ಪುಟ:Kanakadasa darshana Vol 1 Pages 561-1028.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ععع ಕನಕ ಸಾಹಿತ್ಯ ದರ್ಶನ-೧ ಕನಕದಾಸನ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ععع "ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ ಬೆಲೆಬಿದ್ದ ಸರಕಿನೊಳು ಲಾಭವುಂಟೆ” “ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆ ಅತ್ತರೆ ಬಹುದೇನೊ ಉತ್ತಮ ಫಲಸೂಸಿ” ವೈದಿಕ ಬಂಧನಕ್ಕೆ ಬಿಗಿದುಕೊಳ್ಳಬೇಕಿದ್ದ ಸಂದರ್ಭದಲ್ಲೂ ಕನಕದಾಸ ತನ್ನ ಸ್ವತಂತ್ರ ನಿಲುವನ್ನು ವಿಮರ್ಶಕ ಗುಣವನ್ನು ಬಿಟ್ಟುಕೊಡುವುದಿಲ್ಲ. ಇಲ್ಲಿ ಕಲೆಗಾರನೊಬ್ಬ ಬದುಕಿನೊಳಗೆ ಚಿಪ್ಪು ಕಟ್ಟಿಕೊಂಡ ಆಷಾಢಭೂತಿ ಜನರ ಮುಖವಾಡಗಳನ್ನು ವಿಕಾರಗೊಳಿಸದೆ ನೋಡುಗರಿಗೆ ಬಿಚ್ಚಿ ತೋರಿಸುವ ಕ್ರಮವಿದೆ. ನಮ್ಮೆಲ್ಲ ಮನಸ್ಸಿನೊಳಗೆ ಗೂಡುಕಟ್ಟಿಕೊಂಡಿರುವ ಈ ಹದ್ದು ಕಾಗೆ ನರಿ ನಾಯಿಗಳು ನಮ್ಮನ್ನು ಮನುಷ್ಯರಾಗಲು ಬಿಡುವುದಿಲ್ಲ. ಅವುಗಳನ್ನು ನಾವೇ ಸಲಹುತ್ತಿದ್ದೇವೆ. ಅವುಗಳನ್ನು ಕಳೆದುಕೊಳ್ಳುವುದೆಂದರೆ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವುದೆಂದೇ ಅರ್ಥ. ಇದು ಸಮಾಜದಲ್ಲಿ ಪ್ರತಿಷ್ಠಿತರೆಂದುಕೊಂಡ ಜನರ ಬದುಕು, ಈ ಬದುಕನ್ನು ಕನಕದಾಸ ನಿಚ್ಚಳವಾಗಿ ಗುರುತಿಸಿ ಬಯಲು ಮಾಡುತ್ತಾನೆ. ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೇ' “ನೀತಿ ತಪ್ಪಿದವರೆಲ್ಲ ದೇವ ಬ್ರಾಹ್ಮಣರೇ? 'ಹೊಟ್ಟೆಗುಡ ಮೃಗಗಳೆಲ್ಲ ಶ್ರೀವೈಷ್ಣವರೇ' 'ಭಂಗಿ ಮುಕ್ಕಗಳೆಲ್ಲ ಲಿಂಗವಂತರಹರೆ' 'ಜಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥ | ಕಳ್ಳ ತುರುಕರಿಗೆಲ್ಲ ವೀರಸ್ವರ್ಗವುಂಟೆ? 'ವೇಷಧಾರಿಗಳೆಲ್ಲ ಸನ್ಯಾಸಿಗಳಾಗಬಲ್ಲರೆ' ಮೌಢ ಕಂದಾಚಾರಗಳು ಬಡಜನರ ಉದ್ಧಾರಕ್ಕೆ ಪೂರಕವಾಗಲಾರವು. ಅವರ ಅವಿರತ ಶೋಷಣೆ ತಪ್ಪದು. ಅವರಲ್ಲಿರುವ ಮೌಢ ಹೋಗದೆ ತಿಳಿವಳಿಕೆ ಬಾರದು. ತಿಳಿವಳಿಕೆ ಇಲ್ಲದೆ ಜೀವನ ಸುಧಾರಿಸದು. ಜೀವನ ಸುಧಾರಿಸದೆ ಸಮಾಜ ತನ್ನ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳದು. ಆದರೆ ಮೇಲೇರಿದ ಜನ ಕೆಳವರ್ಗದವರನ್ನು ಅಲ್ಲೇ ಉಳಿಸುವ ಕುತಂತ್ರದಲ್ಲಿ ಈ ಕ್ರಿಯೆ ನಿರಂತರಗೊಂಡಿದೆ ಕನಕದಾಸ ಇಂಥ ಸ್ವಾರ್ಥ ಬದುಕು ಬೇಡವೆನ್ನುತ್ತಾನೆ. “ಎಲ್ಲಾರು ಮಾಡುವದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ” ಎಂಬ ಇವನ ಕೀರ್ತನೆ ಸಮಾಜದ ಒಟ್ಟು ಬದುಕಿನ ಹಿಂದಿರುವ ಸ್ವಾರ್ಥವನ್ನು ಸಮರ್ಥವಾಗಿ ಚಿತ್ರಿಸುತ್ತದೆ. ಹಾಗಾದರೆ ಈ ಸಮಾಜವನ್ನು ಬೆಳೆಸುವ ಕುಡಿಗಳು ಹೇಗಿರಬೇಕು. ಇದಕ್ಕೆ ಕವಿಯ ಅಪೇಕ್ಷೆ ಇದು : “ಸತ್ಯನೊಬ್ಬ ಮಗ ಶಾಂತನೊಬ್ಬ ಮಗ | ದುರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನು || ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ || ಹೆತ್ತರೇನು ಇನ್ನು ಹೆರದಿದ್ದರೇನಯ್ಯ|| ಈ ಪದ್ಯದಲ್ಲಿರುವ ಕವಿಯ ಬಂಡಾಯ ಧ್ವನಿಯನ್ನು ಗಮನಿಸಬೇಕು. 'ಆಪುತ್ರಸ್ಯ ಗತಿರ್ನಾಸ್ತಿ' ಎಂದು ಅಖಂಡವಾಗಿ ನಂಬಿ ಬಂದ ಸಂಪ್ರದಾಯವನ್ನೇ ಪ್ರಶ್ನಿಸುತ್ತಾನೆ. ಒಳ್ಳೆಯ ಆಚಾರವಿಲ್ಲದ ಮನುಷ್ಯನಿಗೆ ಮಗನಿದ್ದರೂ ಸದ್ಧತಿ ಇಲ್ಲ ಎಂಬುದನ್ನು ಕನಕದಾಸ ಸ್ಪಷ್ಟವಾಗಿ ಹೇಳುತ್ತಾನೆ. ಸ್ವಾರ್ಥಪರವಾದ ಮನುಷ್ಯ ಅದರ ಸಿದ್ಧಿಗಾಗಿ ಏನೆಲ್ಲ ಅನಿಷ್ಟ ಸಂಪ್ರದಾಯವನ್ನು ಹುಟ್ಟುಹಾಕಿಕೊಳ್ಳುತ್ತಾನೆ ಎಂಬುದನ್ನು ಕನಕದಾಸ ತಿಳಿಸಿದ್ದಾನೆ. ಮನಸ್ಸು ಮುಕ್ತಿಯನ್ನು ಪಡೆಯಬೇಕಾದರೆ ಇತರೆ ವಾಮಮಾರ್ಗಗಳನ್ನು ಬಿಡಬೇಕು. ಮುಕ್ತಿಯ ಪಡೆಯಬೇಕೆಂದರೆ ಮೇಗಣ ಲೋಕಕ್ಕೆ ತೆರಳುವುದೆಂದಲ್ಲ, ಕೆಟ್ಟವಿಚಾರಗಳಿಂದ ಮುಕ್ತವಾಗುವುದು ಎಂದು. ಇಂಥ ಮುಕ್ತಿಯನ್ನು ಬಯಸುವ ಮೌಡ್ಯತನವನ್ನು ಕನಕದಾಸ ಕೆದಕುತ್ತಾನೆ. ಎಕ್ಕನಾತಿಯರ ಕಾಟ ಜಕ್ಕಿಯರು ಕನೈಯರು | ಸೊಕ್ಕಿನಿಂದ ಸೊಂಟಮುರುಕ ಬೈರೇ ದೇವರು || ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದ | ಇಂಥ ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು || ಇಂಥ ಕಂದಾಚಾರದಿಂದ ಮನುಷ್ಯಕುಲ ಹಸನಾಗುವುದಿಲ್ಲ. ಮಾರಿ ಮಸಣಗಳ ಆಶ್ರಯಿಸುತ್ತಾ ಮನುಷ್ಯ ತಾನೂ ಕ್ರೂರಿಯಾಗುತ್ತಾನೆ. ಇಂಥ ಅನಾಚಾರ ಸಮಾಜಕ್ಕೆ ಕಂಟಕಪ್ರಾಯ ಎಂಬ ಎಚ್ಚರಿಕೆ ಅವನದು. ತಮ್ಮ ಧರ್ಮಕ್ಕೆ ವಿರುದ್ದವೆನಿಸುವ ಇತರ ಧರ್ಮಗಳ ಆಚರಣೆಯನ್ನು ನಂಬಿಕೆಗಳನ್ನು ಎಲ್ಲರೂ ಟೀಕಿಸಿದ್ದಾರೆ, ವಿಡಂಬಿಸಿದ್ದಾರೆ. ತಮ್ಮ ಧರ್ಮವೇ ಶ್ರೇಷ್ಠವೆಂದುಕೊಳ್ಳುವ ದ್ರಷ್ಟಾರರೆಲ್ಲ ತಮ್ಮದನ್ನು ಪ್ರಶ್ನಿಸಿಕೊಳ್ಳಲು ಹೋಗುವುದಿಲ್ಲ.