ಪುಟ:KELAVU SANNA KATHEGALU.pdf/೧೦೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
78
ನಿರಂಜನ: ಕೆಲವು ಸಣ್ಣ ಕಥೆಗಳು
 

ಇಮಾಮ್‌ಸಾಬಿಯ ಮುಖ ಕೆಂಪೇರಿತು. ಇಂಟರ್ ತರಗತಿ ಇತ್ತೆಲ್ಲಿ ಈಗ? ಆದರೂ, ಮತ್ತೆ ಮತ್ತೆ ಹಳೆಯದಕ್ಕೆ ಅಂಟಿಕೊಳ್ಳುತ್ತಿತ್ತು, ಅವನ ಮನಸ್ಸು.

ಬೇರೆಯೂ ಕೆಲ ಪ್ರಯಾಣಿಕರಿದ್ದರು. ಆದರೆ ಇಮಾಮ್‌ಸಾಬಿ ಅತ್ತ ನೋಡಲೂ ಇಲ್ಲ.

ಜುಕುಜುಕು ಧ್ವನಿ....

ನಿಲ್ಲುವುದೇ ಇಲ್ಲವೇನೋ ಎನ್ನುವಂತೆ ನೇರವಾಗಿ ಮುಂದಕ್ಕೋಡಿ ನಿಂತು ಬಿಡುವ ಗಾಡಿ.

ಎಲ್ಲಿತ್ತು ಸೆಕೆಂಡ್ ಕ್ಲಾಸ್?
“ಎಲ್ಲಯ್ಯಾ ಇದೆ?”
ಇಮಾಮ್‌ಸಾಬಿಗೆ ಏನೂ ಕಾಣಿಸುತ್ತಿರಲಿಲ್ಲ.
ರೇಗುತ್ತ ಯುವಕನೇ ಅತ್ತ ಓಡಿದ, ಇತ್ತ ಓಡಿದ. ವಿನೀತನಾಗಿ ಅವನನ್ನು ಹಿಂಬಾಲಿಸಿದ, ವೃದ್ಧ.
“ಇಲ್ಲೇ ಒಳಗಿಡು!”
ಇನ್ನು ಎರಡಾಣೆಗೆ (ಎಷ್ಟು ನಯೆಪೈಸೆಗೊ?) ಕೈ ನೀಡಬೇಕು.
ನಾಣ್ಯ ನಾಲ್ಕಾಣೆಯ ತುಣುಕಿನಂತೆ ಕಂಡಿತು.
ಯುವಕನೆಂದ:
“ಮುದುಕನಾದೆ ನೀನು. ಹೋಗು!”

ಇಮಾಮ್‌ಸಾಬಿಗೆ ಇದ್ದಕ್ಕಿದ್ದಂತೆ ಅಳು ಬಂತು. ಅದನ್ನಾತ ಕಷ್ಟಪಟ್ಟು ಅದುಮಿ ಹಿಡಿದು, ಗಾಡಿ ಚಲಿಸಿದಂತೆ, ನಿಲ್ಮನೆಯಿಂದ ತಾನು ಹೊರಕ್ಕೆ ಕಾಲಿರಿಸಿದ.

ಇಳಿದವರನ್ನು ಹೊತ್ತುಕೊಂಡೋ ಬರಿದಾಗಿಯೋ ಜಟಕಾ ಗಾಡಿಗಳು ತೆರಳುತ್ತಿದ್ದುವು. ನಡೆದೇ ಹೋಗುತ್ತಿದ್ದರು ಹಲವರು. ಮತ್ತೊಮ್ಮೆ ಎಲ್ಲವೂ ಶಾಂತವಾಗತೊಡಗಿತ್ತು. ಸೂರ್ಯ ಗುಡ್ಡಗಳಾಚೆ ಅವಿತಿದ್ದ.

ಮಬ್ಬು ಬೆಳಕು ಎಲ್ಲವನ್ನೂ ಆವರಿಸಿತು. ಇಮಾಮ್‌ಸಾಬಿಗೆ ಇದ್ದುದೊಂದೇ ಯೋಚನೆ-ಮನೆಗೆ ತಾನು ಹೋಗ ಬೇಕು, ನೇರವಾಗಿ. ಮಗುವಿಗೆ ಎಷ್ಟು ಸಂಕಟವಾಗುತ್ತಿದೆಯೋ ಏನೋ, ಪಾಪ!

ಎಷ್ಟು ಬೇಗನೆ ಹೆಜ್ಜೆ ಇರಿಸಿದರೂ ಮಾರ್ಗಕ್ರಮಣ ನಿಧಾನವಾಗಿಯೇ ಆಗುತ್ತಲಿತ್ತು. ಹೃದಯವೊಂದು ಭಾರಗೊಂಡು, ಅದರ ಹೊರಗೆ ದೇಹವೇ