ಪುಟ:Kannadigara Karma Kathe.pdf/೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕನ್ನಡಿಗರ ಕರ್ಮಕಥೆ
 

ಸನ್ಮಾನಾರ್ಥವಾಗಿ ಕಟ್ಟಿಸಿದ ನಾಗಲಾಪುರವೆಂಬುದು, ಈಗ ಹೊಸಪೇಟೆ ಎಂಬ ಹೆಸರಿನಿಂದ ಪ್ರಸಿದ್ದವಾಗಿರುತ್ತದೆ. ತೆನ್ನಾಲಿರಾಮಕೃಷ್ಣನೆಂಬ ವಿನೋದ ಸ್ವಭಾವದ ರಸಿಕ ವ್ಯಕ್ತಿಯ ಮನೋಹರಿಕಥೆಗಳಿಗೆ ಈ ಕೃಷ್ಣದೇವರಾಯನ ಸಂಬಂಧವಿರುತ್ತದೆಂಬುದನ್ನು ಬಹುಜನ ವಾಚಕರು ಅರಿತಿರಬಹುದು, ಒಟ್ಟಿಗೆ ಕೃಷ್ಣದೇವರಾಯನ ಕಾಲವು ಸರ್ವಾಂಗಸುಂದರವೂ ಬಲಿಷ್ಠವೂ ಕನ್ನಡಿಗರ ಅಭಿಮಾನಾಸ್ಪದವೂ, ಆಗಿತ್ತೆಂದು ನಿರ್ಬಾಧವಾಗಿ ಹೇಳಬಹುದು ; ಆದರೆ ನಿರ್ದೋಷವಾದದ್ದು ಜಗತ್ತಿನಲ್ಲಿ ಯಾವದಿರುತ್ತದೆ ? ಅದರಂತೆ ಆಗಿನ ವಿಜಯನಗರದ ರಾಜ್ಯಕ್ಕೆ ಅಹಂಕಾರದ ಬಾಧೆಯು ತಟ್ಟಿ, ಅದು ಮುಸಲ್ಮಾನರ ಮನಸ್ತಾಪದ ಪ್ರಖರತೆಯಲ್ಲಿ ತನ್ನ ಸರ್ವಸ್ವದ ನಾಶಮಾಡಿಕೊಳ್ಳುವ ಹಾದಿಯನ್ನು ಹಿಡಿದಿತ್ತೆಂದು ದುಃಖದಿಂದ ಹೇಳಬೇಕಾಗುವುದು !

ಕೃಷ್ಣದೇವರಾಯನ ಕಾಲದಲ್ಲಿ ಹಿಂದೂ ಸರದಾರರ ವರ್ಚಸ್ಸು ವಿಶೇಷವಾಗಿತ್ತು. ರಾಜ್ಯದ ನಿಜವಾದ ಅಧಿಕಾರವು ಸರದಾರರ ಕೈಯಲ್ಲಿಯೇ ಇತ್ತೆಂದು ಹೇಳಬಹುದು. ಬಹುಜನ ಸರದಾರರು. ಅರಸನಿಗೆ ಗೊತ್ತಾಗದಂತೆ ಮನಸೋಕ್ತವಾಗಿ ಆಚರಿಸುತ್ತಲಿದ್ದರು. ಹೀಗಿರುವಾಗ, ರಾಮರಾಜನೆಂಬ ಮಹಾ ಪ್ರತಾಪಿಯಾದ ಸರದಾರನು, ಬೇಟೆಗಾಗಿ ಮುದಗಲ್ಲಿನ ಹತ್ತಿರದ ಅರಣ್ಯವನ್ನು ಕುರಿತು ಸಾಗಿದ್ದನು. ಆಗ ವೈಶಾಖ ಮಾಸದ ಕೃಷ್ಣಪಕ್ಷವು ಮುಗಿದು, ಅದೇ ಜ್ಯೇಷ್ಠಮಾಸಕ್ಕೆ ಆರಂಭವಾಗಿತ್ತು. ಮುಂಗಾರಿನ ಕಪ್ಪು ಮೋಡವು ಕವಿದು, ಗುಡುಗು ಮಿಂಚುಗಳು ಮಳೆಯ ಅಬ್ಬರವನ್ನು ಸೂಚಿಸುತ್ತಲಿದ್ದವು. ಹೊರಗೆ ಮೂರು ತಾಸು ಹೊತ್ತು ಉಳಿದಿತ್ತು. ಒಕ್ಕಲಿಗರು ಮುಗಿಲ ಕಡೆಗೆ ಆನಂದದಿಂದ ನೋಡುತ್ತ, ಮಳೆ ಬಂದರೂ ಬರಲಿ, ಆದಷ್ಟು ತಮ್ಮ ಹೊಲಗೆಲಸವನ್ನು ತೀರಿಸಿಕೊಳ್ಳಬೇಕೆಂದು ಆತುರಪಡುತ್ತ, ಎತ್ತುಗಳನ್ನು ಬೆದರಿಸುತ್ತಲಿದ್ದರು. ಕೆಲವರು ಹೊಲಕ್ಕೆ ಗೊಬ್ಬರವನ್ನು ಬೇಗ ಬೇಗ ಕಡಿಯುತ್ತಲಿದ್ದರು. ಒತ್ತರದಿಂದ ಬೀಸುವ ತಂಗಾಳಿಯ ಸೋಂಕಿನಿಂದ ಹಾದಿಕಾರರಿಗೆ ಸುಖವಾಗುತ್ತಿತ್ತು. ತಾವು ತೋಯಿಸಿಕೊಂಡೇನೆಂಬ ಭಯದಿಂದ ಮುಗಿಲುನೋಡುತ್ತ ಲಗುಲಗು ನಡೆಯುತ್ತಲಿದ್ದರು. ಮೋಡಗಳು ಕವಿದದ್ದರಿಂದ ಸೂರ್ಯದರ್ಶನಕ್ಕೆ ಆಸ್ಪದವಿಲ್ಲದಾಯಿತು. ಈ ಮೊದಲು ಪೆಟ್ಟಿನ ಮೇಲೆ ಪೆಟ್ಟು ಎರಡು ಮೂರು ಮುಂಗಾರಿಯ ದೊಡ್ಡ ಮಳೆಗಳಾದದ್ದರಿಂದ, ಹೊಲಕ್ಕೆ ಹದಬಿದ್ದು ಹಾದಿಬಟ್ಟೆಗಳ ಹಚ್ಚಗಾಗುತ್ತಲಿದ್ದವು. ತಗ್ಗುಗಳಲ್ಲಿ ನೀರುತುಂಬಿ ಹಳ್ಳಕೊಳ್ಳಗಳಲ್ಲಿ ನೀರು ಸರವುಗಟ್ಟಿ ಹರಿಯುತ್ತಿದ್ದದ್ದರಿಂದ, ಮಳೆಗಾಲವು ದಿವ್ಯಾಲಂಕಾರಗಳನ್ನಿಟ್ಟು ಕೊಟ್ಟಂತೆ ಆಗಿತ್ತು. ಬರಬರುತ್ತ ಗಾಳಿಯು ಒತ್ತರವಾಯಿತು.