ಪುಟ:Kannadigara Karma Kathe.pdf/೧೩೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೧೬
ಕನ್ನಡಿಗರ ಕರ್ಮಕಥೆ
 

೧೩ನೆಯ ಪ್ರಕರಣ

ಸಂಭಾಷಣ

ಇಷ್ಟು ಶಬ್ದಗಳನ್ನು ಆ ತರುಣಿಯು ಅಚ್ಚ ಪಾರಸೀ ಭಾಷೆಯಲ್ಲಿ ತನ್ನ ಸ್ವಾಭಾವಿಕವಾದ ಮಂಜುಲಸ್ವರದಿಂದ, ಆದರೆ ಸಂತಾಪದ ಮೂಲಕ ಅತ್ಯಂತ ತೀವ್ರಸ್ವರದಿಂದ ನುಡಿಯಲು ಅವು ಎಲ್ಲರ ಹೃದಯದಲ್ಲಿ ವಿಷಲಿಪ್ತ ಬಾಣಗಳಂತೆ ನೆಟ್ಟವು. ಎಲ್ಲರು ಬೆರಗಾಗಿ ಭಯದಿಂದ ಆಕೆಯನ್ನು ನೋಡಹತ್ತಿದರು. ರಣಮಸ್ತಖಾನನ ಕಣ್ಣುಗಳಂತು ಪೂರ್ಣವಾಗಿ ಆಕೆಯ ಮುಖ ಮುದ್ರೆಯಲ್ಲಿ ನೆಟ್ಟುಹೋದವು. ಆಕೆಯು ಅತ್ಯಂತ ರೂಪವತಿಯಾಗಿದ್ದಳು. ರಾಮರಾಜನಾದರೂ ಆಕೆಯನ್ನು ಎವೆಯಿಕ್ಕದೆ ನೋಡಹತ್ತಿದನು. ಆ ಸಂತಪ್ತಳಾದ ಸುಂದರಿಯು ಸುಮ್ಮನಾದಕೂಡಲೆ ಆಕೆಯ ವಿಶಾಲವಾದ ನೇತ್ರಗಳಿಂದ ಒಂದೇ ಸಮನೆ ಅಶ್ರುಗಳೂ ಸುರಿಯಹತ್ತಲು, ಅವುಗಳನ್ನು ನೋಡಿ ಜನರ ಮನಸ್ಸಿನ ಸ್ಥಿತಿಯು ಬಹು ಚಮತ್ಕಾರವಾಯಿತು. ರಾಮರಾಜನ ಮನಸ್ಸಿನ ಸ್ಥಿತಿಯಂತು ವಿಲಕ್ಷಣವಾಯಿತು. ಮುಂದೆ ಏನು ಮಾಡಬೇಕೆಂಬುದು ಆತನಿಗೆ ತೋಚಲೊಲ್ಲದು. ಆ ಸ್ತ್ರೀಯು ಕೊಟ್ಟ ಶಾಪವು ತನಗೆ ತಟ್ಟಬಹುದೋ ಎಂಬ ಸಂಶಯವು ಆತನನ್ನು ಬಾಧಿಸಹತ್ತಿತು. ಆಕೆಯು ಶಾಪವನ್ನೇ ಕೊಟ್ಟಳೆಂದು ಆತನು ತಿಳಕೊಂಡನು. ದರ್ಬಾರದೊಳಗಿನ ಬಹು ಜನರು ಹಾಗೆಯೇ ತಿಳಕೊಂಡರು; ಆದರೆ ಈ ಪ್ರಸಂಗದಿಂದ ಹ್ಯಾಗಾದರೂ ಪಾರಾಗಬೇಕೆಂದು ತಿಳಿದು ರಾಮರಾಜನು ರಣಮಸ್ತಖಾನನಿಗೆ- “ಇನ್ನು ನೀವು ಈ ಜನರನ್ನು ನಿಮ್ಮ ಬಿಡಾರಕ್ಕೆ ಕರಕೊಂಡು ಹೋಗಿ, ಇವರನ್ನು ಮುಂದಕ್ಕೆ ಕಳಿಸುವ ವ್ಯವಸ್ಥೆ ಮಾಡಿರಿ. ಸಾಮೋಪಚಾರದಿಂದ ಎಲ್ಲ ಮಾತಿನ ವಿಚಾರಮಾಡಿದ್ದರೆ, ಈ ಮನೆಗೆ ಬರುತ್ತಿದ್ದಿಲ್ಲ.” ಎಂದು ನುಡಿದು, ಆ ತರುಣಿಯನ್ನು ಕುರಿತು, ಆದರೆ ಆಕೆಯ ಕಡೆಗೆ ನೋಡದೆ- “ಇನ್ನು ನೀವು ನಿಮ್ಮ ಬುರುಕಿಯನ್ನು ಹಾಕಿಕೊಂಡು ಇವರ ಸಂಗಡ ಹೋಗಿರಿ. ಇವರು ನಿಮ್ಮನ್ನು ನಿಮ್ಮ ಊರಿಗೆ ಕಳಿಸುವ ವ್ಯವಸ್ಥೆ ಮಾಡುವರು” ಎಂದು ಹೇಳಿದನು. ಆಮೇಲೆ ಅಲ್ಲಿ ಕುಳಿತಿರುವ ಜನರಿಗೆ ಹೊರಟುಹೋಗಲು ಸಂಜ್ಞೆಮಾಡಿ, ತಾನು