ಗುರುಲಿಂಗರ ಮಠದಲ್ಲಿಯೂ ಹೆಚ್ಚು ಹೊತ್ತು ಇರಲಿಲ್ಲ. ದೈವಶಕ್ತಿಯ ಆವೇಶ ಅವಳನ್ನು ಎಳೆದು ಹೊರಡಿಸಿತ್ತು. ಆದರೆ ಭೌತಿಕ ದೇಹದ ಅವಶ್ಯಕತೆಗಳನ್ನು ಅದು ಸಂಪೂರ್ಣವಾಗಿ ಮೀರುವಂತಿರಲಿಲ್ಲ. ಹೊಟ್ಟೆ ತನ್ನ ಕರೆಯನ್ನು ಒಂದೇ ಸಮನೆ ಮೊರೆಯುತ್ತಿತ್ತು. ಅದನ್ನರಿತು ಶಿವನೇ ಕರುಣಿಸಿದ ಪ್ರಸಾದವೋ ಎಂಬಂತೆ, ಅತಿ ಅನಿರೀಕ್ಷಿತವಾಗಿ ಲಭಿಸಿದ್ದುವು ಈ ಹಣ್ಣು ಕಾಯಿಗಳು. ಅವುಗಳಿಂದ ದೇಹಕ್ಕೆ ಸ್ವಲ್ಪ ನೆಮ್ಮದಿ ದೊರೆತಂತಾಯಿತು.
ಸ್ವಲ್ಪ ಕಾಲದ ವಿಶ್ರಾಂತಿಯ ನಂತರ ಶಿವಯ್ಯ ಮತ್ತು ಪರಿವಾರದವರು ಎದ್ದರು. ಮಹಾದೇವಿಯೂ ಎದ್ದಳು. ಸಿದ್ದ ಅಷ್ಟರಲ್ಲಿ ಎತ್ತುಗಳಿಗೆ ನೀರು ಕುಡಿಸಿ ಗಾಡಿಯನ್ನು ಸಿದ್ಧಗೊಳಿಸಿದ್ದ. ಅವನ ಕೈಗೂ ಹಣ್ಣುಕಾಯಿಗಳನ್ನು ಕೊಟ್ಟು ಶಿವಯ್ಯನವರು ತಮ್ಮವರತ್ತ ತಿರುಗಿ ಹೇಳಿದರು :
``ಹೂಂ, ಜಾಗ್ರತೆಯಾಗಿ ಹತ್ತಿ; ಹೊತ್ತಾಗುತ್ತದೆ. ಕತ್ತಲಾಗುವುದಕ್ಕೆ ಮುಂಚೆಯೇ ಊರನ್ನು ಸೇರಿಕೊಳ್ಳೋಣ.
ಗಾಡಿಯನ್ನು ಹತ್ತುವುದಕ್ಕೆ ಮುಂಚೆ ಶಿವಮ್ಮ ಮಹಾದೇವಿಯನ್ನು ಕುರಿತು:
``ನೀನು ಎಲ್ಲಿಗೆ ಹೋಗಬೇಕಮ್ಮ ?
``ನಾನೇ ?.... ಮಹಾದೇವಿ ಅನುಮಾನಿಸುತ್ತಾ ಹೇಳಿದಳು :
``ಕುಂತಲಾಪುರಕ್ಕೆ.
``ಹಾಂ ! ನೀನೂ ನಮ್ಮೂರಿಗೆ ! ಬಾ ಹಾಗಾದರೆ, ಗಾಡಿಯಲ್ಲಿಯೇ ಹೋಗೋಣ. ನಾವೂ ಅಲ್ಲಿಗೇ ಹೋಗೋದು. ಇನ್ನಾರಾದರೂ ಬರುವವರಿದ್ದಾರೆಯೇ - ಕೇಳಿದಳು ಶಿವಮ್ಮ.
``ಇನ್ನಾರೂ ಇಲ್ಲ... ಆದರೆ... ನಿಮಗೇಕೆ ತೊಂದರೆ ? ನಾನು...
``ಇದೇನು ಹೀಗೆ ಹೇಳುತ್ತೀ ! ಮಧ್ಯದಲ್ಲಿಯೆ ತಡೆದರು ಶಿವಮ್ಮ.
``ನಾವು ಇಷ್ಟು ಜನರು ಹೋಗುವಾಗ ನೀನೊಬ್ಬಳು ಕುಳಿತರೆ ಬಸವಣ್ಣಗಳು ಎಳೆಯುವುದಿಲ್ಲ ಎನ್ನುತ್ತವೆಯೇ ? ಬಾ... ಬಾ ಎಂದು ಕೈಹಿಡಿದು ಕರೆದಳು.
``ಬಾರಮ್ಮಾ... ಬಾ... ಏನೂ ಸಂಕೋಚಪಡಬೇಡ. ಶಿವಯ್ಯನವರೂ ಕರೆದರು.
``ಶಿವನ ಲೀಲೆಯನ್ನು ಕಂಡವರಾರು ? ಆಗಲಿ. ಇದಾವುದೋ ಅನಿರೀಕ್ಷಿತ ಸ್ನೇಹಹಸ್ತ ಬರುತ್ತಿದೆ. ಅದನ್ನೇಕೆ ತಿರಸ್ಕರಿಸಲಿ... ಮುಂದೆ ನೋಡೋಣ ಎಂದು ಆಲೋಚಿಸುತ್ತಾ ಗಾಡಿಯನ್ನೇರಿದಳು. ಗಾಡಿ ಹೊರಟಿತು.