ಪುಟ:Kanakadasa darshana Vol 1 Pages 561-1028.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೨೯ ಆದರೆ ವಚನಕಾರರ ಸಾಲಿನಲ್ಲಿ ಗಮನಿಸುವಾಗ, ಕನಕದಾಸರು ಹೆಚ್ಚು ಕಡಿಮೆ ಸಮಸಮವಾಗಿಯೇ ನಿಲ್ಲಬಲ್ಲರು. ಭಕ್ತಿಮಾರ್ಗದ ದೃಷ್ಟಿಯಿಂದಲಾಗಲಿ, ಕಾವ್ಯಾಭಿವ್ಯಕ್ತಿಯ ಅಥವಾ ಕಾವ್ಯಮೌಲ್ಯದ ದೃಷ್ಟಿಯಿಂದಲಾಗಲಿ ಪರಸ್ಪರ ಹೆಚ್ಚು ಹೋಲುತ್ತಾರೆ. ಏಕೆಂದರೆ ಕನಕದಾಸರಂತೆಯೇ ವಚನಕಾರರೂ ಸಮಾಜದ ವಿವಿಧ ಕ್ಷೇತ್ರದಿಂದ ಬಂದವರು. ಬದುಕಿನಲ್ಲಿ ಹೆಚ್ಚು ಹೋರಾಟ ನಡೆಸಿದವರು. ವ್ಯವಸ್ಥೆಯೊಂದರ ವಿರುದ್ದ ಹೋರಾಟ ನಡೆಸುತ್ತಾ ತಮ್ಮ ಅಸ್ತಿತ್ವಕ್ಕಾಗಿ ಧ್ವನಿಯೆತ್ತಿದವರು. ಜೊತೆಜೊತೆಯಲ್ಲಿಯೇ ಭಕ್ತಿಮಾರ್ಗದ ಸುಗಮದಾರಿಯನ್ನು ತೋರಿಸಿಕೊಟ್ಟವರು. ಒಂದು ಕಡೆ ಬಸವಣ್ಣನವರು ನಿಮ್ಮ ಶರಣರ ಮನೆಯ ಮಗ ನಾನಯ್ಯ' ಎಂದು ಹೇಳಿಕೊಂಡಿರುವಂತೆಯೇ ಕನಕದಾಸರು ಒಂದೆಡೆ, “ದಾಸದಾಸರ ಮನೆಯ ದಾಸಿಯ ಮಗ ನಾನು” ಎಂದು ತಮ್ಮ ದಾಸತ್ವದ ಬಗೆಗೆ ಹೇಳಿಕೊಳ್ಳುತ್ತಾರೆ. “ಆನು ಭಕ್ತನಲ್ಲಯ್ಯ ಆನು ವೇಷಧಾರಿಯಯಾ” ಎಂಬಂತೆಯೇ ಕನಕದಾಸರಲ್ಲಿ ಬರುವ: “ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ” ಎಂಬ ವಾಸ್ತವಿಕ ಸತ್ಯವನ್ನು ಬಯಲು ಮಾಡುತ್ತಾರೆ : ಹಲವು ಮಣಿಗಳ ಕಟ್ಟಿ ಕುಣಿಕುಣಿದಾಡಿ ಉಂಡು, ತಾಂಬೂಲಗೊಂಡು, ಹೋಹುದಲ್ಲಾ ! ಹಲವು ಪರಿಯಲಿ ವಿಭೂತಿಯ ಹೂಸಿ ಗುಣಾಡಂಬರದ ನಡುವೆ ನಲಿನಲಿದಾಡಿ ತನು-ಮನ-ಧನವ ಸಮರ್ಪಿಸದವರ ಕೂಡಲ ಸಂಗಮದೇವರೆಂತೊಲಿವನಯ್ಯಾ ? ಎಂದು ಬಸವಣ್ಣನವರು ಪ್ರಶ್ನಿಸಿದರೆ, ಕನಕದಾಸರು : ಪಟ್ಟೆನಾಮವ ಬಳಿದು, ಪಾತ್ರೆ ಕೈಲಿ ಪಿಡಿದು ಗುಟ್ಟಿನಲಿ ರಹಸ್ಯದ ಗುರುತರಿಯದೆ ಕೆಟ್ಟ ಕೂಗನು ಕೂಗಿ ಬೊಗಳಿ ಬಾಯಾರುವಂಥ ಹೊಟ್ಟೆಗುಡ ಮೃಗಗಳೆಲ್ಲ ಶ್ರೀವೈಷ್ಣವರೆ ಕೃಷ್ಣ? ಇವರಿಬ್ಬರ ಧೋರಣೆ ಒಂದೇ ಆದರೂ, ಭಾಷಾ ಬಳಕೆಯಲ್ಲಿ ಕನಕದಾಸರು ಇನ್ನೂ ಮುಂದೆ ಹೋಗುತ್ತಾರೆ. ಅವರ ಭಾಷೆಯ ಮೊನಚು ನೇರವಾಗಿ ತಿವಿದು ಎಚ್ಚರಿಸುವಂತಹುದು. ಕನಕದಾಸರು ಬಂದ ನೆಲೆ ಸೆಲೆಯ ಕಾರಣದಿಂದಾಗಿ ಅವರ ಸಾಹಿತ್ಯದ ಸೊಗಸೇ ವಿಶಿಷ್ಟವಾಗಿ ಕಂಡುಬರುತ್ತದೆ. ಅದು ಅವರ ಸಾಹಿತ್ಯದ ಮೌಲ್ಯವನ್ನ ಹೆಚ್ಚಿಸಿದೆ : ನಾವು ಕುರುಬರು ನಮ್ಮ ದೇವರೊ ಬೀರಯ್ಯ ಕಾವ ನಮ್ಮಜ್ಜ ನರಕುರಿಯ ಹಿಂಡುಗಳ || ಅಷ್ಟ ಮದ ಮತ್ಸರಗಳೆಂತೆಂಬ ಟಗರುಗಳಿ ದೃಷ್ಟಿ ಜೀವಾತ್ಮನೆಂಬೊ ಆಡು ಸೃಷ್ಟಿ ಪ್ರಸಿದ್ದವೆಂತೆಂಬುವಾ ಹೋತಗಳು ಕಟ್ಟಿ ಕೋಲಿನಲಿ ಇರುತಿರುವ ನಮ್ಮಜ್ಞ || ಈ ಬಗೆಯ ರಚನೆ ಕನಕದಾಸರಂತಹ ಕವಿಗೆ ಮಾತ್ರ ಸಾಧ್ಯವಾಗುವಂತಹುದು, ಅದನ್ನು ಬಿಟ್ಟರೆ ಅಂತಹ ಪರಿಸರದಿಂದ ಬಂದಂತಹವರಿಗೆ ಮಾತ್ರ ಸಾಧ್ಯವಾಗಬಹುದಾದಂತಹುದು. ದಾಸಸಾಹಿತ್ಯದಲ್ಲಿ ಕನಕದಾಸರೊಬ್ಬರನ್ನು ಬಿಟ್ಟರೆ, ವಚನ ಸಾಹಿತ್ಯದ ಹಲವರಲ್ಲಿ ಇಂತಹ ವಿಶಿಷ್ಟತೆ ಸ್ವಲ್ಪಮಟ್ಟಿಗೆ ಕಂಡುಬರುತ್ತದೆ. ದಾಸರಾಗಲಿ, ವಚನಕಾರರಾಗಲಿ ಬರಿಯ ಒಣ ತತ್ವವನ್ನಷ್ಟೇ ಬೋಧಿಸ ಹೊರಟವರಲ್ಲ. ನಡೆ-ನುಡಿಯ ಮಹತ್ವವನ್ನೂ ಕುರಿತು ಸಾರಿದವರು. ಇವುಗಳ ಹೊರತು ಮುಕ್ತಿ ಸಾಧ್ಯವಿಲ್ಲವೆಂಬುದನ್ನು ತಿಳಿಯಹೇಳಿದವರು. ಇವರಿಬ್ಬರಲ್ಲಿ ಹೇಳುವ ರೀತಿಯಲ್ಲಿ ವ್ಯತ್ಯಾಸ ಕಂಡುಬರುವುದೇ ಹೊರತು, ಉದ್ದೇಶದಲ್ಲಲ್ಲ: ಏನು ಬರುವುದೋ ಸಂಗ | ಡೇನು ಬರುವುದೋ ದಾನ ಧರ್ಮ ಮಾಡಿ ಬಹು ನಿ | ಧಾನಿ ಎನಿಸಿಕೊಳ್ಳು ಮನುಜ || ಹೆಂಡಿರಿಲ್ಲ ಮಕ್ಕಳಿಲ್ಲ ಮಂಡೆ ತುಂಬ ಬಂಧು ಬಳಗ ಕಂಡು ಬಿಡಿಸಿಕೊಂಬರಾರೊ ದಿಂಡಿಯಮನ ದೂತರೆಳೆಯ ಬಂಡಿ ತುಂಬ ಇದ್ದ ಧನವು ಹಿಂದೆ ಉಳಿವುದಲ್ಲೊ ನಿನ್ನ ಪೊಂದಿಕೊಂಡು ಬರುವ ವಸ್ತು ಕೀರ್ತಿ ಅಪಕೀರ್ತಿ ಎರಡೆ || ಎಂದು ಕನಕದಾಸರು ಹೇಳಿದರೆ, ಬಸವಣ್ಣನವರಲ್ಲಿ ಅದು ; ಸಂಸಾರವೆಂಬುದೊಂದು ಗಾಳಿಯ ಸೊಡರು, ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ | ಇದನೆಚ್ಚಿ ಕೆಡಬೇಡ-ಸಿರಿಯೆಂಬುದ || ಮಣಿಯದೆ ಪೂಜಿಸು ನಮ್ಮ ಕೂಡಲ ಸಂಗಮದೇವ || ಪಂಚೇಂದ್ರಿಯಗಳು ಒಂದು ರೀತಿಯಲ್ಲಿ ಮಾನವನ ವೈರಿಗಳೂ ಹೌದು. ಅವು ಆತನನ್ನು ತಪ್ಪುದಾರಿಗೆ ಎಳೆಯುವ ಸಾಧನಗಳು. ಅವುಗಳನ್ನು ನಿಯಂತ್ರಿಸಲು ಆತ್ಮ ಸಂಯಮ ಬೇಕಾಗುತ್ತದೆ. ಅದರ ಕೊರತೆಯಿಂದ ಕೆಟ್ಟವರೇ