ಪುಟ:Kannadigara Karma Kathe.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶಾಭಂಗ

೨೫೧


ರಾಮರಾಜ-ಇನ್ನು ಮೇಲೆ ನಾನೇ ರಣಮಸ್ತಖಾನನಿಗೆ ಅವನ ಜನ್ಮ ವೃತ್ತಾಂತವನ್ನು ಹೇಳುವೆನು.

ಲೈಲಿ-ಏನೂ ಚಿಂತೆಯಿಲ್ಲ. ಅವಶ್ಯವಾಗಿ ಹೇಳಿರಿ. ಅದನ್ನು ಕೇಳಿ ಆತನಿಗೆ ಆನಂದವಾದರೆ ನೆಟ್ಟಗೇ ಆಯಿತು. ಮಾಸಾಹೇಬರಿಗೊ, ಆತನಿಗೂ ಇನ್ನು ಯಾವ ಸಂಬಂಧವೂ ಉಳಿದಿರುವದಿಲ್ಲ. ತಮ್ಮ ಮಗನು ಸ್ವಾಮಿ ದ್ರೋಹಿಯಾದದ್ದರಿಂದ, ಆತನು ತಮ್ಮ ಪಾಲಿಗೆ ಸತ್ತನೆಂದ ಮಾಸಾಹೇಬರು ತಿಳಕೊಂಡಿರುವರು.

ಮುದುಕಿಯು ಯಾವುದಕ್ಕೂ ಗುಟ್ಟುಕೊಡುವದಿಲ್ಲೆಂಬ ಮಾತು ರಾಮರಾಜನಿಗೆ ಗಟ್ಟಿಮುಟ್ಟಿ ಗೊತ್ತಾಯಿತು. ಇನ್ನು ಹೆಚ್ಚು ಅಲೆದಾಡುವದರಲ್ಲಿ ಅರ್ಥವಿಲ್ಲೆಂದು ತಿಳಿದು, ಅಲ್ಲಿಂದ ಹೊರಟುಹೋಗಬೇಕೆಂದು ಆತನು ನಿಶ್ಚಯಿಸಿದನು. ಇಷ್ಟು ಪ್ರಯತ್ನ ಮಾಡಿದರೂ ತನ್ನ ಕೋರಿಕೆಯು ಕೈಗೂಡದ್ದರಿಂದ, ಆತನಗೆ ಬಹು ವಿಷಾದವಾಯಿತು. ಆತನಿಗೆ ಆ ಸ್ಥಾನವನ್ನು ಬೇಗನೇ ಬೀಡಲಿಕ್ಕೆ ಬೇರೆ ಕಾರಣಗಳೂ ಒದಗಿದವು. ಯುದ್ಧ ಪ್ರಸಂಗವಿರಲು, ವೈರಿಗಳ ಕಡೆಯ ಸುದ್ದಿಗಳನ್ನು ತಿಳಿಕೊಂಡು ಬರುವದಕ್ಕಾಗಿ ವಿಜಯನಗರದ ಗುಪ್ತಚಾರರು ಅಲ್ಲಲ್ಲಿ ತಿರುಗುತ್ತಿದ್ದರಷ್ಟೇ. ಅವರಲ್ಲಿ ಒಬ್ಬನು ವಿಜಾಪುರದ ಕಡೆಯಿಂದ ಅವಸರದಿಂದ ಬಂದು, ರಾಮರಾಜನಿಗೆ ಬೇಗನೆ ಸುದ್ದಿಯನ್ನು ಮುಟ್ಟಿಸಬೇಕೆಂದು ವಿಜಯನಗರಕ್ಕೆ ಹೋಗಿದ್ದನು. ಆದರೆ ರಾಮರಾಜನು ಕುಂಜವನದಲ್ಲಿರುವನೆಂಬದು ಗೊತ್ತಾದ್ದರಿಂದ ಆ ಸೇವಕನು ಕುಂಜವನಕ್ಕೆ ಬಂದು, ರಾಮರಾಜನಿಗೆ ತಾನು ಬಂದಿರುವ ಸುದ್ದಿಯನ್ನು ಹೇಳಿಕಳಿಸಿದನು. ಆಗ ರಾಮರಾಜನು ಆತನನ್ನು ಕರೆಸಿಕೊಂಡು, ಹೊಸ ಸುದ್ದಿಯೇನೆಂದು ಕೇಳಲು, ಸೇವಕನು- ಮಹಾರಾಜರೇ, ಶತ್ರುಗಳು ಮೂವರಿದ್ದವರು ನಾಲ್ವರಾದರು. ಹುಸೇನಶಹನು ಉಳಿದ ಮೂರು ಬಾದಶಹರನ್ನು ಕೂಡಕೊಳ್ಳುವನೋ, ಇಲ್ಲವೋ ಎಂಬದು ಈ ವರೆಗೆ ಅನುಮಾನಪಕ್ಷವಾಗಿತ್ತು; ಆದರೆ ಆತನೂ ಈಗ ಕೂಡಿಕೊಂಡನು. ಆತನು ತನ್ನ ಸೈನ್ಯದೊಡನೆ ಹೊರಟಿರುವನು. ಇಷ್ಟು ಹೊತ್ತಿಗೆ ಆತನು ಅರ್ಧಹಾದಿಗೆ ಸಹ ಬಂದಿರಬಹುದು ಎಂದು ಹೇಳಿದನು. ಇದನ್ನು ಕೇಳಿದಕೂಡಲೆ ರಾಮರಾಜನು ಮನಸ್ಸಿನಲ್ಲಿ ಬೆದರಿದರೂ, ಹೊರಗೆ ಅದರ ಲಕ್ಷಣ ತೋರುಗೊಡದೆ-ಇದೇ ಏನು ನಿನ್ನ ಮಹತ್ವದ ಸುದ್ದಿಯು ! ಯಾವ ಶಹನು ಕೂಡಿ ನಮ್ಮನ್ನೇನು ಮಾಡುವನು ? ಎಲ್ಲಾ ಶಹರೂ ಒಟ್ಟುಗೂಡಿ ಒಮ್ಮೆಲೇ ನಮ್ಮಮೇಲೆ ಸಾಗಿ ಬಂದುಬಿಡಲಿ. ಅಂದರೆ ಅವರೆಲ್ಲರಿಗೆ ಒಮ್ಮೆ ಚೆನ್ನಾಗಿ ಕೈತೋರಿಸಿಬಿಡೋಣ. ಮುಸಲ್ಮಾನರ