ಪುಟ:Kanakadasa darshana Vol 1 Pages 561-1028.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೧೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳು : ಧಾರ್ಮಿಕ ಮುಖ ಈ ಹಂತದಲ್ಲಿ ಕನಕದಾಸರಿಗೆ ಎಲ್ಲವೂ ಭಗವನ್ನಯವಾಗಿ ಭಾಸವಾಗುತ್ತದೆ ; “ಎಲ್ಲಿ ನೋಡಿದರಲ್ಲಿ ರಾಮ” ಎಂದು ಅವರು ಮೈಮರೆತು ಹಾಡುತ್ತಾರೆ. ಕನಕದಾಸರಲ್ಲಿ ನಮಗೆ ಅಷ್ಟಾಗಿ ಅರ್ಥವಾಗದ ಒಂದು ಅಂಶವೆಂದರೆ ಅವರ ಕರ್ಮತತ್ವ ಪುರಸ್ಕಾರ. ಈ ಉದ್ಧಾರಗಳನ್ನು ನೋಡಬಹುದು : ಪೂರ್ವಜನ್ಮದಿ ನಾನು ಮಾಡಿದ ಕರ್ಮದಿಂ ಉರ್ವಿಯೊಳು ಜನಿಸಿದೆನೊ ಕೃಷ್ಣ || ಸರಸಿಜೋದ್ಧವನು ಹಣೆಯೊಳು ಬರೆದು ನಿರ್ಮಿಸಿದ ತೆರನುಳಿದು ಬೇರುಂಟೆ ತಾನರಿದುದೆ ||

ಆರಿಗಾದರು ಪೂರ್ವಕರ್ಮ ಬಿಡದು ಅಜಭವಾದಿಗಳ ಕಾಡುತಿಹುದು || ಇಷ್ಟೆಲ್ಲ ಹೇಳಿಯೂ, “ನಿರ್ಮಲ ವೈಷ್ಣವರ ವಿಧಿ ಸೋಂಕಲಹುದೆ ?” ಎಂದು ಬೇರೆ ಹೇಳುತ್ತಾರೆ. ಕೆಲವು ವಿಷಯಗಳಲ್ಲಿ ದಿಟ್ಟ ವೈಚಾರಿಕ ಮನೋಧರ್ಮವನ್ನು ಮೆರೆದ ಕನಕದಾಸರಲ್ಲಿ ಈ ದೈವವಾದದ ಅತಿರೇಕ ತಕ್ಕಮಟ್ಟಿಗೆ ಅನಿರೀಕ್ಷಿತ. ಇಲ್ಲಿ ಇತರ ದಾಸರಿಗಿಂತ ಅವರು ಬೇರೆಯಲ್ಲ. ನೀತಿಸಂಹಿತೆ ಧರ್ಮದ ಒಂದು ಮುಖ. ಈ ದೃಷ್ಟಿಯಿಂದ ಕನಕದಾಸರು ಸಮಾಜಕ್ಕೆ ಭಕ್ತಿ ವೈರಾಗ್ಯ ಸದಾಚಾರಗಳನ್ನು ಬೋಧಿಸಿದ್ದಾರೆ. ಇನ್ನೊಂದು ಕಡೆ ಸಮಾಜ ವಿಮರ್ಶೆ, ವಿಡಂಬನಗಳಲ್ಲೂ ತೊಡಗಿದ್ದಾರೆ. ಧರ್ಮದ ಹೆಸರಿನಲ್ಲಿ ಬೇರು ಬಿಟ್ಟಿರುವ ಅನಿಷ್ಟ ಅಂಧಶ್ರದ್ದೆಗಳನ್ನು ಅವರು ಉಗ್ರವಾಗಿ ಖಂಡಿಸುತ್ತಾರೆ. ಈ ದಿಸೆಯಲ್ಲಿ ಮುಖ್ಯವಾದದ್ದು ಜಾತಿ, ಕುಲಗಳ ನಿರಸನ. ಕುಲ ಕುಲ ಕುಲವೆನ್ನುತಿಹರು - ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ ? “ಆತ್ಮ ಯಾವ ಕುಲ ಜೀವ ಯಾವ ಕುಲ ?” ಎಂಬುದು ಕನಕದಾಸರ ಪ್ರಶ್ನೆ. ಇಲ್ಲಿ ವಿದ್ವಾಂಸರೊಬ್ಬರ ಹೇಳಿಕೆ ಗಮನಾರ್ಹ : “ಕನಕದಾಸರು ಪರಮ ಭಗವದ್ಭಕ್ತರಾದ್ದರಿಂದ ಅವರಿಗೆ ಶಾಸ್ತ್ರದಲ್ಲಿ ಹೇಳಿದ ವರ್ಣಾಶ್ರಮ ವಿಭಾಗಗಳಲ್ಲಿ ಬಲವಾದ ಶ್ರದ್ಧೆಯಿತ್ತು.” ಇದು ಹಾಸ್ಯಾಸ್ಪದವೆನ್ನಬೇಕು. ಭಗವದ್ಭಕ್ತಿಗೂ ವರ್ಣಾಶ್ರಮ ವ್ಯವಸ್ಥೆಗೂ ಎಲ್ಲಿಯ ಸಂಬಂಧ? ಕನಕದಾಸರ ಸಾರ್ವಕಾಲಿಕ ಸಂದೇಶವೊಂದನ್ನು ನೆನೆಯದಿದ್ದರೆ ಈ ಸಮೀಕ್ಷೆ ಅಪೂರ್ಣವಾದೀತು. ಅವರ ಅನನ್ಯ ದೈವಶರಣಾಗತಿಯ ನೆಲೆಯಿಂದ ಹೊಮ್ಮಿದ್ದು ಈ ಅಮೋಘ ಸಂದೇಶ : ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವೆ ? ಬೆಟ್ಟದಾ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ ? || ಕೆಲವರು ಭಾವಿಸುವಂತೆ ಇದು ನಿಷ್ಕ್ರಿಯತೆಯನ್ನು ಉಪದೇಶಿಸುವುದಿಲ್ಲ; ಪುರುಷ ಪ್ರಯತ್ನವನ್ನು ನಿರಾಕರಿಸುವುದಿಲ್ಲ. ಬೆಟ್ಟದ ತುದಿಯ ವೃಕ್ಷ ಕ್ರಿಯಾಶೂನ್ಯ ವಾಗಿರುವುದಿಲ್ಲ : ಬಂಡೆಗಳ ನಡುವೆಯೂ ಬೇರುಗಳನ್ನಿಳಿಸಿ ನೀರನ್ನು ಹೀರಿಕೊಳ್ಳುತ್ತಲೆ ಇರುತ್ತದೆ. ಪ್ರಯತ್ನವನ್ನು ತೊರೆಯದೆ ಪರಮಾತ್ಮನಲ್ಲಿ ವಿಶ್ವಾಸವಿಟ್ಟಿದ್ದರೆ ಕಳವಳಕ್ಕೆ ಆಸ್ಪದವಿಲ್ಲವೆಂದು ದಾಸರ ಅಭಿಮತ. ಹಿಂದೆಯೆ ನೋಡಿದಂತೆ ಕನಕದಾಸರಲ್ಲಿ ಕೆಲವು ಮಿತಿಗಳಿವೆ ; ದ್ವಂದ್ವಗಳಿವೆ. ಆದರೆ ಅವು ಅವರ ವೈಯಕ್ತಿಕ ಸಿದ್ದಿಯ ಔನ್ನತ್ಯಕ್ಕೆ ಭಂಗ ತರುವಷ್ಟು ದೊಡ್ಡ ವಲ್ಲ. ಆದರೂ ಈ ವಿಸಂಗತಿಗಳೇಕೆ ಎಂಬ ಪ್ರಶ್ನೆ ಅನಿವಾರ್ಯ. ಕನಕದಾಸರನ್ನು ಎಲ್ಲೋ ಒಂದು ಕಡೆ ತಾವು ದೀಕ್ಷೆಗೊಂಡಿದ್ದ ಮಾಧ್ವಮತದ ಗುರುತ್ವಾಕರ್ಷಣಶಕ್ತಿ ಅವರಿಗರಿವಿಲ್ಲದಂತೆಯೆ ಜಗ್ಗುತ್ತಿರುವ ಹಾಗೆ ತೋರುತ್ತದೆ. ಆದ್ದರಿಂದ ಅವರಲ್ಲಿ ಮಿತಿಗಳಿದ್ದರೆ ಅವು ಮತ ವಿಧಿಸಿದ ಮಿತಿಗಳು ಎನ್ನಬೇಕಷ್ಟೆ. ಹಾಗೆ ನೋಡಿದರೆ, ವಚನ ಸಾಹಿತ್ಯದ ಧೀರ ವೈಜ್ಞಾನಿಕ ಭಂಗಿ, ಸಮಗ್ರ ಕ್ರಾಂತಿಕಾರಿ ಧೋರಣೆ ದಾಸಸಾಹಿತ್ಯದಲ್ಲಿ ನಮಗೆ ಕಾಣದೊರೆಯುವುದಿಲ್ಲ ಎಂಬುದು ಸ್ಪಷ್ಟ. ಇದಕ್ಕೆ ಆಯಾ ಸಾಹಿತ್ಯದ ತಾತ್ವಿಕ ಹಿನ್ನೆಲೆಯ ಭಿನ್ನತೆ ೧. ಕನಕದಾಸರ ಕೀರ್ತನೆಗಳಲ್ಲಿ ಪಾಠಸಮಸ್ಯೆಗಳಿರಬಹುದು. ಕಲಿಕಾಲದಲ್ಲಿ ಜಾತಿ, ನೀತಿಗಳು ಹೋದುವೆಂದು ವಿಷಾದಿಸುವ, ಹರಿಹರಾಭೇದವನ್ನು ಟೀಕಿಸುವ ಒಂದೆರಡು ಕೀರ್ತನೆಗಳು ಕನಕದಾಸರವೆ ಹೌದೆ ಎಂಬುದು ಗ್ರಂಥಸಂಪಾದನೆಗೆ ಬಿಟ್ಟದ್ದು. ೨. ಇಲ್ಲಿ ಒಂದು ಊಹೆ : ಈ ದ್ವಂದ್ವಗಳಿಂದ ಪಾರಾಗುವುದಕ್ಕಾಗಿ, ಕೆಲವು ಸಂಗತಿಗಳನ್ನು ಬಹಿರಂಗವಾಗಿ ಹೇಳಲಾಗದ ಉಭಯಸಂಕಟದ ನಿವಾರಣೆಗಾಗಿ, ಅವರು ಮೇಲುನೋಟಕ್ಕೆ ತಮಾಷೆ ಎನಿಸುವ, ಆದರೆ ಪ್ರಖರ ಸಾಮಾಜಿಕ ಪ್ರಜ್ಞೆಯನ್ನು ಹೊಟ್ಟೆಯಲ್ಲಿಟ್ಟುಕೊಂಡ 'ರಾಮ ಧಾನ್ಯಚರಿತ್ರೆ'ಯಂಥ ಸಾಂಕೇತಿಕ ಕಾವ್ಯವನ್ನು ರಚಿಸಿ ನೆಮ್ಮದಿಪಟ್ಟುಕೊಂಡಿರಬಹುದೆ?