ಪುಟ:Kalyaand-asvaami.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು

ವೀರಮ್ಮನನ್ನು ಒಯ್ದವರ ಊರಿನ, ಶ್ರೀಮಂಗಲನಾಡಿನ, ಹುಡುಗಿಯೇ ; - ಗಿರಿಜವ್ವ.


ಹೆಮ್ಮೆಯ ಅತ್ತೆಯಾಗಿ, ಮಗನೊಂದಿಗೆ ಸೊಸೆಯೊಂದಿಗೆ ಗಂಗವ್ವ, ಕಾಲ್ನಡಿಗೆಯ ಧೀರ್ಘ ಪ್ರವಾಸದ ಬಳಿಕ ಊರಿಗೆ ಮರುಳಿದಳು. ಆಗಲೇ ಪುಟ್ಟಬಸವ ಹೇಳಿದುದು-


'ಒಬ್ಬೊಬ್ಬರಿಗೆ ಒಂದೊಂದು ಕುದುರೆ ಬೇಕು ನೋಡವ್ವ


{ತನ್ನ ಗಂಡ ಬಸವರಾಜಪ್ಪ ಸವಾರಿ ಮಾಡುತ್ತಿದ್ದ ಕುದುರೆ ಎಷ್ಟು ಸೊಗಸಾಗಿತ್ತು!}


ಡವಡವನೆ ಎದೆ ಹೊಡೆದುಕೊಳ್ಳುತಿದ್ದಂತೆ ಆಕೆ ಉತ್ತರವಿತ್ತಿದ್ದಳು:


'ಹುಂ! ಕುದುರೆಯಲ್ಲ, ಆನೆ ಬೇಕು .'


'ಆನೆ ಇದ್ದರೆ ಇನ್ನೂ ಪಸಂದಾಗಿರೆತೆ. ಎಲ್ಲರೂ ಒಟ್ಟಿಗೇ ಕುಂತ್ಕೋಬೌದು.'


ಮಾತಿನಲ್ಲಿ ಬಿಟ್ಟುಕೊಟ್ಟನೆ ಆತ?...ತನಗೆ ಗೊತ್ತೇ ಇರಲ್ಲಿಲ್ಲ.ಮದುವೆಯ ನಿಮಿತ್ತದ ಪ್ರವಾಸದಿಂದ ಆತನಿಗೆ ಹೊರ ಜಗತ್ತಿನೊಡನೆ ಸಂಪರ್ಕ ಲಭಿಸಿತ್ತು. ಆತನ ಕಿವಿಗೆ ಬಿದ್ದಿದ್ದುವು ಎಷ್ಟೋ ವಿಷಯಗಳು. ಒಳಗಿನ ಆಸೆಗಳೆಲ್ಲ ಗರಿಗೆದರಿದ್ದುವು.


ಒಂದು ಮಗನಾದ ಮೇಲೆ ಎಲ್ಲಿಗೂ ಹೋಗಲಾರ- ಎಂದು ಗಂಗವ್ವ ಲೆಕ್ಕ ಹಾಕಿದಳು, ವೀರಮ್ಮ ಹುಟ್ಟಿದ್ದಳೆಂದು ಬಸವರಾಜಪ್ಪನೇನು ಅಲೆದಾಟ ಬಿಡಲಿಲ್ಲವೆಂಬುದನ್ನು ಮರೆತು.


ಹುಡುಗಿ ಗಿರಿಜೆ ತಾಯಿಯಾಗುವ ದಿನವಂತು ದೂರವಿತ್ತು.ಪುಟ್ಟ ಬಸವ ಮಡಿಕೇರಿಗೊಮ್ಮೆ ಹೋಗಿಯೂ ಬಂದ. ಆಗ ತಾನು ಎಷ್ಟೊಂದು ಅತ್ತಿದ್ದಳು, ಪರಿಪರಿಯಾಗಿ ಕೇಳಿದ್ದಳು-ಹೇಳಿದ್ದಳು! ಒಂದು ಮಾತಿಗಾದರೂ ಬೆಲೆ ಕೊಟ್ಟನೆ ಆತ? ಅದು ಕಿರಿಯ ವೀರರಾಜೇಂದ್ರ ಪಟ್ಟಕ್ಕೆ ಬಂದ ಕಾಲ. ಯುವಕನಾದ ರಾಜ, ಯುವಕರಾದ ಗೆಳೆಯರು. ಯಾವುದನ್ನು ಆಗಗೊಡಬಾರದೆಂದುಆಕೆ ಶಿವನಿಗೆ ಮೊರೆ ಇಟ್ಟಿದ್ದಳೊ ಅದು ಆಗಿಯೇ ಹೋಯಿತು. ಒಮ್ಮೆ ಪ್ರವಾಸ ಹೋದ ಪುಟ್ಟಬಸವ, ವೀರ ಯೋಧನಂತೆ ಪೋಷಾಕು