ಪುಟ:Kanakadasa darshana Vol 1 Pages 561-1028.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೯೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ 255 ಅದರಂತೆ ತಂಡ ತಂಡದ ಹಿಂಡುದೈವದ ಆರಾಧನೆಯನ್ನು ಖಂಡಿಸಿ “ಎಕ್ಕಾತಿ ಎಲ್ಲಮ್ಮ ಮಾರಿ ದುರ್ಗಿಯು ಚೌಡಿ ಅಕ್ಕರೆಯಿಂದಲಿ ಪೂಜೆ ಮಾಡಲೇಕೆ....ಹೋತು ಕುರಿಕೋಣನಾ ಬಲಿಗೊಂಬ ಡೊಂಬಿದೈವಗಳ ಭಜಿಸದಿರು ಮನವೆ.......ಜ್ಞಾನವಿಲ್ಲದೆ ಹೀನ ದೈವದ ಭಜಿಸಲು ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ” ಎಂದೆಲ್ಲಾ ಮುಗ್ಗ ಅಜ್ಞರ ಅಂಧಶ್ರದ್ದೆ ಮೂಢನಂಬಿಕೆಗಳನ್ನು ಅಂತಃಕರಣದಿಂದ ಹರಳು ಕರಗುವಂತೆ ಹೇಳಿ ಧರ್ಮದ ನಿಜವಾದ ಮರ್ಮವನ್ನು ತಿಳಿಹೇಳುತ್ತಾರೆ. ಅದರಲ್ಲೂ ಇಲ್ಲಿಯ 'ಭಜಿಸದಿರು ಮನವೆ” “ಎಲೆ ಹುಚ್ಚುಮನವೆ” ಎಂಬ ಸಂಬೋಧನೆಗಳನ್ನು ನೋಡಬೇಕು. ಅಂದರೆ ಎಷ್ಟೋ ಸಲ ಇಡಿ ಸಮಾಜದ ಪ್ರತಿನಿಧಿಯಾಗಿ ಆ ಎಲ್ಲ ದೋಷಗಳನ್ನು ತಮ್ಮ ಮೇಲೆಯೇ ಆರೋಪಿಸಿಕೊಂಡು “ಆತ್ಮಬೋಧೆ” ಎನ್ನುವಂತೆ ಸಮಾಜಬೋಧೆಮಾಡುವ ಕನಕದಾಸರು ಅದರ ಬಗೆಗೆ ಇರಿಸಿಕೊಂಡ ಗಾಢವಾದ ಅವಿನಾಭಾವ ಸಂಬಂಧ ಅನನ್ಯವೆನಿಸುತ್ತದೆ. ಗಮನಿಸಬೇಕಾದ ಇನ್ನೂ ಒಂದು ವಿಶೇಷವೆಂದರೆ, ಕನಕದಾಸರುಮೇಲು ವರ್ಗದವರ ಸ್ವಾರ್ಥಬದ್ದವಾದ ದೋಷಗಳನ್ನು ನಿಷ್ಟುರವಾಗಿ, ನಿರ್ದಾಕ್ಷಿಣ್ಯವಾಗಿ ಎತ್ತಿ ಹೇಳುವ ಕನಕದಾಸರು-ಕೆಳವರ್ಗದವರ ಅನಾಗರಿಕ ದೋಷ ಮತ್ತು ವರ್ತನೆಯನ್ನು ಅತ್ಯಂತ ತಾಳ್ಮೆಯಿಂದ ಗ್ರಹಿಸಿ, ಅತ್ಯಂತ ಕನಿಕರದಿಂದ ನಿರೂಪಿಸುತ್ತಾರೆ. ಅಂದರೆ ಕನಕದಾಸರ ದೃಷ್ಟಿಯಲ್ಲಿ ತಿಳಿಯದೇ ಮಾಡುವ ಕೆಳವರ್ಗದವರ ಅಪರಾಧಗಳಿಗಿಂತ ತಿಳುವಳಿಕೆಯಿಂದ ಲೋಕಕಂಟಕರಾಗಿ ಮೇಲುವರ್ಗದವರು ಮಾಡುವ ಅಮಾನುಷ ಅಪರಾಧ ಸಮಾಜದ ಘೋರದುರಂತ. ಇನ್ನೊಂದು ವಿಶೇಷವೆಂದರೆ ಮೋಹನ ತರಂಗಿಣಿಯಲ್ಲಿ ಕಂಡುಬರುವ ಮತಾಭಿಮಾನ, ಮತೀಯ ತಾರತಮ್ಯ ಕೀರ್ತನೆಗಳಲ್ಲಿ ಅವಕಾಶ ಪಡೆಯುವದು ಕಡಿಮೆ, ಯಾವುದೇ ಮತದ ದೌರ್ಬಲ್ಯಗಳಾದರೂ ಸರಿಯೆ ನಿಷಕಪಾತವಾಗಿ ಬಯಲಿಗೆಳೆಯಬಲ್ಲರು. “ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ' ಎಂಬ ಕೀರ್ತನೆಯಲ್ಲಿ “ಪಟ್ಟೆನಾಮವ ಬಳಿದು.......ಗುಟ್ಟಿನಲ್ಲಿ ಜಪಿಸುವ ಗುಟ್ಟರಿಯದ ಕೆಟ್ಟ ಕೂಗನು ಕೂಗಿ ಹೊಟ್ಟೆ ಹೊರೆವಂಥ” ವೈಷ್ಣವರನ್ನು, “ಲಿಂಗಾಂಗದೊಳಗಿರುವ ಚಿನುಮಯವ ತಿಳಿಯದೆ, ಅಂಗಲಿಂಗದ ನೆಲೆಯ ಗುರುತರಿಯದೆ, ಜಂಗಮ-ಸ್ಥಾವರ ಹೊಲಬನರಿಯದ ಇಂಥ ಭಂಗಿ ಮುಕ್ಕುಗಳೆಲ್ಲ ಲಿಂಗವಂತರು ಅಹುದೆ ?” ಎಂದು ವೀರಶೈವರನ್ನು “ಅಲ್ಲಾ ಖುದಾ ಎಂಬ ಅರ್ಥವನ್ನು ಅರಿಯದೆ ಮುಲ್ಲಾಶಾಸ್ತದ ನೆಲೆಯ ಗುರುತರಿಯದೆ ಕಳ್ಳಕೂಗನೆ ಕೂಗಿ ಬೊಗಳಿ ಬಾಯ್ದೆರೆವಂಥ ಕಳ್ಳರಿಗೆ ತಾ ವೀರ ಸ್ವರ್ಗದೊರಕುವದೆ ?” ಎಂದು ಮುಸ್ಲಿಮರನ್ನು, ಧರ್ಮದ ಅರಿವಿಲ್ಲದ ಬಹಿರಾಡಂಬರವನ್ನು ವಿಡಂಬಿಸುವ ರೀತಿಯನ್ನು ಮೇಲಿನ ಮಾತಿಗೆ ಒಂದೆರಡು ಉದಾಹರಣೆಯಾಗಿ ಸೇರಿಸಬೇಕು. ಅವರ ಅರ್ಥಹೀನ ಆಚರಣೆಗಳನ್ನು ಆಯಾ ಮತಗಳ ಪ್ರಕ್ರಿಯೆಗಳಲ್ಲಿಯೇ, ಪರಿಭಾಷೆಯಲ್ಲಿಯೇ ಬಿಂಬಿಸುವ ರೀತಿಯಲ್ಲಿ ಕನಕದಾಸರು ಬೇರೆ ಮತ-ಧರ್ಮಗಳ ಸಮಾಜದೊಂದಿಗೆ ಇಟ್ಟುಕೊಂಡಿದ್ದ ಗಾಢಸಂಬಂಧ, ಮಧುರ ಬಾಂಧವ್ಯವನ್ನು ಕಂಡುಕೊಳ್ಳಬೇಕು. ಇದೆಲ್ಲವನ್ನು ನೋಡಿದಾಗ ಕನಕದಾಸರು ಒಬ್ಬ ಸಾತ್ವಿಕ ಸುಧಾರಣಾವಾದಿಗಳಾಗಿ ನಮ್ಮ ಗಮನ ಸೆಳೆಯುತ್ತಾರೆ. ಈ ಅವರ ಸಾತ್ವಿಕತೆ ಸುಪ್ತ ಶಾಖವಾಗಿ ಸಮಾಜದ ಶುಶೂಷೆ, ಚಿಕಿತ್ಸೆಗೆ ನಿಲ್ಲುತ್ತದೆ ; ಅಂತಾಗಿ ಸಮಾಜದ ಅನಾರೋಗ್ಯದ ಬಗ್ಗೆ ಅನುತಾಪಕ್ಕಿಂತ ಅನುಕಂಪ ಕಾಣಿಸಿಕೊಳ್ಳುತ್ತದೆ. ವೈಷ್ಣವ ವೀರಶೈವ ಹಾಗೂ ಮುಸ್ಲಿಮ ಮತ-ಧರ್ಮಗಳ ಸಮಾಜವನ್ನು ಕುರಿತು ಇಷ್ಟೆಲ್ಲ ಹೇಳುವ ಕವಿ ಜೈನಸಮಾಜವನ್ನು ಕುರಿತು ಹಾಗೆ ಆಡಿಕೊಂಡಂತೆ ಕಂಡು ಬರುವದಿಲ್ಲ. ವೈಷ್ಣವ ಮತದೊಂದಿಗಿನ ಅದರ ಸಂಬಂಧ ವೀರಶೈವ ಮತದಂತೆ ಬಹುಶಃ ಒಂದು ಸಮಸ್ಯೆಯಾಗಿ ಕನಕದಾಸರನ್ನು ಕಾಡಿರಲಿಕ್ಕಿಲ್ಲ. ಅದರಂತೆ ಧರ್ಮದ ತಿರುಳರಿಯದ ಮುಸ್ಲಿಮರನ್ನು ಕುರಿತು ಹೇಳುವಾಗಲೂ “ಕಳ್ಳರಿಗೆ ತಾ ವೀರ ಸ್ವರ್ಗದೊರಕುವದೆ” ಎಂಬಲ್ಲಿಯ “ವೀರಸ್ವರ್ಗ” ಎಂಬ ಶಬ್ದವೂ ಅಂದಿನ ರಾಜಕೀಯ ಮತ್ತು ಸಾಂಸ್ಕತಿಕ ಸಂದರ್ಭದ ಹಿನ್ನೆಲೆಯಲ್ಲಿ ಚಿಂತನಾರ್ಹವಾಗಿದೆ. ಒಟ್ಟಿನಲ್ಲಿ ಕನಕದಾಸರು ತಮ್ಮ ಸಮಕಾಲೀನ ಒಟ್ಟು ಸಮಾಜದ ಎಲ್ಲ ನೆಲೆಗಳ ಪ್ರಾಮಾಣಿಕ ಅನ್ವೇಷಣೆಗೆ ತೊಡಗಿ, ಆ ಎಲ್ಲ ನೆಲೆಗಳ ಸ್ವರೂಪವನ್ನು ಒಟ್ಟು ಸಾಂಸ್ಕೃತಿಕ ಹಾಗೂ ಮಾನವೀಯ ಪ್ರಜ್ಞೆಯ ಹಿನ್ನೆಲೆಯಲ್ಲಿ, ತಮ್ಮ ಪ್ರತ್ಯಕ್ಷ ಅನುಭವ-ಚಿಂತನೆ, ಕಳಕಳಿ-ಕಾಳಜಿಗಳ ಮೂಲಕ ಒಂದು ಘನವಾದ ಉದ್ದೇಶಕ್ಕಾಗಿ ಶೋಧಿಸಿ ಕೊಡುವದರಿಂದ, ಅವರ ಕೃತಿಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ನಮ್ಮ ಸಮಕಾಲೀನ ಸಾಮಾಜಿಕ ಹಾಗೂ ಸಾಹಿತ್ಯಕ ಸಂದರ್ಭದ ಹಿನ್ನೆಲೆಯಲ್ಲಿಯೂ ಹೊಸ ಹೊಸ ಅರ್ಥವನ್ನು ವ್ಯಂಜಿಸುತ್ತಲೇ ಅದರ ಹೆಚ್ಚಿನ ಹುಡುಕಾಟಕ್ಕೆ ಪ್ರೇರೇಪಿಸುತ್ತವೆ.