದತ್ತೆ ಬಂದಿದಾರೇಂತ ಕುಸುಮಮ್ಮಿಗೆ ಹೇಳ್ಬಿಟ್ಟು

ಬಾಪ್ಪಾ,'ಎಂದರು.

ರಾಮಯ್ಯನವರೊಡನೆ ಮಾತನಾಡಲು ತಂದೆಯನ್ನು ಬಿಟ್ಟು, ಸುನಂದಾ ಅಡುಗೆ ಮನೆಗೆ ನಡೆದಳು.
ಕುಸುಮಾ ಬರುವುದು ತಡವಾಗಲಿಲ್ಲ. ಬಂದವಳೇ, ಚಾಪೆಯ ಮೇಲೆ ಕುಳಿತಿದ್ದ-ತನಗೆ ಅಪರಿಚಿತರಾದ—ಕೃಷ್ಣಪ್ಪನವರನ್ನು ಕಂಡು ಕೈಮುಗಿ ದಳು.
“ನಮಸ್ಕಾರ”
“ನಮಸ್ಕಾರ ತಾಯೀ”, ಎಂದರು ಕೃಷ್ಣಪ್ಪ. ಈ ಬಳುಕುವ ಕೋಮಲ ಹೆಣ್ಣೇ ಕುಸುಮಾ ಇರಬೇಕೆಂದು ಅವರು ಊಹಿಸಿದರು;

“ಎಲ್ಲಿ ಬಚ್ಚಿಟ್ಕೊಂಡಿದೀರಾ ರಾಧಮ್ನೋರೆ"? ಎನ್ನುತ್ತಾ ಕುಸುಮಾ ಅಡುಗೆ ಮನೆಯ ಕಡೆಗೆ ನಡೆದಳು.

ರಾಧಮ್ಮನವರ ಜತೆ ಒಲೆಯ ಬಳಿ ಕುಳಿತಿದ್ದ ಸುನಂದಾ. ಎದ್ದುನಿಂತು ಗೆಳತಿಯನ್ನು ದಿಟ್ಟಿಸಿದಳು.
ಒಬ್ಬರನೊಬ್ಬರು ಮುಟ್ಟಿ ನೋಡಬೇಕೆಂಬ ಬಯಕೆಯಾಯಿತು ಅವರಿಗೆ,ಏನು ಮಾಡಬೇಕೆಂದು ತಿಳಿಯದೆ ಕುಸುಮಾ ಅಂದಳು:
"ಚೆನ್ನಾಗಿದೀರಾ ಸುನಂದಾ?"۔
ಆ ಪ್ರಶ್ನೆ ಕೇಳುತ್ತ ಆಕೆ, ಉತ್ತರದ ಹಾಡಿ ನೋಡದೆ ಸರಸ್ವತಿಯನ್ನೆತ್ತಿ ತಬ್ಬಿಕೊಂಡು ಮುದ್ದಾಡಿದಳು.
"ಎಷ್ಟು ಬೇಗ ದೊಡ್ಡೇಳಾಗ್ಬಿಟ್ಟೀದೀಯೆ! ನನ್ನ ನೆನಪಿದೆಯೇನೆ ನಿಂಗೆ?"
ಸರಸ್ವತಿಗೇನೂ ನೆನಪಿರಲಿಲ್ಲ. ಆದರೂ ಆಕೆ ಪ್ರತಿಭಟಿಸಲಿಲ್ಲ.
“ನಿನ್ನತ್ತೆ ಕಣೇ,” ಎಂದಳು ಸುನಂದಾ.

ಎಷ್ಟೊಂದು ಅತ್ತೆಯರು ತನಗೆ–ಎಂದು ಸರಸ್ವತಿ ತಬ್ಬಿಬ್ಬಾಗಬೇಕಾದ ಪ್ರಮೇಯ. ಆದರೂ ಎದೆಗುಂದದೆ, “ಅತ್ತೆ” ಎಂದು ಕುಸುಮಳನ್ನು ಆಕೆ ಸಂಬೋಧಿಸಿದಳು.

“ಅಯ್ಯೋ! ಎಷ್ಟೊಂದು ಚೆನ್ನಾಗಿ ಮಾತಾಡ್ತಾಳೆ!” ಎಂದು ಆಶ್ಚರ್ಯವನ್ನೂ ಸಂತೋಷವನ್ನೂ ಕುಸುಮಾ ವ್ಯಕ್ತಪಡಿಸಿದಳು.