ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೮
ಕದಳಿಯ ಕರ್ಪೂರ


ಅವರಿಗೆ ನನ್ನ ವಿಷಯ ತಿಳಿಯಲಿ. ಅದರಿಂದ ಅವರ ಅನುಗ್ರಹ ನಿಮಗೆ ದೊರಕುತ್ತದೆ. ನಿಮ್ಮ ಜೀವನವೂ ಪರಿಪೂರ್ಣದೆಡೆಗೆ ಏರುತ್ತದೆ. ಅವರಿಗಾಗಿ ಹಾರೈಸಿರಿ. ನೀವಿನ್ನು ನಡೆಯಿರಿ.”

ತಾನು ಆಧ್ಯಾತ್ಮದ ಅತ್ಯುನ್ನತವಾದ ನಿಲವಿನಲ್ಲಿ ನಿಂತಿದ್ದರೂ, ರಸವಂತಿ, ಕೌಶಿಕರು ತನ್ನನ್ನು ಅಗಲುತ್ತಿರುವಾಗ ಪಡುತ್ತಿರುವ ವೇದನೆಯನ್ನು ಕಂಡು, ಮಹಾದೇವಿಗೆ ಸಂಕಟವಾಯಿತೆಂದಮೇಲೆ ಅವರ ಸಂಕಟಕ್ಕೆ ಮಿತಿಯೇ ಇಲ್ಲವಾಯಿತು. ತಮ್ಮ ಆತ್ಮವನ್ನೇ ಹಿಂದೆ ಬಿಟ್ಟು ನಡೆಯುತ್ತಿರುವ ದೇಹಗಳಂತೆ ನಡೆಯುತ್ತಿದ್ದರು ಅವರು. ಹೆಜ್ಜೆಹೆಜ್ಜೆಗೂ ಹಿಂದಿರುಗಿ ನೋಡುತ್ತಿದ್ದರು.

ಕದಳಿಯ ಗುಹೆಯ ಕಲ್ಲಮೇಲೆ ಮಹಾದೇವಿ ಕದಳಿಯನ್ನು ಮೆಟ್ಟಿ ನಿಂತಿದ್ದಳು. ಕೆದರಿದ ಕೂದಲ ಸಮೂಹ, ಉಟ್ಟ ತೆಳುಗಾವಿವರ್ಣದ ಸೀರೆಯ ಮೇಲೆ ಹರಡಿ, ತಪೋಲಕ್ಷ್ಮಿಯ ದಿವ್ಯವಿಗ್ರಹಕ್ಕೆ ಮಂಗಳದ ರಕ್ಷೆಯನ್ನು ಕಟ್ಟಿದಂತಿತ್ತು. ತಪ್ತಕಾಂಚನವರ್ಣದ ತೇಜಸ್ಸಿನ ಕಾಂತಿಯಿಂದ ಹೊಳೆಯುತ್ತಿರುವ ಮುಖದ ಮೇಲೆ, ಚಂದ್ರಮೌಳಿಯ ಕರುಣೆಯ ಸಾಕ್ಷಾತ್ಕಾರವೆಂಬಂತೆ ವಿಭೂತಿ ಹೊಳೆಯುತ್ತಿತ್ತು. ಅವನ ಉರಿಗಣ್ಣಿನಿಂದ ಸಿಡಿದ ಪವಿತ್ರತೆಯ ಕಿಡಿಗಳೆಂಬಂತೆ ಕೊರಳಿನಲ್ಲಿ ರುದ್ರಾಕ್ಷಿಯ ಸರ; ಮುಂಗೈಯಲ್ಲಿ ರುದ್ರಾಕ್ಷಿಯ ಕಂಕಣ. ಮಿಂಚಿನ ಬೆಳಕನ್ನು ಹೊರಸೂಸುತ್ತಿರುವಂತಹ ಕಣ್ಣುಗಳು.

ಕೌಶಿಕ, ರಸವಂತಿಯರು, ಮರೆಯಾಗುವ ಮುನ್ನ ಕ್ಷಣಕಾಲ ನಿಂತು ಆ ವಿಗ್ರಹವನ್ನು ಕೊನೆಯ ಬಾರಿ ನೋಡಿದರು. ವಿಗ್ರಹ ಮರೆಯಾಗಿ ಅಪೂರ್ವವಾದ ತೇಜಸ್ಸಿನ ಚಕ್ರ ಅಲ್ಲಿ ತಿರುಗುತ್ತಿರುವಂತೆ ತೋರಿತು. ಕರ್ಪುರ ಜ್ಯೋತಿಯು ಬೆಳಗುತ್ತಿರುವ ಆರತಿಯ ದಿವ್ಯಚಕ್ರದಂತೆ ಅದು ತಿರುಗುತ್ತಿತ್ತು. ಆ ಚಕ್ರದಿಂದ ರುದ್ರಾಕ್ಷಿಯ ಕಂಕಣದ ಕೈ ಹೊರಚಾಚಿ ಅವರನ್ನು ಆಶೀರ್ವದಿಸಿದಂತಾಯಿತು.

ಎಂದೆಂದೂ ಮರೆಯಲಾಗದ ಆ ದೃಶ್ಯವನ್ನು ಕಣ್ಣು ತುಂಬಾ ತುಂಬಿಕೊಂಡು, ಹೃದಯದ ತುಂಬಾ ಅಚ್ಚೊತ್ತಿಕೊಂಡು ತ್ರಿಕೂಟಪರ್ವತವನ್ನು ಅವರು ಇಳಿಯತೊಡಗಿದರು.