ಪುಟ:Kanakadasa darshana Vol 1 Pages 561-1028.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಪದಗಳಲ್ಲಿ ಸಂಗೀತ - ಪ್ರೊ: ಸಾ. ಕೃ. ರಾಮಚಂದ್ರರಾವ್ ಕನಕದಾಸರ ರಚನೆಗಳಲ್ಲಿ ಬರುವ ಸಂಗೀತ ವಿವರಗಳನ್ನು ಪರಿಶೀಲಿಸುವಾಗ ಒಂದೆರಡು ವಿಚಾರಗಳನ್ನು ಮರೆಯಬಾರದು. ಕನಕದಾಸರಿದ್ದ ಕಾಲ ಯಾವುದು, ಆಗ ಬಳಕೆಯಲ್ಲಿದ್ದ ಸಂಗೀತದ ಸ್ವರೂಪವೇನು ಎಂಬುದನ್ನು ಗಮನಿಸಲೇಬೇಕಲ್ಲವೆ ? ಈಗಿನ ಹಲವಾರು ವಿದ್ವಾಂಸರು ಸಭೆಗಳಲ್ಲಿ ಕನಕದಾಸರ ಕೃತಿಗಳನ್ನು ವಿನಿಕೆ ಮಾಡುವಾಗ ಇದನ್ನು ಮರೆಯುತ್ತಾರೆ. ಅದಕ್ಕೆ ಅವರು ನೀಡುವ ಸಮಾಧಾನಗಳೂ ಉಂಟೆ ಆಗಿನ ಸಂಗೀತ ಈಗಿನ ಜನರಿಗೆ ರುಚಿಸುವುದಿಲ್ಲ ಎಂಬುದೊಂದು, ದಾಸರ ಹಾಡುಗಳನ್ನು ಹೇಗೆ ಹಾಡಿದರೂ ಆಯಿತು, ಯಾವ ಹಾಡಿಗೆ ಯಾವ ರಾಗವನ್ನಾದರೂ ತಾಳವನ್ನಾದರೂ ಹೊಂದಿಸಲು ಬರುತ್ತದೆ ಎಂಬುದಿನ್ನೊಂದು. ಇವೆರಡು ಸಮಾಧಾನಗಳೂ ಸರಿಯಲ್ಲ. ಆಗಿನ ಸಂಗೀತ ಹೇಗಿದ್ದಿತು ಎಂಬುದನ್ನು ಅರಿತುಕೊಂಡ ಮೇಲಲ್ಲವೆ ಅದು ಈಗಿನವರಿಗೆ ಹಿಡಿಸುವುದೋ ಇಲ್ಲವೋ ಎಂದು ಹೇಳಬರುವುದು ? ಕನಕದಾಸರು ಪದಗಳನ್ನು ಹಾಡುವಾಗ ಸಂಗೀತದ ಸ್ಥಿತಿ ಏನಾಗಿದ್ದಿತೆಂದು ತಿಳಿದುಕೊಳ್ಳುವ ಕಾತರ, ತಾಳ್ಮೆ, ಸಾಮರ್ಥ್ಯ, ನಿಷ್ಠೆ ಬಹುಮಂದಿಗೆ ಇರಲಾರದು. ಮತ್ತೆ, ಹಳೆಯದೆಲ್ಲ ಹಳಸಿದೆ ಎಂದು ಹೇಳಬಹುದೇ ? ಜನರ ನಡುವೆ ಕಾಲಕಾಲಕ್ಕೆ ಬದಲಾಯಿಸುತ್ತ ಇರುವ ಅಭಿರುಚಿಯೇನೋ ಇದೆ ; ಅದಕ್ಕೆ ಹಲವಾರು ಕಾರಣಗಳು. ಇವನ್ನು ನಾವು ಇಂಗ್ಲೀಷಿನಲ್ಲಿ Fad, Fashion, craze, Whimಎಂದೆಲ್ಲ ಹೇಳಬಹುದು. ತಾತ್ಕಾಲಿಕವಾದ ಬೆಲೆ ಇಂಥದಕ್ಕೆ. ಆದರೆ ಸಂಪ್ರದಾಯದ ಕಲೆಯಲ್ಲಿ ರುಚಿ ಸರ್ವಕಾಲಿಕವಾದದ್ದು. ಅದನ್ನು Taste ಅಥವಾ Relish ಎನ್ನುತ್ತೇವೆ. ಕಾಲ ಸಾಗಿದಂತೆ ಅದರ ಆಕರ್ಷಣೆಯಾಗಲಿ, ಪ್ರಸಕ್ತಿಯಾಗಲಿ ಮಾರ್ಪಡುವುದಿಲ್ಲ. ದಾಸಸಾಹಿತ್ಯದ ಹಿನ್ನೆಲೆಯಲ್ಲಿದ್ದ ಸಂಗೀತ ನಮಗೆ ಇಂದು ಅಪ್ರಸ್ತುತ ಎನ್ನಲಾಗದು.