ಪುಟ:Kanakadasa darshana Vol 1 Pages 561-1028.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨೬ ಕನಕ ಸಾಹಿತ್ಯ ದರ್ಶನ-೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೮೨೭ ಮನ್ಮಥನ ಹೂ ಬಾಣಗಳೋ ಎಂಬಂಥ ಸೌಂದರ್ಯಾತಿಶಯವಿರುವವರು ಮಾತ್ರ. ಅವರಲ್ಲಿ ಯಾರಿಗೂ ವಿಶಿಷ್ಟ ವ್ಯಕ್ತಿತ್ವವಿಲ್ಲ. ಒಂದೇ ರೀತಿಯ ಸ್ತ್ರೀ ವರ್ಣನೆಗಳ ಭೋರ್ಗರೆತದಲ್ಲಿ ಈತ ಸ್ವಲ್ಪ ಗಮನವಿಟ್ಟು ಚಿತ್ರಿಸಿರುವ ಎರಡು ಮುಖ್ಯ ಪಾತ್ರಗಳೆಂದರೆ ರತಿ ಮತ್ತು ಚಿತ್ರಲೇಖೆ, ರತಿಯ ಪಾತ್ರಚಿತ್ರಣ ಅವಳ ಪ್ರೇಮಾತಿಶಯದ ಸ್ಪಷ್ಟ ಕಲ್ಪನೆ ನೀಡುತ್ತದೆ. ಶಿವನ ಉರಿಗಣ್ಣಿನಿಂದ ಸುಟ್ಟುಹೋದ ಮನ್ಮಥನು ನೆನೆದಾಗ ಮನದಲ್ಲಿ ಬರುವಂತೆ ಶಿವನಿಂದಲೇ ವರ ಪಡೆದು ಸುಟ್ಟುಹೋದವನ ಭಸ್ಮವನ್ನು ಶಿವನೇ ಧರಿಸುವಂತೆ ಮಾಡುವ ಮೂಲಕ ರತಿ, ಮನ್ಮಥನಿಗೆ ಪೂಜ್ಯತೆ ದೊರಕಿಸುತ್ತಾಳೆ. ಗಂಡನ ವಿಯೋಗವನ್ನು ಸಹಿಸಲಾರದೆ ಪ್ರಲಾಪಿಸುವ ಅವಳಿಗೆ ದುಃಖ ಮರೆತು, ಮನೆವಾರ್ತೆ ನೋಡಿಕೊ ಎಂದು ಸಖಿಯರು ಹೇಳಿದಾಗ 'ಸಂಸಾರವನ್ನು ಬಿಟ್ಟು ಹೋಗುವಾಗ ಹಾಲಿಗೆ ಹೆಪ್ಪು ಹಾಕಿದವರು ಯಾರು' ಎಂದು ಕೇಳುವಲ್ಲಿ ರತಿಯ ಅಪಾರ ಪತಿಪ್ರೇಮ ವ್ಯಕ್ತವಾಗಿದೆ. ಪತಿಯಿಲ್ಲದೆ ಯಾವ ವೈಭೋಗವೂ ಬೇಡ ಎಂದು ಅವಳು ಸಕಲ ವೈಭೋಗಗಳನ್ನು ತ್ಯಜಿಸಿ ಕಾಡಿಗೆ ತೆರಳುತ್ತಾಳೆ, ಶಂಬರಾಸುರ ಇವಳನ್ನು ಅಪಹರಿಸಿ ದಾಸಿಯಾಗಿಸಿದಾಗ ಮನ್ಮಥನು ಮರಳಿ ಜನ್ಮ ಪಡೆದು ತನ್ನ ಪತಿಯೇ ಆಗುವನೆಂಬ ದೇವವಾಣಿಯ ಮೇಲಿನ ಅಚಲ ವಿಶ್ವಾಸದಿಂದ ದೀರ್ಘಕಾಲ ಕಷ್ಟಗಳನ್ನು ತಾಳಿಕೊಂಡು ಪುನಃ ಮನ್ಮಥನನ್ನು ಮದುವೆಯಾಗುತ್ತಾಳೆ. ಕನಕ ರತಿಯ ಪಾತ್ರವನ್ನು ಆದರ್ಶ ಪ್ರೇಮಿಯನ್ನಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. - ಮೋಹನ ತರಂಗಿಣಿಯಲ್ಲಿ ಬೇರೆಲ್ಲ ಪಾತ್ರಗಳಿಗಿಂತ ಗಟ್ಟಿಯಾಗಿ ಚಿತ್ರಿತಗೊಂಡಿರುವ ಪಾತ್ರ ಚಿತ್ರಲೇಖೆ, ಬಾಣಾಸುರನ ಮಹಾಮಂತ್ರಿ ಕುಂಭಾಂಡನ ಮಗಳು ಹಾಗೂ ಬಾಣಾಸುರನ ಏಕೈಕ ಪುತ್ರಿ ಉಷೆಯ ಪ್ರಿಯಸಖಿ ಈ ಚಿತ್ರಲೇಖೆ. ಉಷೆಯ ಸ್ವರತಾಪವನ್ನು ತಣಿಸಲು, ರಾತ್ರಿ ಕಳೆದು ಬೆಳಗಾಗುವುದರಲ್ಲಿ ಸ್ವರ್ಗ, ಮರ್ತ್ಯ, ಪಾತಾಳಲೋಕಗಳನ್ನೆಲ್ಲ ಅನ್ವೇಷಿಸಿ ಉಷೆಯ ಮನದನ್ನನಾದ ಅನಿರುದ್ಧನನ್ನು ಕರೆತಂದು ಒಲಿದ ಹೃದಯಗಳ ಸಮಾಗಮವಾಗುವಂತೆ ಮಾಡುವ ಚಿತ್ರಲೇಖೆಯ ಸಾಹಸ ಪ್ರವೃತ್ತಿ, ಸ್ನೇಹಪರತೆ, ಮುಂದಾಲೋಚನೆ, ಚಾಕಚಕ್ಯತೆಗಳು ಬಹುವಾಗಿ ಗಮನ ಸೆಳೆಯುತ್ತವೆ. ಉಷೆಯ ಮನದನ್ನನಿಗಾಗಿ ಹುಡುಕುತ್ತಾ ದ್ವಾರಕಾಪುರಿಯನ್ನು ಪ್ರವೇಶಿಸಿ ಮನ್ಮಥನನ್ನು ನೋಡಿದ ಕೂಡಲೇ ಸಹಜವಾಗಿ ತಾನೇ ಮನ್ಮಥ ಬಾಧೆಗೆ ಈಡಾದಾಗ 'ಶಿವನು ಮನ್ಮಥನ ಗರ್ವವನ್ನು ಮೆಟ್ಟಿ ಭಸ್ಮಗೊಳಿಸಿದರೂ ಶ್ರೀಕೃಷ್ಣನು ಮತ್ತೆ ಇವನನ್ನೇಕೆ ಸೃಷ್ಟಿಸಿದೆ' ಎಂದು ಅಳುತ್ತಾಳೆ. ಕೊನೆಗೆ ಶಿವಮಂತ್ರವನ್ನು ಉಚ್ಚರಿಸಿ ಸಾವರಿಸಿಕೊಳ್ಳುತ್ತಾಳೆ. ಗೆಳತಿಯ ಸ್ಮರತಾಪ ಶಮನಕ್ಕಾಗಿ ಕೊನೆಗೂ ಅನಿರುದ್ಧನ ಪತ್ತೆ ಹಚ್ಚಿ ಅವರ ಸಮಾಗಮವಾಗುವಂತೆ ಮಾಡಿದಾಗ, ತನ್ನ ಇಷ್ಟಾರ್ಥವನ್ನು ಈಡೇರಿಸಿದ ಗೆಳತಿಯನ್ನು ಬಿಗಿದಪ್ಪಿ 'ನಿನ್ನ ಋಣವನ್ನು ಎಷ್ಟು ಜನ್ಮದಲ್ಲಿ ತೀರಿಸುವೆನೋ' ಎಂದು ಉಷೆ ನುಡಿದಾಗ ಮೈಯನ್ನು ತುರಿಸಿದ ಕೈಗಳ ಋಣವನ್ನು ತೀರಿಸಬೇಕೆಂಬ ಶಾಸ್ತ್ರವುಂಟೆ ಎಂದು ಒಂದು ಮಾತಿನಲ್ಲಿ ತಮ್ಮಿಬ್ಬರ ಅವಿನಾಸಂಬಂಧವನ್ನು ಚಿತ್ರಲೇಖೆ ಸೂಚಿಸುತ್ತಾಳೆ. ಅನಿರುದ್ಧನಂತೂ “ವಿವೇಕಯುತವಾಗಿ ಮಾಡಿದ ಯಜ್ಞ ಮೊದಲಾದ ಸತ್ಕರ್ಮಗಳ ಫಲವನ್ನೆಲ್ಲ ಧಾರೆ ಎರೆದು ಕೊಟ್ಟರೂ ನಾವು ಅವಳಿಂದ ಋಣಮುಕ್ತಲಾಗಲಾರೆವು. ಹುಟ್ಟಿದ ಮಕ್ಕಳಿಗೆ ಬೇಕಾದರೆ ಚಿತ್ರಲೇಖೆಯೆಂದು ಹೆಸರಿಡು' ಎಂದು ಹೃದಯತುಂಬಿ ನುಡಿಯುತ್ತಾನೆ. ಉಷಾ ಅನಿರುದ್ದರ ಸಮಾಗಮದ ನಂತರವೂ ಚಿತ್ರಲೇಖೆಯ ಹೊಣೆಗಾರಿಕೆ ಮುಗಿಯುವುದಿಲ್ಲ. ಬಾಣಾಸುರ ಅನಿರುದ್ಧನನ್ನು ಹಿಡಿದು ತರುವುದಕ್ಕಾಗಿ ಆಳುಗಳನ್ನು ಅಟ್ಟಿ ಯುದ್ಧವೇ ಪ್ರಾರಂಭವಾದಾಗ ಅನಿರುದ್ಧನನ್ನು ರಕ್ಷಿಸುವುದಕ್ಕಾಗಿ ಚಿತ್ರಲೇಖೆಯೇ ಮಣಿಮಯವಾದ ರಣಯಂತ್ರ ನಿರ್ಮಿಸಿ ದಿವ್ಯಮಂತ್ರಶಕ್ತಿಯುಳ್ಳ ಶಸ್ತಾಸ್ತವನ್ನು ಕೊಟ್ಟು ಹರಸಿ ಕಳುಹಿಸುತ್ತಾಳೆ. ಇಲ್ಲೆಲ್ಲ ಚಿತ್ರಲೇಖೆಯ ಸಮಯಪ್ರಜ್ಞೆ ಧೈರ್ಯ, ಅಚಲ ನಿಲುವುಗಳು ಮನಸೆಳೆಯುತ್ತವೆ. ಶ್ರೀಕೃಷ್ಣನೂ ಸಹ ಚಿತ್ರಲೇಖೆಯನ್ನು ಕುರಿತು ನೀನು ಮಾಡಿದ ಈ ಕೂಟವನ್ನು ಎಷ್ಟು ಹೊಗಳಿದರೂ ಸಾಲದು. ಅನಿರುದ್ಧನಿಗೆ ಜಗತ್ತಿನ ಕೋಮಲೆಯರ ಶಿರೋಮಣಿಯಾದ ಉಷೆಯನ್ನು ಕೂಡಿಸಿದೆ ಎಂದು ಪ್ರಶಂಸಿಸುತ್ತಾನೆ. ಚಿತ್ರಲೇಖೆಯ ಪಾತ್ರ ಕನಕದಾಸನನ್ನು ವಿಶೇಷವಾಗಿ ಸೆಳೆದಂತೆ ತೋರುತ್ತದೆ. ಏಕೆಂದರೆ ಮೋಹನ ತರಂಗಿಣಿಯ ಯಾವ ಪಾತ್ರಕ್ಕೂ ಕೊಡದಷ್ಟು ಪ್ರಾಮುಖ್ಯತೆಯನ್ನು ಇವಳ ಪಾತ್ರಕ್ಕೆ ಕೊಟ್ಟಿದ್ದಾನೆ. ಸ್ವತಃ ತನಗೂ ಮಧುರ ಭಾವನೆಗಳಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಗೆಳತಿಯ ಆಸೆಯನ್ನು ಈಡೇರಿಸುವುದಕ್ಕಾಗಿ ನಿಸ್ವಾರ್ಥ ಪ್ರಯತ್ನ ಪಡುವ ಉದಾತ್ತ ಸ್ನೇಹಪರ ಹೆಣ್ಣಾಗಿ ಚಿತ್ರಲೇಖೆ ಚಿತ್ರಿತವಾಗಿದ್ದಾಳೆ. ಚಿತ್ರಲೇಖೆಯ ಪಾತ್ರದಲ್ಲಿ ಅವಳ ಜಾಣೆ, ಸಹೃದಯತೆ, ಸ್ನೇಹಪರತೆ, ಸೌಂದರ್ಯದೃಷ್ಟಿ, ಅನಸೂಯಾ ಮನೋಭಾವಗಳಲ್ಲಿ ವ್ಯಕ್ತವಾಗಿವೆ. ಕನಕದಾಸ ಚಿತ್ರಲೇಖೆಯಂತಹ ಹೆಣ್ಣಿನ ಪಾತ್ರವನ್ನು ಸೃಷ್ಟಿಸಿದರೂ ಮೋಹನ ತರಂಗಿಣಿಯಲ್ಲಿ ಒಟ್ಟಾರೆ ಆತ ಹೆಣ್ಣನ್ನು ಸೌಂದರ್ಯದ ಖನಿಯಾಗಿ ಕಂಡಿದ್ದಾನೆ. ಈ ಹೆಣ್ಣಿನ ವರ್ಣನೆ ಬಹಳ ಅತಿರೇಕದ್ದು ಉತ್ತೇಕ್ಷೆಯದು ಎಂದು