ಪುಟ:Kanakadasa darshana Vol 1 Pages 561-1028.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೨೧ ಯಿಡುವ ಗಮನದ ಭರದಿ ಕಿರು ಬೆವ ರಿಡುತ ಬಂದಳು ಸಖಿಯರೊಡನೆ ವಿವಾಹ ಮಂಟಪಕೆ || ಕಾನನದಲ್ಲಿ ಪತಿಯ ಕಾಣದೆ ಹಂಬಲಿಸುವ ದಮಯಂತಿಯ ಚಿತ್ರ ಕವಿಯ ವರ್ಣನಾ ವೈಖರಿಗೆ ಮತ್ತೊಂದು ನಿದರ್ಶನವಾಗುತ್ತದೆ : ನಳಿನಮುಖಿ ಮೈಮುರಿದು ನಿದ್ರೆಯ ತಿಳಿದು ಮೆಲ್ಲನೆ ನೋಡಿದಳು ಎಡ ಬಲವನೀಕ್ಷಿಸಿ ಪತಿಯ ಕಾಣದ ಬಲಿದ ಮೂರ್ಛಯಲಿ | ಮಲಗಿದಳು ಮೈಮರೆದು ನಿಮಿಷಕೆ ತಿಳಿದು ಕಾಣದೆ ಕಾತರದಿ ಹಂ ಬಲಿಸಿ ಹಲುಬಿದಳಲ್ಲಿ ಗಿರಿತರುನಿಕರ ಮಧ್ಯದಲಿ || ಕನಕದಾಸರು ಚಿತ್ರಿಸಿರುವ ನಳನ ವಿಕಾರರೂಪ ವರ್ಣನೆ ಅವರ ವರ್ಣನಾ ವೈಖರಿಗೆ ಮತ್ತೊಂದು ನಿದರ್ಶನ. ಅವರ ಸೋಪಜ್ಞತೆಗೆ ಒಂದು ಸ್ಪಷ್ಟಸಾಕ್ಷಿ : ದೊಡ್ಡ ಹೊಟ್ಟೆಯ ಗೂನು ಬೆನ್ನಿನ ಅಡ್ಡ ಮೋರೆಯ ಗಂಟು ಮೂಗಿನ ದೊಡ್ಡ ಕೈಕಾಲುಗಳ ವುದುರಿದ ರೋಮ ಮೀಸೆಗಳ ಜಿಡ್ಡುದೇಹದ ಗುಜ್ಜಗೊರಲಿನ ಗಿಡುರೂಪಿನ ಹರಕು ಗಡ್ಡದ ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ || ಕನಕದಾಸರು ಯಾರಿಂದ ಎಷ್ಟೇ ಪ್ರಭಾವಿತರಾಗಿದ್ದಾರೆ ಎಂದು ಮಾತಿದ್ದರೂ, ಅವರ ಕಾವ್ಯ ಕುಮಾರವ್ಯಾಸ ಭಾರತದಷ್ಟೇ ಜನಪ್ರಿಯವಾಗಿದೆ. ಜನಮನ್ನಣೆ ಗಳಿಸಿದ ಕಾವ್ಯವಾಗಿದೆ. ಅಲ್ಲಿಯ ವಸ್ತು, ಅದರ ನಿರ್ವಹಣೆ ಹಾಗೂ ಅಲ್ಲಿ ಬರುವ ವರ್ಣನೆಗಳು ಎಂತಹವರನ್ನೂ ಸೆಳೆದುಕೊಳ್ಳಬಲ್ಲ ಮೋಹಕ ಶಕ್ತಿಯನ್ನು ಪಡೆದಿವೆ. ಇದಕ್ಕೆ ಮೇಲಿನ ಕೆಲವು ಪದ್ಯಗಳೇ ಸಾಕ್ಷಿ. ಸಣ್ಣ ಕಥಾವಸ್ತುವೊಂದಕ್ಕೆ ಒಳ್ಳೆಯ ಕಾವ್ಯದ ಚೌಕಟ್ಟನ್ನೂ, ಸ್ಥಾನವನ್ನೂ ಕೊಟ್ಟ ಯಶಸ್ಸು ಕನಕದಾಸರದ್ದು, ಚೌಂಡರಸನ ಕೈಯಲ್ಲಿ ಸೊರಗಿದ್ದ ಮೂಲೆಗುಂಪಾಗಿದ್ದ ಕಾವ್ಯವಸ್ತುವಿಗೆ ಜೀವಕಳೆಯನ್ನಿತ್ತ ಕೀರ್ತಿ ಕನಕದಾಸರಿಗೆ ನಿಸ್ಸಂದೇಹವಾಗಿ ಸಲ್ಲುತ್ತದೆ. ಯಾವುದೇ ಸನ್ನಿವೇಶವನ್ನು ಕಥಾವಸ್ತುವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಶಕ್ತಿ ಅವರದ್ದು. ಶೈಲಿಯಲ್ಲಿ ಸರಳತೆ ಕಂಡು ಬಂದರೂ ಕಾವ್ಯ ಸೌಂದರ್ಯಕ್ಕೆ ಕೊರತೆಯಿಲ್ಲ. ಕುಮಾರವ್ಯಾಸನಂತೆಯೇ ದೇಸೀಯ ಸೊಗಡು ಇಲ್ಲಿಯೂ ಕಂಡು ಬರುತ್ತದೆ. ಎಲ್ಲ ವಿಷಯದಲ್ಲೂ ಕುಮಾರವ್ಯಾಸನನ್ನು ಮೀರಿಸದಿದ್ದರೂ ಅವನೊಂದಿಗೆ ಮರ್ಯಾದೆಯ ಸ್ಥಾನವನ್ನು ಪಡೆಯಬಲ್ಲ ಅರ್ಹತೆ ಪಡೆದ ಕವಿ ಕನಕದಾಸರು, ಕನಕದಾಸರ ಸೃಷ್ಟಿಯೇ ಆದ 'ರಾಮಧಾನ್ಯ'ದ ವಸ್ತುವನ್ನೊಳಗೊಂಡ ಕಾವ್ಯ ಕೂಡ ಷಟ್ಟದಿಯಲ್ಲಿಯೇ ರಚನೆಗೊಂಡಿರುವ ಕೃತಿ. ಇಲ್ಲಿ ಅವರು ಹೊಸ ಬಗೆಯ ಕಾವ್ಯವಸ್ತುವನ್ನು ಸೃಷ್ಟಿಸಿರುವುದಷ್ಟೇ ಅಲ್ಲದೆ ವೈಶಿಷ್ಟ್ಯವನ್ನು ಮೆರೆದಿದ್ದಾರೆ. ವಸ್ತು ಸಾಮಾನ್ಯದ್ದೇ ಆದರೂ, ನಿಶ್ಚಿತ ಉದ್ದೇಶದೊಂದಿಗೆ ಕಾವ್ಯ ಗಂಭೀರವಾಗಿಯೇ ಸಾಗಿದೆ : ಅಲ್ಲಿ ನೆರೆದ ಮಹಾಮುನೀಶ್ವರ ರೆಲ್ಲ ತರಿಸಿದರಖಿಳ ವಸ್ತುವ ಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಂಗಳಲಿ || ಭುಲ್ಲವಿಸಿ ರಚಿಸಿದ ಸುಭಕ್ಷಗ ಳೆಲ್ಲವನು ತುಂಬಿದರು ಹೆಡಗೆಗೆ ಇಲ್ಲಿ ಜೋಡಿಸಿ ಹೊರಿಸಿ ತಂದರು ರಾಯನೋಲಗಕೆ || ಧಾನ್ಯವನ್ನು ಕಥೆಯ ಪ್ರಮುಖ ಪಾತ್ರವಾಗಿಸಿ ಕಾವ್ಯ ರಚಿಸಿದ ಮೊದಲ ಕೃತಿ ಇದೆನ್ನಬಹುದು. ಆ ಕೀರ್ತಿಯೂ ಕನಕದಾಸರಿಗೇ ಸಲ್ಲುವಂತಹುದು. ಹಲವು ಪೌರಾಣಿಕ ಪಾತ್ರಗಳನ್ನು ಬಳಸಿಕೊಂಡು, ಸಾಮಾಜಿಕ ಪ್ರಜ್ಞೆಯನ್ನು ಮೆರೆದಿರುವ 'ರಾಮಧಾನ್ಯ ಚರಿತೆ' ಕನಕದಾಸರ ಕಲ್ಪನೆಯ ಒಂದು ಬೃಹತ್‌ಸೃಷ್ಟಿ

  • * * ಕನಕದಾಸರು ಷಟ್ಟದಿಯಲ್ಲಿ ಕಾವ್ಯ ರಚಿಸಿ ಕುಮಾರವ್ಯಾಸನನ್ನು ನೆನಪಿಗೆ ತರುವಂತೆ, ತಮ್ಮ ಪ್ರತಿಭೆಯನ್ನು ತೋರಿಸಿರುವಂತೆಯೇ 'ಮೋಹನ ತರಂಗಿಣಿ' ಕೃತಿ ರಚನೆಯ ಮೂಲಕ ಸಾಂಗತ್ಯ ಕವಿಗಳ ಸಾಲಿನಲ್ಲಿಯೂ ಗಮನ ಸೆಳೆಯಬಲ್ಲ ಕಾವ್ಯ ಪ್ರತಿಭೆಯನ್ನೂ ತೋರಿದ್ದಾರೆ. ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದ ರತ್ನಾಕರವರ್ಣಿ, ನಂಜುಂಡರ ಕಾವ್ಯಗಳ ಸಾಲಿನಲ್ಲಿ ಕನಕದಾಸರ 'ಮೋಹನ ತರಂಗಿಣಿ'ಯನ್ನು ಇಟ್ಟು ನೋಡುವಾಗ ವಸ್ತುವಿನ ದೃಷ್ಟಿಯಿಂದ 'ಭರತೇಶ ವೈಭವ' ಹಾಗೂ 'ಮೋಹನ ತರಂಗಿಣಿ' ಒಂದರ್ಥದಲ್ಲಿ ಹತ್ತಿರವಾಗಬಲ್ಲ ಕೃತಿಗಳಾದರೆ, 'ಕುಮಾರ ರಾಮನ ಸಾಂಗತ್ಯ' ಮತ್ತೊಂದು ದೃಷ್ಟಿಯಿಂದ ಇವೆರಡಕ್ಕೂ ಹತ್ತಿರವಾಗಿ ನಿಲ್ಲಬಲ್ಲ ಕೃತಿ.

ಕನಕದಾಸರ ಮೋಹನ ತರಂಗಿಣಿ ಪ್ರಧಾನವಾಗಿ ಶೃಂಗಾರ ಕಾವ್ಯ.