ಪುಟ:Kanakadasa darshana Vol 1 Pages 561-1028.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೨೭ ಮೂಲಕ ಸಾಧಿಸಿ ಅದನ್ನೊಂದು ಶೃಂಗಾರ ಕಾವ್ಯವಾಗಿಸುವುದರ ಮೂಲಕ ಪ್ರಶಂಸೆಗೆ ಪಾತ್ರನಾದರೆ, ಉಳಿದ ಮೂವರು ಪ್ರಚಲಿತ ವಸ್ತುವನ್ನೇ ತೆಗೆದುಕೊಂಡು ಅದಕ್ಕೆ ತಮ್ಮ ಪ್ರತಿಭೆಯ ಚಿನ್ನದ ಮೆರಗನ್ನು ಕೊಡುವುದರ ಮೂಲಕ ಜನಾದರಣೀಯವಾದವರು. ಜನಪ್ರಿಯತೆಯ ದೃಷ್ಟಿಯಿಂದಲೂ ಈ ನಾಲ್ವರೂ ಜೊತೆ ಜೊತೆಯಲ್ಲಿಯೇ ನಿಲ್ಲುವಂತಹವರು. ಕಾವ್ಯದ ಸಂದರ್ಭಗಳಲ್ಲಿ ಹಾಗೂ ಕಾವ್ಯಗುಣದ ಸಂದರ್ಭಗಳಲ್ಲಿ ಒಬ್ಬೊಬ್ಬರು ಒಂದು ರೀತಿಯ ಮೇಲುಗೈ ಸಾಧಿಸಿದವರು. ಒಬ್ಬರು ಒಂದರಲ್ಲಿ ಹೆಚ್ಚು ಮಿಂಚುವಂತೆ ಕಂಡುಬಂದರೆ ಮತ್ತೊಬ್ಬರು ಮತ್ತೊಂದರಲ್ಲಿ ಅತಿಶಯವಾಗಿ ಆಕರ್ಷಿಸುವಂತಹವರು. ಒಂದರಲ್ಲಿ ತಲೆದೋರಬಹುದಾದ ಕೊರತೆಯನ್ನು ಮತ್ತೊಂದರಲ್ಲಿ ತುಂಬಿಕೊಡುವ ಅಸಾಧಾರಣ ಪ್ರತಿಭಾಶಕ್ತಿಯುಳ್ಳ ಕವಿಗಳಿವರು. ಕನಕದಾಸರಲ್ಲಿ ಆ ಒಂದು ಶಕ್ತಿ ಹೆಚ್ಚಾಗಿಯೇ ಕಂಡು ಬರುತ್ತದೆ. ಕಾರಣ : ಕನಕದಾಸರ ವ್ಯಕ್ತಿತ್ವ ವಿಶಿಷ್ಟಬಗೆಯದು. ಅವರು ಬೆಳೆದು ಬಂದ ಹಿನ್ನೆಲೆ ಅವರ ಕಾವ್ಯಕ್ಕೆ ಒಂದು ಹೊಸ ಹಾಗೂ ವಿಶಿಷ್ಟ ಮೆರಗನ್ನು ತಂದಿತ್ತಿದೆ. ಅವರ ಅನುಭವ, ಭಾಷಾ ಬಳಕೆ, ಸನ್ನಿವೇಶ ನಿರ್ಮಾಣ, ನುಡಿಗಟ್ಟುಗಳ ಹಾಗೂ ನಾಣ್ಣುಡಿಗಳ ಬಳಕೆ ಇವುಗಳಿಂದಾಗಿ ಕೆಲವೊಂದು ರಚನೆಗಳಲ್ಲಿ ಅವರ ಕಾವ್ಯದ ವಿಶಿಷ್ಟತೆ ಎದ್ದು ಕಾಣುತ್ತದೆ. ಹಾಗೆಯೇ ಕೆಲವೆಡೆ ಪ್ರೌಢತೆಯನ್ನು ತೋರಿದ್ದರೂ, ಅದು ಎಲ್ಲಿಯೂ ಕಡಲೆಯ ಮಧ್ಯದ ಕಲ್ಲಾಗಿಲ್ಲ, ಬೆಲ್ಲವಾಗಿದೆ. ಕನಕದಾಸರ ಕೀರ್ತನೆಗಳು ಸಂಖ್ಯೆಯ ದೃಷ್ಟಿಯಿಂದ ಹೆಚ್ಚಿಲ್ಲ. ಆದರೆ ಮೌಲ್ಯದ ದೃಷ್ಟಿಯಿಂದ ಹೆಚ್ಚಿನವು. ಕನಕದಾಸರ ಮನೋಧರ್ಮವನ್ನು ಪ್ರಕಟಗೊಳಿಸುವಲ್ಲಿ ಅವು ಸಫಲಗೊಂಡಿವೆ. ಕಂಡದ್ದನ್ನು ಕಂಡಂತೆ ಹೇಳುವ ಅವರ ಗುಣದಿಂದಾಗಿ, ಅವರ ಕೀರ್ತನೆಗಳಲ್ಲಿ ಕಂಡುಬರುವ ಮೊನಚು ಉಳಿದ ಕೀರ್ತನಕಾರರಲ್ಲಿ ಕಾಣಲಾರದಂತಹುದು. 'ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ' ಎಂಬ ಕೀರ್ತನೆಯಲ್ಲಿನ ಅವರ ಬಿಚ್ಚುನುಡಿ ಉಳಿದವರಲ್ಲಿ ಅಪರೂಪ. “ಧರ್ಮವಿಲ್ಲದ ಅರಸು ಮುರಿದ ಕಾಲಿನ ಗೊರಸು, ನಿರ್ಮಲಿಲ್ಲದ ಮನಸು ತಾ ಕೊಳಚೆ ಹೋಲಸು” ಮುಂತಾದ ಕೀರ್ತನೆಗಳಲ್ಲಿ ಕಂಡುಬರುವ ಮನೋಧರ್ಮ ವಿಶಿಷ್ಟವಾದುದು. “ಕರುಣ ಬಂದರೆ ಕಾಯೋ ಮರಣ ಬಂದರೆ ಒಯ್ಯೋ” ಎಂಬ ಜನಪದರ ದಿಟ್ಟ ನುಡಿಗಳಂತೆಯೇ ಗಟ್ಟಿಯಾದುದು, ಬಿರುಸಾದುದು. ಈ ದೃಷ್ಟಿಯಿಂದ ಉಳಿದ ಕೀರ್ತನಕಾರರಿಗಿಂತ ಇವರದ್ದು ಭಿನ್ನ ಶೈಲಿ. ಅಲ್ಲಿಯ ಭಾಷೆಯ ಸೊಗಡೇ ಬೇರೆ. ಗ್ರಾಮೀಣ ಪರಿಸರದಿಂದ, ಆ ನೆಲದ-ಜಲದ ಒಡನಾಟದಿಂದ ಬಂದ ಈತನಲ್ಲಿ ಧಾರಾಳವಾದ ಜಾನಪದ ಸೊಗಡಿದೆ. ಅದು ಅವರ ಅನುಭವದ ಅಭಿವ್ಯಕ್ತಿಗೆ ವಿಶಿಷ್ಟತೆಯನ್ನು ತಂದಿತ್ತಿದೆ. ಅಷ್ಟೇ ಅಲ್ಲ, ಸಮಾಜದ ಕೆಳವರ್ಗದಿಂದ ಬಂದ ಈ ಕವಿಗೆ ಎಲ್ಲಾ ದೇವರುಗಳೂ ಬೇಕು. ಸಾಮಾನ್ಯವಾಗಿ ಗ್ರಾಮೀಣ ಜನರಲ್ಲಿ ಕಂಡುಬರುವ ಸರ್ವಧರ್ಮ ಸಮನ್ವಯ ದೃಷ್ಟಿ-ಧೋರಣೆಗಳು ಈ ಕವಿಯಲ್ಲಿಯೂ ಅಷ್ಟೇ ಸಹಜವಾಗಿ ಕಂಡುಬರುತ್ತವೆ. ಕನಕದಾಸರಿಗಿದ್ದಂತೆ ಉಳಿದ ಕವಿಗಳಿಗಾಗಲೀ ಅದರಲ್ಲಿಯೂ ಹರಿದಾಸರಿಗೆ ಈ ಒಂದು ಹಿನ್ನೆಲೆ ಇರಲಿಲ್ಲವೆಂಬುದು ಗಮನಾರ್ಹ. ಆ ಕಾರಣದಿಂದಾಗಿಯೇ ಕನಕದಾಸರ ರಚನೆಗಳು ಅವರ ಸಾಹಿತ್ಯದ ಮಧ್ಯೆ ಎದ್ದು ಕಾಣುತ್ತದೆ : ಡೋಲಿನ ಮೇಲ್ಕಯ್ಯ ಭರಮಪ್ಪ ಹಾಕ್ಯಾನು ತಾಳವ ಶಿವನಪ್ಪ ತಟ್ಟಾನ್ಮಾ ಒಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನ್ಮಾ ಚಲುವ ಕನಕಪ್ಪ ಕುಣಿದಾನ್ಮಾ || ಪೂರ್ಣ ಜನಪದ ಧಾಟಿಯ ಈ ಕೀರ್ತನೆಯಲ್ಲಿ ಸರ್ವಧರ್ಮದ ಸಮನ್ವಯನ್ನೂ ಸಾಧಿಸಿರುವುದು ಕನಕದಾಸರ ವಿಶಿಷ್ಟ ಪ್ರತಿಭೆಯೇ ಆಗಿದೆ. ಹಾಗೆಯೇ, “ಏನೆಂದಳೇನೆಂದಳೋ, ನಿನ್ನೊಳು ಸೀತೆ ಹನುಮಯ್ಯ” ಎಂಬ ಪಲ್ಲವಿ ಕೋಲಾಟದ ಹಾಡಿನ ಪಲ್ಲವಿಯನ್ನು ಕೂಡಲೇ ನೆನಪಿಸುತ್ತದೆ. “ಊರಿಗೆ ಬಂದರೆ ದಾಸಯ್ಯ” ಎಂಬ ಹಾಗೂ ಪೂರ್ಣವಾಗಿ ಕೋಲಾಟದ ಹಾಡನ್ನೇ ಹೋಲುವ 6 ಕೋಲು ಕೊಳಲು ಕೈಲಿ ದಾಸಯ್ಯ ನೀ ಕಲ್ಲಿಗೆ ವರವಿತ್ತೆ ದಾಸಯ್ಯ ಮಲ್ಲನ ಮರ್ದಿಸಿ ಮಾವನ ಮಡುಹಿದ ನೀಲಮೇಘಶ್ಯಾಮ ದಾಸಯ್ಯ || ಕೀರ್ತನೆಗಳನ್ನು ಗಮನಿಸಿದಾಗ ಕನಕದಾಸರ ಸಾಚಾ ಜಾನಪದ ಶೈಲಿ ವ್ಯಕ್ತವಾಗುತ್ತದೆ. ಹರಿದಾಸರುಗಳಲ್ಲಿ ಭಕ್ತಿಭಾವಕ್ಕೆ ಸಂಬಂಧಿಸಿದಂತೆ, ಸಮಾಜೋದ್ದಾರಕ್ಕೆ ಸಂಬಂಧಿಸಿದಂತೆ ಅವರ ರಚನೆಗಳಲ್ಲಿ ಸಮಾನತೆ ವ್ಯಕ್ತವಾದರೂ, ಮುಖ್ಯವಾಗಿ ಅಭಿವ್ಯಕ್ತಿಯಲ್ಲಿ ಕನಕದಾಸರು ಅವರುಗಳಿಂದ ಭಿನ್ನವಾಗಿಯೇ ನಿಲ್ಲುತ್ತಾರೆ. ಗ್ರಾಮೀಣ ಸೊಗಡನ್ನು ಸೂಸುವುದರ ಮೂಲಕ ವಿಶಿಷ್ಟತೆಯನ್ನು ತೋರುತ್ತಾರೆ.