ಪುಟ:Kannadigara Karma Kathe.pdf/೧೫೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೪೨
ಕನ್ನಡಿಗರ ಕರ್ಮಕಥೆ
 

ಸಂಸಾರಗೇಡನ್ನು ಇದೇ ದುಷ್ಟನೇ ಇದೇ ಕುಂಜವನದಲ್ಲಿ ಮಾಡಿದನೆಂದು ನಾನು ಕೇಳಿದ್ದೇನೆ ! ಇದರ ಮೇಲಿಂದ ನೋಡುತ್ತಿರಲು, ನಮ್ಮ ಮುಸಲ್ಮಾನ ಜನರಲ್ಲಿ ರಕ್ಷಕರು ಯಾರೂ ಉಳಿಯಲಿಲ್ಲೆಂದು ಅನ್ನಬೇಕಾಗುತ್ತದೆ. ಅಂದ ಬಳಿಕ ನಮ್ಮಂಥ ತರುಣಿಯರು ತಮ್ಮ ಜನ್ಮವನ್ನು ಹೀಗೆಯೇ ಅವಿವಾಹಿತ ಸ್ಥಿತಿಯಲ್ಲಿ ಯಾಕೆ ಕಳೆಯಬಾರದು ? ನಮ್ಮನ್ನು ಹಡೆದವರು ನಮ್ಮ ಲಗ್ನವನ್ನು ಯಾಕೆ ಮಾಡಿಕೊಡಬೇಕು ? ನಮ್ಮ ಗಂಡಂದಿರು, ತಮ್ಮ ಹೆಂಡಿರೆಂದು ನಮ್ಮನ್ನು ಯಾಕೆ ಕರೆಯಬೇಕು ? ಮೈಯಲ್ಲಿ ಸಾಮರ್ಥ್ಯವಿದ್ದರೆ ನಾವು ನಮ್ಮ ಸಂರಕ್ಷಣವನ್ನು ಮಾಡಿಕೊಳ್ಳತಕ್ಕದ್ದು. ಇಲ್ಲದಿದ್ದರೆ ಭಾವಿಕೆರೆಗಳ ಪಾಲಾಗತಕ್ಕದ್ದು ! ಅದೂ ಆಗದಿದ್ದರೆ, ಆ ದುಷ್ಟ ರಾಮರಾಜನ ರಾಣೀ ವಾಸವನ್ನು ಸೇರತಕ್ಕದ್ದು ! ನಾನಂತು ಹೀಗೆಯೇ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ನಾನು ಸರ್ವಥಾ ವಿವಾಹ ಮಾಡಿಕೊಳ್ಳುವದಿಲ್ಲ; ಯಾಕೆಂದರೆ, ತಮ್ಮ ಹೆಂಡಿರ ಮರ್ಯಾದೆಯನ್ನು ರಕ್ಷಿಸಿಕೊಳ್ಳುವ ಸಾಮರ್ಥವು ಮುಸಲ್ಮಾನ ಪುರುಷರಲ್ಲಿ ಉಳಿದಿರುವುದಿಲ್ಲ ! ದೇಶಾಂತರಕ್ಕೆ ತೆರಳಬೇಕಂತಲೂ ನನ್ನ ಮನಸ್ಸಿನಲ್ಲಿ ಮಾಡಿದ್ದೇನೆ. ಇದೇ ನನ್ನ ನಿರ್ಧಾರವು ; ಇದೇ ನನ್ನ ಪ್ರತಿಜ್ಞೆಯು, ನಾನು ಯಃಕಶ್ಚಿತ ಸ್ತ್ರೀಯಾಗಿದ್ದರೂ ನನ್ನಂಥ ತರುಣಿಯರಿಗೆ ನಾನು ಇದೇ ಮಾತನ್ನು ಉಪದೇಶಿಸುವೆನು. ಇನ್ನು ನಾನು ನನ್ನಷ್ಟಕ್ಕೆ ಸ್ವತಂತ್ರಳಾದೆನು. ನನ್ನ ದಾನ ಮಾಡಲಿಕ್ಕೆ ನನ್ನ ತಂದೆಯು ಮಾಲಕನಲ್ಲ, ನನ್ನ ದಾನ ತಕ್ಕೊಳ್ಳಲಿಕ್ಕೆ ಯಾವ ಪುರುಷನೂ ಸಮರ್ಥನಲ್ಲ. ದಾನ ತಕ್ಕೊಳ್ಳುವವನಲ್ಲಿಯಾದರೂ ದತ್ತ ವಸ್ತುವಿನ ಸಂರಕ್ಷಣ ಮಾಡುವ ಸಾಮರ್ಥ್ಯವಿರಬೇಕಾಗುತ್ತದಲ್ಲವೆ ?

ಆಯಿತು, ನೂರಜಹಾನಳ ಮಾತುಗಳ ಪರಮಾವಧಿಯಾಯಿತು. ಪ್ರಯತ್ನಪೂರ್ವಕವಾಗಿ ಒಟ್ಟುಗೂಡಿಸಿದ ಆಕೆಯ ಧೈರ್ಯವೆಲ್ಲ ಲುಪ್ತವಾಗಿ ಹೋಗಿ ಗಿಡದ ಬೊಡ್ಡೆಗೆ ಆತು ನಿಲ್ಲುವಷ್ಟು ಅವಕಾಶವೂ ಆಕೆಯಲ್ಲಿ ಈಗ ಉಳಿಯಲಿಲ್ಲ. ಆಕೆಯು ಹಾಗೆಯೇ ನೆಲಕ್ಕೆ ಕುಳಿತಳು. ಆಕೆ ಮೂರ್ಛಿತಳಾಗಿ ಬೀಳುವ ಹಾಗೆ ತೋರಿತು. ಆದರೆ ಆಕೆಯನ್ನು ಹಿಡಿಯಬೇಕೆಂಬ ಎಚ್ಚರವೂ ರಣಮಸ್ತಖಾನನಿಗೆ ಉಳಿದಿದ್ದಿಲ್ಲ. ನೂರಜಹಾನಳ ಮಾತಿನ ಪೆಟ್ಟುಗಳಿಂದ ಆತನು ತೀರ ಶೂನ್ಯಚಿತ್ತನಾಗಿದ್ದನು. ಆತನಿಗೆ ಬಧಿರತ್ವವು ಪ್ರಾಪ್ತವಾದಂತಾಗಿತ್ತು. ಆಕೆಯ ಪ್ರತಿಯೊಂದು ಶಬ್ದವು ಕಾದಸೀಸದ ರಸದಂತೆ ಆತನ ಕಿವಿಯೊಳಗಿಂದ ಹಾದುಹೋಗಿ ಆತನ ಹೃದಯದಲ್ಲಿ ತುಂಬಿಕೊಂಡಿತ್ತು ! ಅದರಿಂದ ಆತನ ಮೈಮೇಲಿನ ಎಚ್ಚರವು ತಪ್ಪಿತ್ತು. ತಾನಾಡುವ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ