ಪುಟ:Kanakadasa darshana Vol 1 Pages 561-1028.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭ ೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೨೭ ಶೃಂಗಾರವೆನ್ನಬಹುದಾದ ಪೌರಾಣಿಕ ವಸ್ತುಗಳನ್ನು ಆಯ್ದುಕೊಂಡು ಕನಕದಾಸರು, 'ಮೋಹನ ತರಂಗಿಣಿ', 'ನಳಚರಿತ್ರೆ' ಕೃತಿಗಳನ್ನು ರಚಿಸಿದ್ದಾರೆ. ದೈವತ್ವದ ಬಲಾಡ್ಯತೆಯನ್ನು ಸಾದರಪಡಿಸುವ ಕಾರಣಕ್ಕಾಗಿಯೇ ಹುಟ್ಟಿಕೊಂಡ ಈ ಕೃತಿಗಳು ಕಣ್ಣುಪಟ್ಟಿ ಕಟ್ಟಿಕೊಂಡ ಕುದುರೆಯಂತೆ ನೇರವಾಗಿ ಮುಕ್ತಾಯದ ಕಡೆಗೆ ಧಾವಿಸುತ್ತವೆ. ಕವಿ ಎಲ್ಲಿಯೂ ಸಾಮಾಜಿಕ ಚಿಂತನೆಯ ಚಾಳೀಸು ಇಲ್ಲಿ ಧರಿಸುವುದಿಲ್ಲವಾದ್ದರಿಂದ ವಿಡಂಬನೆ ಕ್ವಚಿತ್ತಾಗಿ ಕಾಣಿಸಿಕೊಂಡು, ಕಾಣಿಸಿಕೊಂಡಷ್ಟೇ ವೇಗದಲ್ಲಿ ಮರೆಯಾಗಿ ಬಿಡುತ್ತದೆ. ಆದರೂ ಈ ಕೃತಿಗಳೂ ಶುಷ್ಕ ಸರಕುಗಳೆನಿಸದೆ ಆತ್ಮೀಯತೆಯ ಆದ್ರ್ರತೆಯಲ್ಲಿ ಅದ್ದಿದ ರಸಪಾಕವಾಗಿ ಮಿಡಿಯುತ್ತವೆ. “ಪರರ ದುಃಖವ ಪರಿಹರಿಸಿ ಮಿಗೆ ಪರರಿಗುಪಕಾರಾರ್ಥವೆಸಗಲು ಪರಮ ಪುಣ್ಯವದು” (ನಚ ೨-೪೯) ಎಂಬ ಮಾತಿನಲ್ಲಿ ಭಕ್ತಿ ಸಹಜ ಸ್ಥಿತಿಯಲ್ಲಿ ನಮ್ಮ ನಡೆ ನುಡಿಯಲ್ಲಿ ಉದ್ಭವವಾಗಬೇಕು. ಇಲ್ಲದಿದ್ದಲ್ಲಿ ಅದು ದೊಂಬರಾಟದ ವೇಷದಂತಾಗುತ್ತದೆ ಎಂದು ಭಕ್ತಿಯ ಜನನವನ್ನು ಕನಕದಾಸರು ಬೆರಳುಮಾಡಿ ತೋರಿಸಿದ್ದಾರೆ. “ಇಲ್ಲಿ ಉಪದೇಶವಿಲ್ಲ, ಆದರೆ ಉಪದೇಶದ ಎಲ್ಲ ಗುಣವನ್ನು ಸಾಂದ್ರೀಕರಿಸಿಕೊಂಡಿದೆ. ಆದರೆ ದಮಯಂತಿಯ ದುಃಸ್ಥಿತಿಗೆ ಕಾರಣನಾದ ಕಲಿಯನ್ನು 'ಕುಟಿಲಾತ್ಮಕನ ನಿಸ್ವಾರ ಹೃದಯನನು' (ನಚ ೪-೩) ಎಂದು ಛೇಡಿಸುವಲ್ಲಾಗಲಿ, ಕಾನನದಲ್ಲಿ ಕಾಣಸಿಕ್ಕ ಆಕೆಯನ್ನು ದೇವತೆಯೋ ಮಾಯಾರೂಪಿಯೋ ಎಂದು ಮೊದಲಾಗಿ ತಿಳಿದು ಬೆದರಿ ಓಡಿದ ವೈಶ್ಯರನ್ನು ಕುರಿತು “ಹೇಡಿ” (ನಚ ೫-೪೧)ಗಳೆಂದು ಜರಿಯುವುದಾಗಲಿ ಪರಿಣಾಮಕಾರಿಯಾದ ವಿಡಂಬನೆಗಳೆನಿಸವು. ಏಕೆಂದರೆ ಕಾವ್ಯದಲ್ಲಿ ವಿಡಂಬನಗಳು ಕರಗದೆ ಹೇಳಿಕೆ ರೂಪದಲ್ಲೇ ಉಳಿದುಬಿಟ್ಟಿವೆ. ಇದೇ ಅಂಶವನ್ನು “ ಮೋಹನ ತರಂಗಿಣಿ' ಕೃತಿಯಲ್ಲಿ ಬರುವ ವಿಡ೦ಬನೆ ಗಳಿಗೆ ಅನ್ವಯಿಸಬಹುದಾದರೂ 'ನಳಚರಿತ್ರೆ'ಗಿಂತ ಭಿನ್ನವಾಗಿ ಇಲ್ಲಿ ದೈವವನ್ನು ವಿಡಂಬಿಸುವ ಪೌರಾಣಿಕ ಪ್ರತಿಮೆಗಳು ಅಲ್ಲಲ್ಲಿ ಸುಳಿಯುವುದನ್ನು ಗಮನಿಸಬಹುದು. ತನ್ನರಮನೆಗೆ ಬಂದ ರತಿಯನ್ನು ಕಂಡು ಮೋಹಿತನಾದ ಚಾಣಾಕ್ಷ ಶಂಬರ ತನ್ನ ಪತ್ನಿಯ ಮೂಲಕ ಆಕೆಯನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದಾಗ ಪತ್ನಿ ತನ್ನ ಗಂಡನಿಗೆ ಹೆಣ್ಣಿನ ಸ್ತ್ರೀತ್ವದ ಮಹತ್ತಿನ ಬಗೆಗೆ ಪರಿಚಯಿಸಿಕೊಡುವ ಸಂದರ್ಭದಲ್ಲಿ ಬಳಕೆಯಾಗಿರುವ ಪದ್ಯ ಕನಕದಾಸರ ವಿಡಂಬನಶಕ್ತಿಗೆ ದಿವ್ಯನಿದರ್ಶನವಾಗಿದೆ : ಮಂಡಲದೊಳು ಹದಿಬದೆಯ ಸಂಗವ ಮಾಡಿ ಭಂಡ ತಾ ವಜ್ರಯ ನೋಡು ಗಂಡನುಳ್ಳವಳಾಸೆ ಬೇಡೆಂದು ನೆರೆ ಬೇಡಿ ಕೊಂಡೆಂಗಿದಳು ವಲ್ಲಭಗೆ || (ಮೋ.ತ. ೨೫) ಇಲ್ಲಿ ಅಹಲೈಯನ್ನು ಮೋಹಿಸಿ ಭಂಡನಾದ ಇಂದ್ರನ ಕಥೆಯನ್ನು ಪ್ರತಿಮಿಸುವ ಮೂಲಕ ಪರಸ್ತ್ರೀ ಮೋಹಕ್ಕೊಳಗಾದವರ ಗತಿಯನ್ನು ತೋರಿಸಿ, ಅಂಥ ಮಂದಿಯನ್ನು ಎಚ್ಚರಿಸುವ ಧ್ವನಿ ಇದೆ. ಎಂಥ ಸನ್ನಿವೇಶಗಳನ್ನು ತರುವಾಗಲೂ ಉದ್ವೇಗ ವಶರಾಗದೆ ದೃಷ್ಟಾಂತಗಳನ್ನು ತಣ್ಣನೆ ಮುಂದಿಡುವ ಪರಿ ಹೃದ್ಯವಾಗಿದೆ. ಈಗಾಗಲೆ ಸ್ಪಷ್ಟಪಡಿಸಿರುವಂತೆ ಕನಕದಾಸರದು ಕವಿಹೃದಯ; ರವಿ ಕಾಣದ್ದನ್ನು ಕವಿ ಕಾಣುವ ಪ್ರಯತ್ನವಿಲ್ಲಿಯದು. ಅದರಲ್ಲೂ ಸೂಕ್ಷ್ಮ ಸಂವೇದನಾಶೀಲರಾದ ಕನಕದಾಸರು ತೀಕ್ಷ ಅವಲೋಕನದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಬದುಕನ್ನು ಬಗಿದು ಶೋಧಿಸುವ, ಸತ್ಯದ ನೆಲೆಯನ್ನು ಹುಡುಕುವ ದಾರ್ಷವನ್ನು, ಸಮಕಾಲೀನ ಪ್ರಜ್ಞೆಯನ್ನು ತಮ್ಮ ಕೀರ್ತನೆಗಳಲ್ಲಿ ಪ್ರಚುರಪಡಿಸಿದ್ದಾರೆ. ಕನಕದಾಸರ ಕೀರ್ತನೆಗಳ ಮೂಲ ಸೆಲೆ ಭಕ್ತಿ. ಆದರೂ ದೈವಲೀಲಾವರ್ಣನೆ, ಆತ್ಮನಿವೇದನೆ ಹಾಗೂ ಸಾಮಾಜಿಕ ವಿಡಂಬನೆಯ ತ್ರಿವೇಣಿಸಂಗಮ ಅವರ ಕೀರ್ತನೆಗಳಲ್ಲಿ ಮಡುಗಟ್ಟಿದೆ. ದಾಸರೆಲ್ಲರ ಆಶಯವು ಇದೇ ಆಗಿದೆ. ಹೀಗಾಗಿ ಭಕ್ತಿ ಮತ್ತು ಜೀವನದರ್ಶನ ಜೊತೆಜೊತೆಯಾಗಿ ಕೀರ್ತನ ಸಾಹಿತ್ಯದಲ್ಲಿ ತಾವು ಪಡೆಯುವುದರಿಂದ ಭಗವಂತ ಮತ್ತು ಭಕ್ತನ ಒಳತೋಟಿಯನ್ನು ಅಂದಿನ ನಂಬಿಕೆಗಳೊಂದಿಗೆ ಸಮೀಕರಿಸಲ್ಪಟ್ಟಿರುವುದು ಸಹಜವೆ. ಹಾಗೆಂದು ಪೂರ್ಣವಾಗಿ ದೈವವಾದಿಗಳಲ್ಲ ; ವಿಧಿಬರಹಕ್ಕೆ ಜೋತು ಬಿದ್ದ ಪಲಾಯನವಾದಿ ಸಿದ್ದಾಂತಿಯೂ ಅಲ್ಲ. ಮನುಷ್ಯಪ್ರಯತ್ನ ಬಹು ಮುಖ್ಯವೆಂದು ಪರಿಭಾವಿಸಿದವರು. ಆದ್ದರಿಂದಲೇ ಕನಕರ ಕೀರ್ತನೆಗಳು ಮರ್ತ್ಯ-ಅಮರ್ತ್ಯರ ಅಂತರಂಗ ಬಹಿರಂಗಗಳನ್ನು, ನೋವು-ನಲಿವುಗಳನ್ನು ವೈಯಕ್ತಿಕ ನಿಲುವುಗಳಿಂದ ವಿಮರ್ಶೆ ಮಾಡುತ್ತವೆ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜನರ ನಡವಳಿಕೆ, ಸಮಾಜದಲ್ಲಿ