ಪುಟ:Kanakadasa darshana Vol 1 Pages 561-1028.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೬೯ ಕನಕದಾಸರ ಕೀರ್ತನೆಗಳ ಕಳವು ಡಾ. ಹಂಪನಾ ಕನ್ನಡದ ಕೀರ್ತನಸಾಹಿತ್ಯವನ್ನು ಸತ್ವಶಾಲಿಯಾಗಿಸಿದ ಬಹುಪಾಲು ಹಿರಿಮೆ ಕನಕದಾಸರಿಗೆ ಸಲ್ಲುತ್ತದೆ. ಅವರ ಹಾಡುಗಳಲ್ಲಿ ಕಾವ್ಯವೂ ಧರ್ಮವೂ ನೀತಿಯೂ ಸಾಮಾಜಿಕತೆಯೂ ಬಂಡಾಯಪ್ರಜ್ಞೆಯೂ ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ಕಾವ್ಯದ ಭಾವ ನಿರ್ಭರತೆ, ಪ್ರತಿಭೆ-ಸ್ಫೂರ್ತಿ, ಶಿಲ್ಪ, ಕಲಾವಂತಿಕೆ ಮೊದಲಾದ ಗುಣಗಳು ಅವರ ಎಷ್ಟೋ ಹಾಡುಗಳಲ್ಲಿ ಕಂಡುಬರುತ್ತವೆ. ಕನಕದಾಸರ ಉಪಲಬ್ದ ಕೀರ್ತನೆಗಳು ಸಾಕಷ್ಟಿವೆಯೆಂಬುದು ಗಣಿತದ ಮಾತು ; ಈ ಸಂಖ್ಯಾದೃಷ್ಟಿಯನ್ನು ಬಿಟ್ಟು ಕೇವಲ ಸಾಹಿತ್ಯದ ಆಧಾರದಿಂದಷ್ಟೇ ನೋಡುವಾಗಲೂ ಅವರ ಹಾಡುಗಳಿಗಿರುವ ಹಿನ್ನೆಲೆ, ಹಿರಿಮೆ ಮತ್ತು ಮಹಿಮೆ ಏನೆಂಬುದನ್ನು ಸಾಹಿತ್ಯಕಾರರು ಗುರುತಿಸಿದ್ದಾರೆ. ಇದುವರೆಗೆ ವಿಮರ್ಶಕರು ಹೆಚ್ಚಾಗಿ ಗುರುತಿಸಿ ಚರ್ಚಿಸಿ ತೀರ್ಮಾನಗಳಿಗೆ ತಲಪದೆ ಇರುವ ಒಂದು ಮುಖ್ಯ ವಿಷಯದತ್ತ ಈ ಸಂಪ್ರಬಂಧದ ಪ್ರಯತ್ನ ಹರಳುಗೊಂಡಿದೆ. ಕನಕದಾಸರ ಕೀರ್ತನೆಗಳನ್ನು ಉಳಿದ ಕೀರ್ತನಕಾರರ ಕೀರ್ತನೆಗಳೊಂದಿಗೆ, ತೌಲನಿಕವಾಗಿ ನೋಡತೊಡಗಿದಾಗ ಕೆಲವು ಸಮಾನ ಹಾಡುಗಳು ಕಂಡುಬಂದಿವೆ. ಸಮಕಾಲೀನ ಹಿರಿಯ ಕೀರ್ತನಕಾರರಾದ ಕನಕದಾಸ ಮತ್ತು ಪುರಂದರದಾಸ ಇವರ ಕೀರ್ತನೆಗಳಿಗಷ್ಟೇ ಈ ತುಲನಾತ್ಮಕ ಅಧ್ಯಯನವನ್ನು ಸೀಮಿತಗೊಳಿಸಲಾಗಿದೆ. ಒಂದೇ ಪ್ರಕಾಶನದ ವತಿಯಿಂದ ಪ್ರಕಟವಾಗಿರುವ ಇವರಿಬ್ಬರ ಹಾಡುಗಳಿರುವ ಸಂಕಲನ ಪುಸ್ತಕಗಳನ್ನು ಆರಿಸಿಕೊಂಡು ಈ ತೌಲನಿಕ ಸಮೀಕ್ಷೆ ಕೈಗೊಂಡಿದ್ದೇನೆ. ನಾನು ಪ್ರಧಾನವಾಗಿ ಅವಲಂಬಿಸಿರುವ ಆ ಎರಡು ಪುಸ್ತಕಗಳ ವಿವರಗಳು : ಅ. ಶ್ರೀ ಕನಕದಾಸರ ಹಾಡುಗಳು : ಸಂ. ಕೃಷ್ಣಶರ್ಮ ಬೆಟಗೇರಿ ಮತ್ತು ಹುಚೂರಾವ ಬೆಂಗೇರಿ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೨ ಆ. ಪುರಂದರದಾಸರ ಹಾಡುಗಳು : ಸಂ. ಕಾವ್ಯಪ್ರೇಮಿ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೬. ಈ ಎರಡು ಸಂಕಲನಗಳಿಗಿಂತ ಇನ್ನೂ ಉತ್ತಮವೂ ಅಧಿಕೃತವೂ ಗಮನಾರ್ಹವೂ ಎನಿಸುವ ಅನ್ಯಾನ್ಯ ಸಂಪಾದಿತ ಕೃತಿಗಳಿರಬಹುದಾದರೂ ಪ್ರಸ್ತುತ ಪರಿಶೀಲನೆಗೆ ಈ ಆವೃತ್ತಿಗಳು ಸಾಕು. ಈ ಇಬ್ಬರು ಪ್ರಮುಖ ದಾಸವರೇಣ್ಯರ ಕೀರ್ತನೆಗಳಲ್ಲಿ ಅನೇಕ ಸಾದೃಶ್ಯಗಳಿವೆ. ತೀರ ಆಕಸ್ಮಿಕ ಹಾಗೂ ಆನುಷಂಗಿಕವೆನಿಸುವ ಸಾದೃಶ್ಯಗಳನ್ನು ಕೈಬಿಟ್ಟು, ಕೇವಲ ಪ್ರಧಾನವಾಗಿ ಪರಿಗಣಿಸಬೇಕಾದ ಸಮಾನ ಹಾಡುಗಳನ್ನು ಪ್ರಸ್ತಾಪಿಸುವ ಔಚಿತ್ಯವಿದೆ. ಕೀರ್ತನೆಗಳ ಆರಂಭದ ಪಾದದಲ್ಲಿ, ಅಂದರೆ ಪಲ್ಲವಿ ಅನುಪಲ್ಲವಿಗಳಲ್ಲಿ ಮಾತ್ರ ಸಾಮ್ಯವಿದ್ದು ನಂತರದ ಸಾಲುಗಳಲ್ಲಿ, ಅಂದರೆ ಚರಣಗಳಲ್ಲಿ ಬೇರಾವ ಸಂಬಂಧವನ್ನೂ ಸ್ಥಾಪಿಸಿಕೊಳ್ಳದ ಇತರ ಕೆಲವು ಕೀರ್ತನೆಗಳನ್ನು ಈ ವಿವೇಚನೆಯ ಕಕ್ಷೆಯಿಂದ ಆಚೆಗಿರಿಸಿದ್ದೇನೆ. ಉದಾಹರಣೆಗಳು : ಅಣು ಮಹತ್ತಾದಿ ದೇವ ಎಂಬ ಕನಕದಾಸರ ಹಾಡಿಗೆ (ಪು. 78) ಹೊಂದಿಕೊಂಡಂತೆ, ಪುರಂದರರ ಸುಳಾದಿ-ಅಣುವಾಗಬಲ್ಲ ಮಹತ್ತಾಗಬಲ್ಲ (ಪು. 183) ಇದೆ. ಆರು ಹಿತವರು ಎಂದು ನಂಬಬೇಡ (ಪು. 37) ಎಂಬುದು ತಟ್ಟನೆ ಆರು ಹಿತವರು ನಿನಗೆ ಈ ಮೂವರೊಳಗೆ (ಪು. 163) ಎಂಬ ಹಾಡನ್ನು ನೆನಪಿಸುತ್ತದೆ : ಇದರಲ್ಲಿ ನಾರಿಧಾರುಣಿ ಬಲುಧನದ ಸಿರಿಯೆಂಬ ಮೂರೂ ಹಿತವಲ್ಲವೆಂಬ ಪುರಂದರರ ರಚನೆಯ ಆಶಯಕ್ಕೆ ಸಂವಾದಿಯಾಗಿ ತಂದೆ ತಾಯಿ ಮಗ-ಈ ಮೂರೂ ಜನ, ಆಪತ್ತು ಬಂದಾಗ ರಕ್ಷಿಸುವುದಿರಲಿ, ಸ್ವಯಂ ತಾವೇ ಆಪತ್ತಿಗೆ ಮೂಲ ಕಾರಣರಾದರೆಂಬುದನ್ನು ಕನಕದಾಸರ ಪ್ರತಿಪಾದನೆ ದೃಷ್ಟಾಂತಪೂರ್ವಕ ತೋರಿಸುತ್ತದೆಂಬ ಅಂಶವೂ ಪರಿಭಾವನೀಯ. ಈತನೀಗ ವಾಸುದೇವನು (ಪು. 83) ಎಂಬ ಕನಕದಾಸರ ಬರವಣಿಗೆಗೆ ಪುರಂದರರ 'ಕಣ್ಣಾರೆ ಕಂಡೆನಚ್ಯುತನ' (ಪು. 41) ಎಂಬುದರಲ್ಲಿರುವುದು ಭಾವಸಾಮ್ಯವೆ ಹೊರತು, ಕೀರ್ತನೆಯ ಶಬ್ದ ಶರೀರ ಉದ್ದಕ್ಕೂ ಬೇರೆ ಆಗಿದೆ. ಇದರಂತೆ ನಂಬಬೇಡಿ ಸಿರಿಯು ತನ್ನದೆಂದು (ಪು. 140) ಮತ್ತು ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ ಎಂಬ ಕನಕದಾಸರ ಹಾಡುಗಳಲ್ಲಿರುವ ಆದಿವಾಕ್ಯ ಸಾದೃಶ್ಯ, ಪುರಂದರರ ನಂಬದಿರು ಈ ದೇಹ ನಿತ್ಯವಲ್ಲ' (ಪು. 50) ಎಂಬಲ್ಲಿ ಸುವ್ಯಕ್ತವಾಗಿದ್ದರೂ ಇಲ್ಲಿ ವೈದೃಶ್ಯಗಳೂ ಇವೆ. ಹೀಗೆಯೇ ಮರೆಯದಿರು ಮರುಳು ಮನುಜಾ (ಪು. 39), ಸಾಲದೆ ನಿನ್ನದೊಂದು