ಪುಟ:Hosa belaku.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೨

ವೈರಾಗ್ಯ-ವೈಯ್ಯಾರ

ಕೆಲಸ ಮುಗಿಸಿ ಎದ್ದು ಬಿಟ್ಟರು. ಕೊನೆಗೆ ನಾನು ಎಲ್ಲವ್ವನ ಬಗ್ಗೆ ಬರೆದದ್ದು ನಿಜವೇ ಎಂದು ವಾಲೀಕಾರನಿಗೆ ಕೇಳಿದೆ. ಅವನು "ಹೌದರೀ ರಾಯ್ರ, ಗಂಡನ ಹೆಸರು ಸುಳ್ಳು ಹೇಳತಾರೇನ್ರಿ" ಎಂದು ನಿಶ್ಚಯದ ಸ್ವರದಲ್ಲಿ ಹೇಳಿ ಹೊರಟಿಹೋದ.


ಅಂದಿನಿಂದ ನಾನು ಗುಡದಪ್ಪನ ಜತೆಯಲ್ಲಿ ಹೆಚ್ಚು ಮಾತನ್ನು ಬೆಳೆಸುತ್ತಿರಲಿಲ್ಲ. ಮನೆ ಮಾಡಿ ಮಠಪತಿಯ ಮೆರಗನ್ನು ಬಳಕೊಂಡು ಮೋಸಗೊಳಿಸುವ ಮನುಷ್ಯನ ಜತೆಯಲ್ಲಿ ಮಾತೇಕೆ ಎಂದು ಮೌನ ತಾಳಿ ಬಿಟ್ಟೆ. ಅದಕ್ಕೂ ಹೆಚ್ಚಿನ ಆಶ್ಚರ್ಯವೆಂದರೆ, ಹಗಲು ಹನ್ನೆರಡು ತಾಸು ವೇದಾಂತ ಕೊಚ್ಚುವ ಕಲಿಭೀಷ್ಮ, ೫ ಮಕ್ಕಳ ತಂದೆಯಾಗಿದ್ದಾನಲ್ಲ ಎಂಬುದು. ಅಂತೂ ಅಂದಿನಿಂದ ಗುಡದಪ್ಪನ ಬಗ್ಗೆಯ ನನ್ನಲ್ಲಿಯ ಆದರ ಮಣ್ಣು ಗೂಡಿ ಬಿಟ್ಟಿತು. ಆದರೆ ಗುಡದಪ್ಪನಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿರಲಿಲ್ಲ.

ಅದೇ ಮಾತು, ಅದೇ ನಯ, ಅದೇ ನಗು, ಅದೇ ನಿರ್ವಿಕಾರ ಕಳೆ ಮುಖದ ಮೇಲೆ ಹೊಳೆಯುತ್ತಿತ್ತು.



ಕೆಲ ಮಾಸಗಳುರುಳಿದವು. ಊರ ಹೊರಗೆಲ್ಲ ಜೋಳ ಆರಡಿ ಎತ್ತರವಾಗಿ ಮೆರೆಯುತ್ತಿತ್ತು. ಊರ ಪುಂಡರಿಗೆ ಅದೊಂದು ಮರೆ ಮಾಡಿಕೊಳ್ಳುವ ಮನೆ. ಹಳ್ಳಿಗರಿಗೆ ಸುಗ್ಗಿ ಮುಂದೆ ಇದ್ದರೂ, ಕಳ್ಳರಿಗೆ ಇದುವೇ ಸುಗ್ಗಿ ಕಾಲ.

ಒಂದು ಸೋಮವಾರ ನಸುಕು ಹರಿಯುವವರಲ್ಲಿತ್ತು. ಊರ ಮೂಲೆಯಲ್ಲೊಂದು ಆರ್ತಸ್ವರ ಕೇಳಬಂತು. ಜನರೆಲ್ಲ ಆ ಬದಿಗೆ ತಂಡತಂಡವಾಗಿ ಹೋಗತೊಡಗಿತು. ನಾನೂ ಅವರಲ್ಲೊಬ್ಬನಾಗಿದ್ದೆ.

ಪತ್ತಾರ ನಾಗಪ್ಪನ ಮನೆಗೆ ಕನ್ನ ಬಿದ್ದಿತ್ತು. ಕಳ್ಳರು ಹೊಡೆದ ಪೆಟ್ಟಿಗೆ ನಾಗಪ್ಪ ಎಚ್ಚರದಪ್ಪಿ ನೆಲಕ್ಕುರುಳಿ ನರಳುತ್ತಿದ್ದ. ಕೆಲ ಚಿನ್ನದ ಆಭ