ಪುಟ:Kanakadasa darshana Vol 1 Pages 561-1028.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೩೨ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ಎನ್. ಶ್ರೀನಿವಾಸ ಉಡುಪ ಧೋರಣೆಯನ್ನು ಪ್ರತಿಭಟಿಸಲೆಂದೇ, ಶರಣರು ದೇವಸ್ಥಾನಗಳನ್ನು ನಿರಾಕರಿಸಿದರು ಮತ್ತು ಕನಕದಾಸರಂಥವರು, ವಚನಕಾರರ ಚಳುವಳಿಯ ಸಂದರ್ಭದಲ್ಲಿ ಬದುಕಿದ್ದರೆ, ಈ ಬಗೆಯ ಪ್ರಸಂಗಗಳೆ ಉದ್ಭವಿಸುತ್ತಿರಲಿಲ್ಲವೆಂಬ ಸಂಗತಿಯನ್ನು ನೆನೆದರೆ, ಈ ಎರಡು ಕಾಲಮಾನಗಳ ನಡುವಣ ವ್ಯತ್ಯಾಸದ ಸ್ವರೂಪ ಸ್ವಯಂ ಸ್ಪಷ್ಟವಾಗುತ್ತದೆ. ಇಂಥ ಪರಿಸರದ ನಡುವೆಯೂ ಕನಕದಾಸರು ತಮ್ಮ ದಾರಿಯನ್ನು ತಾವೇ ಕಂಡುಕೊಂಡವರು. ಒಂದು ಕೀರ್ತನೆಯಲ್ಲಿ - ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ-ತುತ್ತು ಒಟ್ಟಿಗಾಗಿ ಎಂದು ಲೋಕಜೀವನವನ್ನು ವಾಖ್ಯಾನ ಮಾಡುತ್ತಾ, ಅದೇ ಕೀರ್ತನೆಯ ಕೊನೆಯ ಚರಣಗಳಲ್ಲಿ ಉನ್ನತಕಾಗಿನೆಲೆಯಾದಿ ಕೇಶವನ ಧ್ಯಾನವನ್ನು ಮನ ಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕ್ಕಾಗಿ ಎನ್ನುತ್ತಾರೆ. ಈ ಕೀರ್ತನೆಯ ಮೊದಲ ಚರಣಗಳ ಮೂಲಕ ವಿವರಿತವಾಗುವ ಲೋಕ ಜೀವನ ಹಾಗೂ ಕೊನೆಯ ಚರಣಗಳ ಮೂಲಕ ಸೂಚಿತವಾಗುವ ಉದ್ದೇಶ, ಈ ಎರಡೂ ಮನುಷ್ಯನ ಅಸಿತ್ತದ ಅಂದರೆ ಇರುವ ಹಾಗೂ ನಿಜವಾಗಿ ಇರಬೇಕಾದ' ಎರಡು ನೆಲೆಗಳನ್ನು ಹೆಸರಿಸುತ್ತದೆ. ಮೊದಲ ನೆಲೆಯಿಂದ ಅಂದರೆ 'ಹೊಟ್ಟೆಗಾಗಿ', 'ಗೇಣು ಬಟ್ಟೆಗಾಗಿ' ಬದುಕುವ ಹಂತದಿಂದ ಮುಕ್ತಿಗಾಗಿ ಆನಂದಕ್ಕಾಗಿ ಬದುಕುವ ಹಂತಕ್ಕೆ ಏರಬೇಕಾದರೆ ಇರುವ ಸಾಧನವೆಂದರೆ “ಉನ್ನತ ಕಾಗಿನೆಲೆಯಾದಿ ಕೇಶವನ ಧಾನ್ಯವನ್ನು ಮನಮುಟ್ಟಿ' ಮಾಡುವ ಧರ್ಮಶ್ರದ್ದೆ ಅಥವಾ ಶಕ್ತಿ. ಈ ನೆಲೆಯಲ್ಲಿಯೆ ವ್ಯಕ್ತಿ ಬೇರೊಂದು ಅಧಿದೈವಕ್ಕೆ ದಾಸನಾಗುತ್ತಾನೆ. ಹೀಗೆ ತನಗಿಂತ ದೊಡ್ಡದಾದ ದೈವಕ್ಕೆ 'ದಾಸ'ನಾಗುವುದು ಅಥವಾ ಶರಣಾಗುವುದೆಂದರೆ ವಾಸ್ತವವನ್ನು ಹಾಗೂ ವಾಸ್ತವದ ಅಧೀನತೆ'ಗಳನ್ನು ಮೀರುವುದು. ಈ 'ಅಧೀನತೆ'ಗಳನ್ನು ಮೀರುವುದರಿಂದ ಒದಗುವ ದಿಟ್ಟತನ, ಪ್ರತಿಭಟನೆಯ ಕೆಚ್ಚು, ಸಂಪ್ರದಾಯ ವಿರೋಧೀ ಧೋರಣೆಗಳು, ಸ್ವಾತ್ರವಿಮರ್ಶೆ ಮತ್ತು ಲೋಕವಿಮರ್ಶೆ, ಸಾಮಾನ್ಯ ಜನದೊಂದಿಗೆ ಬೆರೆಯುವ ಹಾಗೂ ಅವರಿಗೆ ಅರ್ಥವಾಗುವ ಭಾಷೆಯ ಮೂಲಕ ಪರಮಾರ್ಥವನ್ನು ತಿಳಿಸುವ ಲಕ್ಷಣಗಳು ವ್ಯಕ್ತಿತ್ವದೊಳಕ್ಕೆ ಮೈಗೂಡಿಕೊಳ್ಳುತ್ತವೆ. ಅಂದಿನ ಭಕ್ತಿಪಂಥದ ಕೊಡುಗೆಯಾದ ಈ ಎಲ್ಲ ಲಕ್ಷಣಗಳೂ ಕನಕದಾಸರ ವ್ಯಕ್ತಿತ್ವದಲ್ಲಿ ಮೇಳವಿಸಿವೆ. ಭಾರತೀಯರ ಸಾಂಸ್ಕೃತಿಕ ಬದುಕಿಗೆ ಭಕ್ತಿಯೇ ಬೆನ್ನೆಲುಬು, ಲೌಕಿಕ ಜೀವನದಲ್ಲಿ ಭಕ್ತಿಯೆಂಬುದು ವ್ಯಕ್ತಿಯ ಪಾಲಿಗೆ ಒಂದು ಕ್ಷೇಮಭಾವನೆಯನ್ನು ಒದಗಿಸುವ ಕೃಪಾರಕ್ಷೆ ; ಪಾರಲೌಕಿಕದೃಷ್ಟಿಯಲ್ಲಿ ಭಕ್ತಿ ಮನುಷ್ಯನನ್ನು ಭಗವಂತನ ಸಾನ್ನಿಧ್ಯಕ್ಕೆ ಕರೆದೊಯ್ಯುವ ಕರುಣಾಳು ಬೆಳಕು, ಭಕ್ತಿಯ ತುರೀಯ ಸ್ತರವನ್ನು ತಲುಪಿದ ಭಕ್ತ "ತೃಪ್ತನಾಗುತ್ತಾನೆ. “ಸ್ತಬ್ದ' ನಾಗುತ್ತಾನೆ. 'ಆತ್ಮಾರಾಮ' ನಾಗುತ್ತಾನೆಎಂದು ನಾರದೀಯ ಭಕ್ತಿಸೂತ್ರ ಭಕ್ತಿಯನ್ನು ಕೀರ್ತಿಸುತ್ತದೆ. ಆದ್ದರಿಂದಲೇ ಭಾರತೀಯ ಸಂತರೆಲ್ಲರೂ ಭಕ್ತಿಕೀಲಿಯನ್ನು ಹಿಡಿದು, ಭಗವಂತನ ಎದೆಯ ಕದವನ್ನು ತೆರೆದು, ಅವನೊಂದಿಗೆ ಹೃದಯಸಂವಾದ ನಡೆಸಲು ಪ್ರಯತ್ನಿಸಿ ಸಫಲರಾದವರು. ಶ್ರವಣ, ಕೀರ್ತನ ಇತ್ಯಾದಿ ನವವಿಧ ಭಕ್ತಿಮಾರ್ಗಗಳನ್ನು ಭಾಗವತ ಪ್ರಸ್ತಾಪಿಸುತ್ತದೆ. ಬಂಗಾಳದಲ್ಲಿ ಒಂದು ಕಾಲದಲ್ಲಿ ಪ್ರಖರವಾಗಿ ಬೆಳಗಿದ ಚೈತನ್ಯಪಂಥ ಭಕ್ತಿಗೆ ರಸದ ಸ್ಥಾನವನ್ನೇ ಕಲ್ಪಿಸಿಕೊಟ್ಟಿತು. ಶಾಂತ, ದಾಸ್ಯ, ಸಖ್ಯ, ಮಧುರ ಮತ್ತು ವಾತ್ಸಲ್ಯಗಳೆಂಬ 'ಪಂಚಭಾವ'ಗಳಲ್ಲಿ ಭಕ್ತಿಯ ನೆಲೆಯನ್ನು ಕಂಡುಕೊಂಡ ಈ ಪಂಥದವರು ಮಧುರ ಭಾವವನ್ನೇ ಆರಿಸಿಕೊಂಡರು. ದಕ್ಷಿಣ ಭಾರತದಲ್ಲಿ ಸುಮಾರು ಹನ್ನೆರಡನೆಯ ಶತಮಾನದಲ್ಲಿ ಹಚ್ಚಲಾದ ಭಕ್ತಿಯ ಹಣತೆ ಕರ್ಣಾಟಕದ ಹರಿದಾಸರ ಕೈಯಲ್ಲಿ ಉಜ್ವಲವಾಗಿ ಬೆಳಗುವ ದೀವಿಗೆಯಾಯಿತು. ಇದರ ಬೆಳಕಿನಲ್ಲಿ ಹರಿದಾಸರು ತಮ್ಮ ಒಳಹೊರಗನ್ನು ಶೋಧಿಸಿಕೊಂಡರು ; ಸಮಾಜದ ಓರೆ-ಕೋರೆಗಳನ್ನೂ, ಅಶುಚಿ-ಅರಕೆಗಳನ್ನೂ ತೋರಿಸಿಕೊಟ್ಟರು ; ಎಲ್ಲಕ್ಕೂ ಮಿಗಿಲಾಗಿ ಲೌಕಿಕ ಜೀವನದಿಂದ ಪಾರಮಾರ್ಥಿಕ ಎತ್ತರಕ್ಕೇರುವ ದಾರಿಯನ್ನು ನಿರ್ದೇಶಿಸಿದರು. ಹೀಗೆ ಮಾಡುವಾಗ ಕನ್ನಡ ಸಾಹಿತ್ಯವಾಹಿನಿಗೆ ಭಕ್ತಿ ಸಾಹಿತ್ಯದ ಶಾಖೆಯೊಂದು ಕೀರ್ತನೆ, ಸುಳಾದಿ, ಉಗಾಭೋಗ ಮುಂತಾದ ಸುಂದರ ಸುಳಿಗಳೊಡನೆ ಬಂದು ಸೇರುವಂತೆ ಮಾಡಿದರು. ಪರಂಪರೆಯ ಪ್ರಕಾರ,