ಕುಂಜವನಕ್ಕೆ ಬಂದಬಳಿಕ ರಾಮರಾಜನ ಮನಸ್ಸು ಪುಷ್ಕರಣಿಯ ಕಡೆಗೆ ಎಳೆಯತಕ್ಕದ್ದೇ ಎಂಬುದು ಗೊತ್ತಾಗಿಹೋಗಿತ್ತು. ಆ ಪುಷ್ಕರಣಿಯ ದಂಡೆಯಲ್ಲಿ ಆತನು ತಾರುಣ್ಯದಲ್ಲಿ ಹಲವು ಸುಖಗಳನ್ನು ಭೋಗಿಸಿದ್ದರಿಂದಾಗಲಿ, ಪುಷ್ಕರಣಿಯಲ್ಲಿ ಅಂಥ ವಿಲಕ್ಷಣವಾದ ಆಕರ್ಷಣ ಶಕ್ತಿಯಿದ್ದದ್ದರಿಂದಾಗಲಿ ರಾಮರಾಜನು ಈವರೆಗೆ ಕುಂಜವನಕ್ಕೆ ಹೋದಾಗಲೆಲ್ಲ ಪುಷ್ಕರಣಿಗೆ ಹೋಗಿಯೇ ತೀರಿದ್ದನು. ಅದರಲ್ಲಿ ಈ ದಿನ ಹುಣ್ಣಿಮೆಯ ರಾತ್ರಿಯು. ಹಿಟ್ಟು ಚಲ್ಲಿದ ಹಾಗೆ ಬೆಳದಿಂಗಳು ಬಿದ್ದಿತ್ತು. ಹವೆಯು ಸ್ತಬ್ಧವಾಗಿತ್ತು. ಗಿಡದ ಎಲೆಗಳು ಮಿಸುಕುತ್ತಿದ್ದಿಲ್ಲ. ಪುಷ್ಕರಣಿಯ ಸ್ತಬ್ದವಾದ ಶುಭ್ರಜಲದಲ್ಲಿ ಒಂದಾದರೂ ತರಂಗವು ಕಣ್ಣಿಗೆ ಬೀಳುತ್ತಿದ್ದಿಲ್ಲ. ಆಕಾಶದಲ್ಲಿ ತಾರೆಗಳು ಚಂದ್ರಪ್ರಕಾಶದ ಯೋಗದಿಂದ ರಾಮರಾಜನ ಮೋಹವು ಮತ್ತಷ್ಟು ಹೆಚ್ಚಿತು. ಈ ಹೆಚ್ಚಿದ ಮೋಹದಲ್ಲಿ ಮೆಹರ್ಜಾನಳ ಅಪ್ರಾಪ್ತ ಸ್ಥಿತಿಯ ಯೋಗದಿಂದ ಉಂಟಾಗಿದ್ದ ಅಸಮಾಧಾನವು ಬೆರೆತು ಆತನಿಗೆ ಏನೂ ತೋಚದೆ ಆತನು ಪರಾಧೀನನಂತೆ ಪುಷ್ಕರಣಿಯ ದಂಡೆಯಲ್ಲಿ ಸಂಚರಿಸುತ್ತಿದ್ದನು. ತನ್ನನ್ನು ಕುಂಜವನದ ಕಾವಲುಗಾರನು ಹುಡುಕಬಹುದೆಂಬ ಎಚ್ಚರವು ಆತನಿಗೆ ಉಳಿದಿದ್ದಿಲ್ಲ. ಮೆಹರ್ಜಾನಳು ಏನು ಅಂದಾಳೆಂಬದನ್ನು ತಿಳಕೊಳ್ಳುವದಕ್ಕಾಗಿ ಆತನು ಬಾಗಿಲು ಕಾಯುತ್ತ ಇರುವುದನ್ನು ಬಿಟ್ಟು, ಪುಷ್ಕರಣಿಯ ಕಡೆಗೆ ಹೊರಟು ಬಂದುಬಿಟ್ಟಿದ್ದನು. ಪುಷ್ಕರಣಿಯ ದಂಡೆಯಲ್ಲಿರುವಾಗ ಮೆಹರ್ಜಾನಳಿಗೆ ಸಂಬಂಧಸಿದ ತನ್ನ ಹಿಂದಿನ ಮನೋಹರವಾದ ಇತಿಹಾಸವನ್ನು ಸ್ಮರಿಸುತ್ತ ಸ್ಮರಿಸುತ್ತ ಒಂದು ವೃಕ್ಷದ ಬುಡಕ್ಕೆ ಬಂದನು. ಅಲ್ಲಿಗೆ ಬಂದಕೂಡಲೆ ಆತನಿಗೆ ಏನೋ ನೆನಪಾದಂತಾಗಿ ಆತನು ಸ್ತಬ್ಧವಾಗಿ ನಿಂತುಕೊಂಡನು. ಹಿಂದಕ್ಕೆ ಮೂವತ್ತು ವರ್ಷಗಳ ಹಿಂದೆ ಆತನು ಅದೇ ಮರದ ಬುಡದಲ್ಲಿ ನಿಂತುಕೊಂಡು, ಮೆಹರ್ಜಾನಳು ಪುಷ್ಕರಣಿಯೊಳಗಿನ ನೌಕೆಯಲ್ಲಿ ಕುಳಿತು ಹಾಡುವ ಮನೋಹರ ಗಾಯನವನ್ನು ಕೇಳಿ, ತಾನು ಆ ಗಾಯನಕ್ಕೆ ಪ್ರತ್ಯುತ್ತರವಾಗಿ ಅದೇ ಮರದ ಬುಡದಲ್ಲಿ ನಿಂತು ಸಂಸ್ಕೃತ ಅಷ್ಟಪದಿಯನ್ನು ಅಂದಿದ್ದನು. ಆ ಸುಖಮಯ ಪ್ರಸಂಗದ ಚಿತ್ರವು ಈಗ ರಾಮರಾಜನ ಕಣ್ಣಿಗೆ ಕಟ್ಟಿತ್ತು. ಹೀಗೆ ಚಿತ್ರವು ಕಣ್ಣಿಗೆ ಕಟ್ಟಿರುವಾಗ ತಾನು ಪ್ರತ್ಯಕ್ಷ ಆ ಸುಖವನ್ನು ಭೋಗಿಸುವಂತೆ ಆತನಿಗೆ ಭಾಸವಾಯಿತು. ಹೀಗೆ ಸುಖವನ್ನು ಅನುಭವಿಸುತ್ತಿರುವಾಗ ಆತನ ಕಣ್ಣುಗಳಲ್ಲಿ ಒಮ್ಮೆಲೆ ನೀರು ತುಂಬಿದವು. ಬರಬರುತ್ತ ಆತನ ಕಣ್ಣೊಳಗಿಂದ ನೀರು ಧಾರಾಳವಾಗಿ ಸುರಿಯಹತ್ತಿದವು; ಮುಂದೆ ಆ ಕಣ್ಣೀರು ಸುರಿಯುವದು ನಿಂತು ಆತನ ಎದೆಯು ಧಸಕ್ಕೆಂದಿತು. ಮೆಹರ್ಜಾನಳೂ, ಆತನೂ ಪುಷ್ಕರಣಿಯ ಮಧ್ಯದಲ್ಲಿದ್ದ ಧ್ವಜಸ್ತಂಭದತ್ತ ಕಡೆಯಿಂದ ನೌಕೆಯಲ್ಲಿ
ಪುಟ:Kannadigara Karma Kathe.pdf/೨೩೦
ಗೋಚರ