ಪುಟ:Kanakadasa darshana Vol 1 Pages 561-1028.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರು : ಕೆಲವು ಚಿಂತನೆಗಳು ಡಾ : ಜಿ. ಎಸ್. ಶಿವರುದ್ರಪ್ಪ ಚರಿತ್ರೆಯ ಗತಿ ಯಾವಾಗಲೂ ಪ್ರಗತಿಗಾಮಿಯಾಗಿರುತ್ತದೆ ಎಂದು ಹೇಳಲು ಬಾರದು. ಸಾಂಪ್ರದಾಯಿಕವಾದ ಹಾದಿಯನ್ನು ತಿರಸ್ಕರಿಸಿ, ತನ್ನ ಕಾಲವನ್ನೂ ಮೀರಿ ಅದ್ಭುತವಾದ ಪ್ರಗತಿಪರ ಮನೋಧರ್ಮಕ್ಕೆ ಹೊರಳಿದ ಚರಿತ್ರೆ, ಇದಕ್ಕಿದ್ದ ಹಾಗೆ ಮತ್ತೆ ಹಿಮ್ಮರಳಿ ಸಂಪ್ರದಾಯಕ್ಕೇ ಜೋತುಬೀಳುವ ಸಂದರ್ಭಗಳೂ ಉಂಟು. ಕನ್ನಡ ಸಾಹಿತ್ಯ ಪರಂಪರೆಯ ಒಂದು ಹಂತದಲ್ಲಿ ಕಾಣಿಸಿಕೊಂಡ ವಚನ ಚಳುವಳಿ ಹಾಗೂ ಆನಂತರದ ಹರಿದಾಸ ಚಳುವಳಿ ಈ ಮಾತಿಗೆ ನಿದರ್ಶನವಾಗಿದೆ. ವಚನ ಚಳುವಳಿಗಾಗಲಿ ಹರಿದಾಸ ಚಳುವಳಿಗಾಗಲೀ ಮೂಲ ಪ್ರೇರಣೆ ಒಂದೇ : ಅದು ಧರ್ಮಶ್ರದ್ದೆ. ಹಾಗೂ ಅದರ ಅಂಗವಾದ ಭಕ್ತಿ, ಒಂದಕ್ಕೆ ಹರ ಭಕ್ತಿ ಮೂಲ ದ್ರವ್ಯವಾದರೆ ಇನ್ನೊಂದಕ್ಕೆ ಹರಿಭಕ್ತಿ. ಆದರೆ ವಚನಕಾರರಾಂದೋಲನ ಸಂಪ್ರದಾಯವನ್ನು ಪ್ರಶ್ನಿಸಿದಷ್ಟು, ಪ್ರತಿಭಟಿಸಿದಷ್ಟು ಮತ್ತು ವೈಚಾರಿಕವಾದಷ್ಟು, ದಿಟ್ಟತನವನ್ನು ಹರಿದಾಸ ಚಳುವಳಿ ತೋರಿಸಲಿಲ್ಲ. ವೈದಿಕ ಧರ್ಮದ ತಿರುಳಾದ ವರ್ಣಾಶ್ರಮ ಧರ್ಮವನ್ನು, ಪರಿಶುದ್ಧವಾದ ವಿಷ್ಣುಭಕ್ತಿಯ ತಳಹದಿಯ ಮೇಲೆ ನಿಲ್ಲಿಸಿದ ಮಧ್ವಾಚಾರ್ಯರ ಸಿದ್ಧಾಂತದ ಪ್ರತಿಪಾದನೆಯನ್ನು ಉದ್ದೇಶವಾಗಿ ಉಳ್ಳ ಈ ಹರಿದಾಸ ಚಳುವಳಿ “ಭಕ್ತಿಯ ಮೇಲೆ ಒತ್ತುಕೊಡುವ ಕಾರಣದಿಂದ, ವರ್ಣಾಶ್ರಮ ಧರ್ಮ'ದ ಚೌಕಟ್ಟಿನಲ್ಲಿಯೆ ಒಂದಷ್ಟು ಉದಾರತೆಯನ್ನು ತಂದಿತಾದರೂ, ತನಗಿಂತ ಹಿಂದಿನ ಶರಣ ಚಳವಳಿಯಂತೆ, ವರ್ಣಾಶ್ರಮ ಧರ್ಮದ ಕಲ್ಪನೆಯನ್ನೆ ಮುರಿದು, ವ್ಯಕ್ತಿವ್ಯಕ್ತಿಗಳ ನಡುವಣ ತಾರತಮ್ಯವನ್ನು ತಿರಸ್ಕರಿಸಿ ಸಮಾನತೆಯನ್ನು ಪ್ರತಿಪಾದಿಸುವಷ್ಟು ಪ್ರಗತಿಗಾಮಿಯಾಗಲಿಲ್ಲ. ಇಂಥ ಒಂದು ಸಂದರ್ಭದಲ್ಲಿ, ಬಹುಮಟ್ಟಿಗೆ ಪ್ರತಿಷ್ಠಿತ ಸಾಮಾಜಿಕ ವರ್ಗದವರಿಂದ ರೂಪುಗೊಂಡ ಈ ಆಂದೋಲನದಲ್ಲಿ, ಅಪ್ರತಿಷ್ಠಿತ ಸಾಮಾಜಿಕ ಸ್ತರದಿಂದ ಬಂದು ಸೇರಿಕೊಂಡ ಕನಕದಾಸರಂಥವರು, ಅಂದಿನ